ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಸಂಘಟನೆಗಳು ಸಮಾಜಮುಖಿ ಕೆಲಸ ಮಾಡಬೇಕು ಎಂದು ಮೈಸೂರು ಮಾಜಿ ನಗರ ಪಾಲಿಕೆ ಸದಸ್ಯ ಹಾಗೂ ತಾಲೂಕು ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ಹೇಳಿದರು.ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ 500 ವರ್ಷಗಳ ಹಿಂದೆ ಕಟ್ಟಿದ ಬೆಂಗಳೂರು ಇಂದು ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಬೆಂಗಳೂರು ಹಾಗೂ ನಮ್ಮ ರಾಜ್ಯದ ಬೆಳವಣಿಗೆಗೆ ಕೆಂಪೇಗೌಡರ ಕೊಡುಗೆ ಅಪಾರ ಎಂದರು.
ಪಿರಿಯಾಪಟ್ಟಣದಲ್ಲಿ ಇಂದು ಒಕ್ಕಲಿಗರ ಸಂಘದ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ. ಒಕ್ಕಲಿಗ ಸಮುದಾಯ ಎಲ್ಲಾರಿಗೂ ನ್ಯಾಯ ಒದಗಿಸುವ ಸಮುದಾಯ. ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಬೆಳವಣಿಗೆಗೆ ಶ್ರಮಿಸುವುದು ಸಂಘಟನೆಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಲಿ. ಇಂದು ಪ್ರಾರಂಭವಾಗಿರುವ ಒಕ್ಕಲಿಗರ ಸಂಘವು ಯಶಸ್ಸುಗಳಿಸಲಿ. ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.ಒಕ್ಕಲಿಗ ಸಮಾಜದ ಸರ್ವೋತೋಮುಖ ಬೆಳವಣಿಗೆಯಾಗಬೇಕು ಎನ್ನುವ ಉದ್ದೇಶದಿಂದ ಪಿರಿಯಾಪಟ್ಟಣದಲ್ಲಿ ತಾಲೂಕು ಒಕ್ಕಲಿಗರ ಸಂಘವನ್ನು ಪ್ರಾರಂಭಿಸಲಾಗಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು. ಆ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತದೆ ಎಂದು ಹೇಳಿದರು.
ನಮ್ಮ ರಾಜ್ಯ ಇಷ್ಟು ಅಭಿವೃದ್ಧಿ ಹೊಂದಲು ನಾಡಪ್ರಭು ಕೆಂಪೇಗೌಡರ ಆಡಳಿತ ಹಾಗೂ ಅವರ ಆರ್ಥಿಕ ನೀತಿಗಳು ಕಾರಣ ಎಂದರೆ ತಪ್ಪಾಗಲಾರದು. ಅವರ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಆಗ ಸಮುದಾಯಗಳು ಬೆಳವಣಿಗೆ ಹೊಂದುತ್ತವೆ. ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಎಲ್ಲಾರೂ ಸಮುದಾಯದ ಬೆಳವಣಿಗೆಗಾಗಿ ದುಡಿಯಬೇಕು ಎಂದು ಹೇಳಿದರು.ಈ ವೇಳೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ, ಉಪಾಧ್ಯಕ್ಷ ಚಂದ್ರೆಗೌಡ, ಜಗದೀಶ್, ಕಾನೂನು ಸಲಹೆಗಾರ ಕೆ.ಡಿ. ಸಂದೀಪ್, ಕಾರ್ಯದರ್ಶಿ ಮೋಹನ್, ಖಜಾಂಚಿ ಮನು, ನಿರ್ದೇಶಕರಾದ ಗಣೇಶ್, ರಾಜೇಶ್, ಅನಿಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.