ಮೊಳೆಕೊಪ್ಪಲು ಕೂಸಿನ ಮನೆ ಅನಾಥ..!

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ಮಂಡ್ಯ ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿರುವ ಕೂಸಿನ ಮನೆ ಅನಾಥವಾಗಿದೆ. ನೆಪಮಾತ್ರಷ್ಟೇ ಮನೆ ಬಾಗಿಲು ತೆರೆದಿದ್ದರೂ ಒಳಗೆ ಮಕ್ಕಳೂ ಇಲ್ಲ, ಸಿಬ್ಬಂದಿಯೂ ಇಲ್ಲ. ಮಕ್ಕಳನ್ನು ಕೂಸಿನಮನೆಯತ್ತ ಸೆಳೆಯುವಂತೆ ಮಾಡುವಲ್ಲಿ ಸ್ಥಳೀಯ ಇಂಡುವಾಳು ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿರುವ ಕೂಸಿನ ಮನೆ ಅನಾಥವಾಗಿದೆ. ನೆಪಮಾತ್ರಷ್ಟೇ ಮನೆ ಬಾಗಿಲು ತೆರೆದಿದ್ದರೂ ಒಳಗೆ ಮಕ್ಕಳೂ ಇಲ್ಲ, ಸಿಬ್ಬಂದಿಯೂ ಇಲ್ಲ. ಮಕ್ಕಳನ್ನು ಕೂಸಿನಮನೆಯತ್ತ ಸೆಳೆಯುವಂತೆ ಮಾಡುವಲ್ಲಿ ಸ್ಥಳೀಯ ಇಂಡುವಾಳು ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ.

ಇಂಡುವಾಳು ಗ್ರಾಪಂ ವ್ಯಾಪ್ತಿಗೆ ಮೊಳೆಕೊಪ್ಪಲು, ಕಿರಗಂದೂರು ಸೇರಿದಂತೆ ನಾಲ್ಕೈದು ಗ್ರಾಮಗಳು ಸೇರುತ್ತಿವೆ. ಆದರೆ, ಈ ಗ್ರಾಮಗಳಿಂದ ಮಕ್ಕಳನ್ನು ಕೂಸಿನಮನೆಯತ್ತ ಸೆಳೆಯುವಲ್ಲಿ ಪಂಚಾಯ್ತಿ ವಿಫಲವಾಗಿದೆ. ಹೀಗಾಗಿ ಯಾವೊಂದು ಮಗುವೂ ಕೂಸಿನಮನೆಯತ್ತ ಮುಖ ಮಾಡದಂತಹ ಪರಿಸ್ಥಿತಿ ಎದುರಾಗಿದೆ.

ಮಕ್ಕಳು ಬರುತ್ತಿಲ್ಲ:

ಕೂಸಿನ ಮನೆಯಲ್ಲಿ ಸಿಲಿಂಡರ್ ಇಲ್ಲ, ಫುಡ್‌ಕೊಟ್ಟಿಲ್ಲ, ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಹೀಗಾಗಿ ಕೂಸಿನ ಮನೆಗೆ ಯಾವ ಮಕ್ಕಳೂ, ಸಿಬ್ಬಂದಿ ಬರುತ್ತಿಲ್ಲವೆಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಪಂಚಾಯ್ತಿ ಪಿಡಿಒ ಕೂಸಿನ ಮನೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ಅವರು ಮೊಬೈಲ್ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೂಸಿನಮನೆಯತ್ತಲೂ ತಿರುಗಿನೋಡುತ್ತಿಲ್ಲವೆಂದು ನೇರವಾಗಿ ದೂರಿದರು.

ನಿಯಮಬಾಹೀರ ರಜೆ:

ಕೆಲವೊಂದು ಗ್ರಾಪಂಗಳು ಮಾದರಿಯಾಗುವ ರೀತಿಯಲ್ಲಿ ಕೂಸಿನ ಮನೆಯ ಅಂದ ಹೆಚ್ಚಿಸಿ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮೊಳೆಕೊಪ್ಪಲು ಗ್ರಾಮದ ಕೂಸಿನ ಮನೆ ಸರ್ಕಾರಿ ಶಾಲೆಯೊಂದರಲ್ಲಿ ನಡೆಯುತ್ತಿದೆ. ಅಡುಗೆ ಸಿಲಿಂಡರ್ ಇಲ್ಲವೆಂದು ೧೫ ದಿನ, ಆಹಾರ ನೀಡಿಲ್ಲವೆಂದು ಒಂದು ವಾರ, ಗ್ರಾಮದಲ್ಲಿ ನಡೆದ ಕಾಳಮ್ಮನ ಹಬ್ಬಕ್ಕೆ ೧ ತಿಂಗಳು ಹೀಗೆ ನಿಯಮಬಾಹೀರವಾಗಿ ಕೂಸಿನ ಮನೆಗೆ ಮೂರು ತಿಂಗಳಿನಿಂದ ಬಾಗಿಲು ಹಾಕಿದ್ದಾರೆ. ಪಂಚಾಯ್ತಿ ಮತ್ತು ಕೇರ್‌ಟೇಕರ್ಸ್‌ಗಳ ನಡವಳಿಕೆಯಿಂದ ಈಗ ಕೂಸಿನ ಮನೆಗೆ ಯಾವೊಂದು ಮಗುವೂ ಬಾರದಂತಾಗಿದೆ.

ಖರ್ಚು-ವೆಚ್ಚಗಳ ಲೆಕ್ಕವಿಲ್ಲ:

ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ೩ ವರ್ಷದೊಳಗಿನ ಮಕ್ಕಳಿಗಾಗಿ ಕೂಸಿನ ಮನೆಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಸರ್ಕಾರ ನಿಯಮಾವಳಿಯಲ್ಲಿ ರೂಪಿಸಿರುವಂತೆ ಕೂಸಿನಮನೆ ಸ್ಥಾಪನೆಗೆ ಆರಂಭಿಕ ವೆಚ್ಚ ೩೫ ಸಾವಿರ ರು. ಖರ್ಚು ಮಾಡಬೇಕಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ೩೦ ಸಾವಿರ ರು. ವ್ಯಯಿಸಬೇಕಿದೆ. ಈ ಅನುದಾನಕ್ಕಿಂತ ಕಡಿಮೆ ಅನುದಾನ ಬಳಸುವಂತಿಲ್ಲ. ಕೂಸಿನ ಮನೆ ಮಕ್ಕಳ ಉಪಯೋಗಕ್ಕಾಗಿ ವರ್ಷಕ್ಕೆ ಒಂದು ಬಾರಿ ಆಟಿಕೆ ಸಾಮಗ್ರಿಗಳ ಖರೀದಿಗೆ ೫೦೦೦ ರು. ಬಳಸಬೇಕಿದೆ. ಪೌಷ್ಠಿಕ ಆಹಾರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸ್ವಚ್ಛತಾ ಸಾಮಗ್ರಿ, ಕಲಿಕಾ ಸಾಮಗ್ರಿಗಳು, ಸಮುದಾಯ ಭಾಗವಹಿಸುವಿಕೆ, ಪೋಷಕರ ಸಭೆ, ಉಸ್ತುವಾರಿ ಮತ್ತು ಮೇಲ್ವಿಚಾರಣೆಗೆ ವಾರ್ಷಿಕ ೫೭,೬೮೦ ರು. ಖರ್ಚು ಮಾಡಬೇಕಿದೆ. ಇಂತಹ ಯಾವುದೇ ಸೌಲಭ್ಯ ಮೊಳೆಕೊಪ್ಪಲು ಕೂಸಿನ ಮನೆಯಲ್ಲಿ ಕಾಣಲಾಗುತ್ತಿಲ್ಲ. ಆದರೆ, ಈ ಹಣಕಾಸಿನ ಖರ್ಚು-ವೆಚ್ಚಗಳ ಯಾವುದೇ ಲೆಕ್ಕಗಳಿಲ್ಲ.

ಸರ್ಕಾರಿ ಶಾಲೆ ಶೌಚಾಲಯಕ್ಕೆ ಹೆಸರು:

ಕೂಸಿನ ಮನೆಗೆ ದಾಖಲಾಗುವ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸದ ಇಂಡುವಾಳು ಸರ್ಕಾರಿ ಶಾಲೆಗೆ ಸೇರಿದ ಶೌಚಾಲಯಕ್ಕೆ ಕೂಸಿನ ಮನೆ ಶೌಚಾಲಯವೆಂದು ಬರೆಸಲಾಗಿದೆ. ಕೂಸಿನ ಮನೆಯೊಳಗೆ ಹರಿದ ಚಾಪೆಗಳಿವೆ. ಆಹಾರ ಪದಾರ್ಥಗಳಿಲ್ಲದೆ, ಸಿಲಿಂಡರ್ ಇಲ್ಲದೆ ಅಡುಗೆ ಮನೆ ಬಂದ್ ಆಗಿದೆ. ಮೊಳೆಕೊಪ್ಪಲು ಗ್ರಾಮ ಸೇರಿದಂತೆ ಇಂಡುವಾಳು ಪಂಚಾಯ್ತಿಯ ಒಂದೇ ಒಂದು ಮಗು ಕೂಡ ಕೂಸಿನ ಮನೆಯಲ್ಲಿಲ್ಲ. ಮಕ್ಕಳೇ ಬಾರದಿದ್ದ ಮೇಲೆ ಹಾಜರಾತಿ ಪುಸ್ತಕವನ್ನು ಕೇಳುವಂತೆಯೇ ಇಲ್ಲ. ಕೇರ್‌ಟೇಕರ್ಸ್‌ಗಳು ಕೂಸಿನ ಮನೆಯಲ್ಲಿರದೆ ಅವರವರ ಮನೆಯಲ್ಲಿದ್ದು, ಮಧ್ಯಾಹ್ನ ೩ ಗಂಟೆಗೆ ಬಂದು ಕೂಸಿನ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದಾರೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬಂದಿದೆ.

ಇಂಡುವಾಳು ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಕೂಸಿನಮನೆಯತ್ತ ತಿರುಗಿಯೂ ನೋಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಹಾಲು, ಮೊಟ್ಟೆ ಸೇರಿದಂತೆ ಇತರೆ ಪೌಷ್ಠಿಕ ಆಹಾರ ಮಕ್ಕಳಿಗೆ ಸರಿಯಾದ ಸಮಯಕ್ಕೆ ದೊರಕುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವವರಿಲ್ಲ. ಮನಸ್ಸಿಗೆ ಬಂದಂತೆ ಕೂಸಿನ ಮನೆ ನಡೆಸುತ್ತಿದ್ದರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.

ಕೂಸಿನ ಮನೆ ಅವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಪಿಡಿಓಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಕೇರ್‌ಟೇಕರ್ಸ್‌ ಫೋನ್ ಮಾಡಿದರೂ ಕರೆ ಸ್ವೀಕರಿಸುವುದಿಲ್ಲವಂತೆ. ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮೂಲಕ ಏನೇ ವಿಷಯವಿದ್ದರೂ ತಿಳಿಸುವಂತೆ ಸೂಚನೆ ನೀಡಿದ್ದು, ಕೇರ್‌ಟೇಕರ್ಸ್‌ಗಳೂ ಪಿಡಿಓ ಫರ್ಮಾನನ್ನು ಪಾಲಿಸುತ್ತಿದ್ದಾರೆ.

Share this article