ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಡವರ ಹೊಟ್ಟೆ ತುಂಬಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಈ ಯೋಜನೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ದೇಶದ ಬಹುತೇಕ ರಾಜ್ಯಗಳು ಈ ಯೋಜನೆಗಳನ್ನು ನಕಲು ಮಾಡುತ್ತಿವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಲಾಗಿದ್ದ, ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ವೇಳೆ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಐದೂ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಎಂಬುದು ಹೆಮ್ಮೆಯ ವಿಚಾರ ಎಂದರು.
ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಜನತೆಗೆ ನೀರಾವರಿ ಯೋಜನೆ ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಸತತ ಪ್ರಯತ್ನದ ಫಲವಾಗಿ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸಮೀಪದಲ್ಲಿರುವ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ಡ್ಯಾಂ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಸುಮಾರು 200 ಕೋಟಿ ರು.ಗಳ ಅನುದಾನ ಮಂಜೂರು ಮಾಡಿದೆ. ಶೀಘ್ರದಲ್ಲಿಯೇ ಈ ಯೋಜನೆ ಪ್ರಾರಂಭಿಸುವ ಮೂಲಕ ಈ ಭಾಗದ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ. ತಾಲೂಕಿನ ಘಂಟಂವಾರಿಪಲ್ಲಿ ಮತ್ತು ಹೊಸಹುಡ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 600 ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳ ನಿರ್ಮಾಣ ಕಾಮಗಾರಿಗೆ 3 ತಿಂಗಳಲ್ಲಿ ಭೂಮಿ ಪೂಜೆ ಮಾಡಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ತಾಲೂಕಿನ ಬಹುತೇಕ ಹೋಬಳಿ ಕೇಂದ್ರಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. ಅಲ್ಲದೆ ಅಲ್ಪಸಂಖ್ಯಾತರಿಗಾಗಿ 30 ಕೋಟಿ ರು.ಗಳ ವೆಚ್ಚದಲ್ಲಿ ಶೀಘ್ರ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ತಾಪಂ ಇಒ ರಮೇಶ್, ಬಿಇಒ ವೆಂಕಟೇಶಪ್ಪ, ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಪುರಸಭೆ ಸದಸ್ಯರಾದ ಶ್ರೀನಿವಾಸರೆಡ್ಡಿ, ಎ.ನಂಜುಂಡಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ದಲಿತ ಮುಖಂಡ ಬಿ.ವಿ ವೆಂಕಟರಮಣ, ಜಿಪಂ ಮಾಜಿ ಸದಸ್ಯ ನರಸಿಂಹಪ್ಪ ಮತ್ತಿತರರು ಇದ್ದರು.