ರಾಮ ರಾಜ್ಯ ನಿರ್ಮಾಣದತ್ತ ನಮ್ಮ ಚಿತ್ತ: ಗೋಪಾಲ್ ಜೀ

KannadaprabhaNewsNetwork | Published : Mar 6, 2024 2:23 AM

ಸಾರಾಂಶ

ವಿಶ್ವದ ಕೋಟಿ ಕೋಟಿ ಜನರ ಕನಸಾಗಿದ್ದ ಅಯೋಧ್ಯೆಯ ರಾಮ ಮಂದಿರವು ಉದ್ಘಾಟನೆಯಾಗಿದೆ, ಇದೀಗ ನಮ್ಮೇಲರ ಮುಂದಿನ ಗುರಿ ದೇಶದಲ್ಲಿ ರಾಮ ರಾಜ್ಯದ ನಿರ್ಮಾಣದತ್ತ ಆಗಿರಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಶ್ವದ ಕೋಟಿ ಕೋಟಿ ಜನರ ಕನಸಾಗಿದ್ದ ಅಯೋಧ್ಯೆಯ ರಾಮ ಮಂದಿರವು ಉದ್ಘಾಟನೆಯಾಗಿದೆ, ಇದೀಗ ನಮ್ಮೇಲರ ಮುಂದಿನ ಗುರಿ ದೇಶದಲ್ಲಿ ರಾಮ ರಾಜ್ಯದ ನಿರ್ಮಾಣದತ್ತ ಆಗಿರಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿಗಳು ಅಯೋಧ್ಯೆ ಗೋಪಾಲ್ ಜೀ ಹೇಳಿದ್ದಾರೆ.

ಅವರು ನಗರದ ಗೋಲ್ಡ್ ಹಬ್‌ನ ಸಿಟ್ರಾನ್ ಫಂಕ್ಷನ್ ಹಾಲ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಕಲಬುರಗಿ ಮಹಾನಗರ ಜಿಲ್ಲೆಯ ವತಿಯಿಂದ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಹಿಂದು ಸಮಾಜದ ಪುನರ್ ಜಾಗರಣದ ಸಂಕೇತ ಕುರಿತಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾವಿರಾರು ಕರಸೇವಕರ ಬಲಿದಾನ ಹಾಗೂ ಐದುನೂರು ವರ್ಷಗಳಿಗೂ ಮೀಗಿಲಾಗಿರುವ ಹೋರಾಟದ ಫಲವಾಗಿ ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಭವ್ಯ ಮಂದಿರದ ಲೋಕಾರ್ಪಣೆ ಮುಗಿದುಹೋಗಿದೆ.ಇದೀಗ ದೇಶದಲ್ಲಿ ರಾಮ ರಾಜ್ಯದ ನಿರ್ಮಾಣ ಮಾಡುವುದರ ಕಡೆಗೆ ನಮ್ಮೇಲ್ಲರ ಚಿತ್ತ ಇರಬೇಕು ಎಂದು ಹೇಳಿದರು.

ಭಾರತದಲ್ಲಿ ರಾಮ ರಾಜ್ಯದ ನಿರ್ಮಾಣದ ಜೊತೆ ಜೊತೆಗೆ ಕಾಶಿ ವಿಶ್ವನಾಥ,ಮಥುರಾ ದೇಗುಲಗಳ ಜೀರ್ಣೋದ್ಧಾರ ಕೆಲಸ, ದೇಶದ ಮೂಲೆ ಮೂಲೆಗಳಲ್ಲಿ ದೇವಸ್ಥಾನದಲ್ಲಿ ದಿನನಿತ್ಯ ಪೂಜೆ, ಪುನಸ್ಕಾರಗಳು, ದೇಶದ ಹಲವು ದೇವಸ್ಥಾನಗಳಲ್ಲಿ ಜೀರ್ಣೋದ್ಧಾರದ ಕಾರ್ಯಗಳು ಭರದಿಂದ ನಡೆದು, ಭಾರತ ದೇಶ ಸಮೃದ್ಧ ವಾಗಬೇಕು ಎಂಬುವ ದೊಡ್ಡ ಸಂಕಲ್ಪ ನಮ್ಮದಾಗಿದೆ. ಹಂಪಿಯ ಗತವೈಭವ ಮರಳಿ ವಾಪಸ್ ಬರಬೇಕು. ದೇಶದಲ್ಲಿನ ಅಕ್ರಮ ಗೋ ಹತ್ಯೆಗಳು ನಿಲ್ಲಬೇಕು. ಲವ್ ಜಿಹಾದ್, ಮತಾಂತರ ಚಟುವಟಿಕೆಗಳು ಸಂಪೂರ್ಣವಾಗಿ ನಿಲ್ಲಬೇಕಾಗಿದೆ. ಅಯೋಧ್ಯೆಯ ರಾಮ ಮಂದಿರ ಇದು ರಾಷ್ಟ್ರ ಮಂದಿರವಾಗಿದ್ದು, ರಾಮನನ್ನು ಅಪ್ಪಿಕೊಂಡು, ಒಪ್ಪಿಕೊಂಡು ಸುಂದರ ಕ್ಷಣಗಳು ನಿರ್ಮಾಣವಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಪರಾಕ್ರಮದಿಂದ ರಾಮ ಮಂದಿರ ನಿರ್ಮಾಣ:

೧೯೮೪ರಲ್ಲಿ ದೇಶದಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿ ಪಕ್ಷವನ್ನ ಲೇವಡಿ ಮಾಡಿದ ಜನರು, ಇಂದು ದಂಗಾಗಿ ಹೋಗಿದ್ದಾರೆ.ಅಂದು ಹತ್ತಿದ ರಾಮ ಮಂದಿರದ ಆಂದೋಲನದ ಕಿಂಡಿಯಿಂದ ಇಂದು ಭವ್ಯವಾದ ಮಂದಿರದ ಉದ್ಘಾಟನೆಯಾಗಿದೆ. ದಿನನಿತ್ಯ ಲಕ್ಷ ಲಕ್ಷ ಜನರು ದರ್ಶನ್ ಪಡೆಯುತ್ತಿದ್ದು, ಮಂದಿರದ ಲೋಕಾರ್ಪಣೆ ಸಮಾರಂಭಕ್ಕೆ ಜನರು ಜಾತಕ ಪಕ್ಷಿಯಂತೆ ಆಗಮಿಸಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆಯೂ ಇಡೀ ವಿಶ್ವದ ರಾಜಧಾನಿಯಾಗಿ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ. ಹೀಗಾಗಿ ಅಯೋಧ್ಯೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ವೇಗವಾಗಿ ಚಾಲನೆ ನೀಡಲಾಗುತ್ತಿದೆ. ಮುಂದಿನ ಐದಾರು ವರ್ಷಗಳ ಅವಧಿಯಲ್ಲಿ ಅಯೋಧ್ಯೆಯ ಹಲವು ಪುರಾತನ ದೇಗುಲಗಳ ಜೀರ್ಣೋದ್ಧಾರ, ರಸ್ತೆಗಳ ಅಭಿವೃದ್ಧಿ, ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ, ಕುಂಡಗಳ ಅಭಿವೃದ್ಧಿ, ೨೮ ಎಕರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಟೆಂಪಲ್ ಮ್ಯೂಸಿಯಂ ಸಿದ್ಧವಾಗುತ್ತಿದ್ದು, ಇಡೀ ವಿಶ್ವದ ಕೇಂದ್ರ ಸ್ಥಾನ ಅಯೋಧ್ಯೆ ವಾಗಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನದಿಂದ ಜಗತ್ ವೃತ್ತದ ಮಾರ್ಗವಾಗಿ ಗೋಲ್ಡ್ ಹಬ್ ವರೆಗೂ ಪ್ರಭು ಶ್ರೀ ರಾಮಲ್ಲಾ ಭಾವಚಿತ್ರದ ಶೋಭಾಯಾತ್ರೆ ಜರುಗಿತು. ಸಾವಿರಾರು ಹಿಂದೂ ಬಾಂಧವರು ಶೋಭಾಯಾತ್ರೆ ವೇಳೆ ಭಾಗವಹಿ‌ಸಿದ್ದರು.

ವಿಶೇಷ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಳಸಂಗಿಯ ಸದ್ಗುರು ಸಿದ್ಧಾರೂಢ ಮಠದ ಪರಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಅಪ್ಪಾರಾವ್ ದೇವಿ ಮುತ್ಯಾ, ಕೃಷ್ಣ ಜೋಶಿ,ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ್, ಅಶೋಕ್ ಪಾಟೀಲ್, ಹಿರಿಯ ಶಿಲ್ಪಿ ಶ್ರೀ ಮಾನಯ್ಯಾ ಬಡಿಗೇರ್, ಖ್ಯಾತ ಉದ್ಯಮಿ ರಾಘವೇಂದ್ರ ಮೈಲಾಪುರ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜ್ ಅಪ್ಪಾಜಿ, ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ, ಕಲಬುರಗಿ ಮಹಾನಗರ ಘಟಕದ ಅಧ್ಯಕ್ಷ ಶ್ರೀಮಂತ ರಾಜು ನವಲದಿ, ವಿಭಾಗ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಮಹಾನಗರ ಕಾರ್ಯದರ್ಶಿ ಅಶ್ವಿನಕುಮಾರ್ ಡಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

Share this article