ನಮ್ಮದು ಕಾಳಜಿಯೊಂದಿಗೆ ಅಭಿವೃದ್ಧಿ ಪಥ, ಎಲ್ಲರ ಬಜೆಟ್‌ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Mar 22, 2025, 02:00 AM ISTUpdated : Mar 22, 2025, 10:16 AM IST
ಸಿದ್ದರಾಮಯ್ಯ  | Kannada Prabha

ಸಾರಾಂಶ

ದುರ್ಬಲ ವರ್ಗಕ್ಕೆ ಶಕ್ತಿ ತುಂಬಿ, ಸಮಾಜವನ್ನು ಸಮಗ್ರ ರೀತಿಯಲ್ಲಿ ಹಾಗೂ ಮಾನವೀಯ ನೆಲೆಯಲ್ಲಿ ಅಭಿವೃದ್ಧಿ ಪಥದತ್ತ ಮುನ್ನಡೆಸುವ ಕಾಳಜಿಯೊಂದಿಗೆ ಬಜೆಟ್‌ ರೂಪಿಸಲಾಗಿದ್ದು, ಅದಕ್ಕೆ ನಾಡಿನ ಎಲ್ಲ ವರ್ಗದ ಜನ ಮೆಚ್ಚುಗೆ ಸೂಚಿಸಿ, ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ವಿಧಾನಮಂಡಲ : ದುರ್ಬಲ ವರ್ಗಕ್ಕೆ ಶಕ್ತಿ ತುಂಬಿ, ಸಮಾಜವನ್ನು ಸಮಗ್ರ ರೀತಿಯಲ್ಲಿ ಹಾಗೂ ಮಾನವೀಯ ನೆಲೆಯಲ್ಲಿ ಅಭಿವೃದ್ಧಿ ಪಥದತ್ತ ಮುನ್ನಡೆಸುವ ಕಾಳಜಿಯೊಂದಿಗೆ ಬಜೆಟ್‌ ರೂಪಿಸಲಾಗಿದ್ದು, ಅದಕ್ಕೆ ನಾಡಿನ ಎಲ್ಲ ವರ್ಗದ ಜನ ಮೆಚ್ಚುಗೆ ಸೂಚಿಸಿ, ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಹಕಾರ ಸಚಿವರ ಹನಿಟ್ರ್ಯಾಪ್‌ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ನಡೆಸುತ್ತಿದ್ದ ಪ್ರತಿಭಟನೆ ನಡುವೆಯೇ 2025-26ನೇ ಸಾಲಿನ ಬಜೆಟ್‌ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಉತ್ತರ ಓದಿದರು.

ಬಲಿಷ್ಠರು ಮಾತ್ರ ಬದುಕುತ್ತಾರೆ ಎನ್ನುವುದು ಡಾರ್ವಿನ್ ಸಿದ್ಧಾಂತ. ಅದಕ್ಕೆ ವಿರುದ್ಧವಾಗಿ ಅಸಹಾಯಕರು, ದುರ್ಬಲ ವರ್ಗದವರಿಗೆ ಶಕ್ತಿ ತುಂಬಿ ಮಾನವೀಯ ನೆಲೆಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವ ಕಾಳಜಿಯೊಂದಿಗೆ ಬಜೆಟ್‌ ಅನ್ನು ರೂಪಿಸಲಾಗಿದೆ. ಈ ಬಜೆಟ್‌ಗೆ ರಾಜ್ಯದ ಎಲ್ಲ ವರ್ಗ, ಧರ್ಮದವರೂ ಮೆಚ್ಚುಗೆ ಸೂಚಿಸಿ, ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಇನ್ನೆಷ್ಟು ದ್ವೇಷ ಹರಡುತ್ತೀರಿ: ಬಿಜೆಪಿ ನಾಯಕರು ಮುಸ್ಲಿಂ ಬಜೆಟ್‌ ಎಂದು ಟೀಕಿಸುತ್ತಿದ್ದಾರೆ. ಆದರೆ, ನಮ್ಮದು ಸರ್ವರ, ಸರ್ವೋದಯದ ಬಜೆಟ್‌. ಇನ್ನೆಷ್ಟು ದಿನ ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ಅಸಹನೆ ಹುಟ್ಟು ಹಾಕುತ್ತೀರಿ. ಸರ್ಕಾರ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ ಮಂಡಿಸಿದೆ. ರಾಜ್ಯದ ಸಮಗ್ರ, ಸುಸ್ಥಿರ ಅಭಿವೃದ್ಧಿ ಜತೆಗೆ ರಾಜಸ್ವ ಕೊರತೆ ಹೊಗಲಾಡಿಸಿ ಮುಂದಿನ ವರ್ಷಕ್ಕೆ ರೆವಿನ್ಯೂ ಸರ್‌ಪ್ಲಸ್‌ ಬಜೆಟ್‌ ಮಂಡಿಸುವುದು ನಮ್ಮ ಧ್ಯೇಯ ಎಂದು ಹೇಳಿದರು.

ಬಂಡವಾಳ ಯೋಜನೆಗಾಗಿ ಸಾಲ ಬಳಕೆ:

ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ಸ್ಥಾನದಲ್ಲಿದೆ. ಆದರೆ, ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ ಮತ್ತು ಜಿಎಸ್‌ಡಿಪಿಯಲ್ಲಿ 3ನೇ ಸ್ಥಾನದಲ್ಲಿದೆ. ಆದರೆ, ನಮ್ಮ ಬಜೆಟ್‌ ಗಾತ್ರ ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡಿನ ನಂತರದ ಸ್ಥಾನದಲ್ಲಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 3.12 ಲಕ್ಷ ಕೋಟಿ ರು. ಸಾಲ ಪಡೆದಿದ್ದೇವೆ. ಆದರೆ, ಆ ಸಾಲವನ್ನು ಬಂಡವಾಳ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಆಮೂಲಕ ರಾಜ್ಯದ ಆರ್ಥಿಕತೆ ಪ್ರಗತಿ ಕಾಣುವಂತೆ ಮಾಡಲಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ವಿತ್ತೀಯ ಶಿಸ್ತು ಕಡ್ಡಾಯವಾಗಿ ಪಾಲನೆ ಮಾಡಿದ್ದೇವೆ ಎಂದು ವಿವರಿಸಿದರು.

ಕೇಂದ್ರಕ್ಕಿಂತ ಉತ್ತರ ಬಜೆಟ್‌: ಬಜೆಟ್‌ ಮೇಲಿನ ಉತ್ತರದ ವೇಳೆಯಲ್ಲೂ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, 2025-26ನೇ ಸಾಲಿನ ಕೇಂದ್ರ ಬಜೆಟ್‌ ಗಾತ್ರ 50.65 ಲಕ್ಷ ಕೋಟಿ ರು.ಗಳಾಗಿದೆ. ಅದೇ 2024-25ನೇ ಸಾಲಿನಲ್ಲಿ 48.21 ಲಕ್ಷ ಕೋಟಿ ರು.ಗಳಷ್ಟಿತ್ತು. ಕೇಂದ್ರದ ಬಜೆಟ್‌ ಬೆಳವಣಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 5.06ರಷ್ಟು ಮಾತ್ರ. ಇದರಲ್ಲಿ ಹಣದುಬ್ಬರ ಕಳೆದರೆ, ಕೇಂದ್ರದ ಬಜೆಟ್‌ ಗಾತ್ರ ನಕಾರಾತ್ಮಕವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಿಂದ ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. 2013ರಿಂದ 2017ರವರೆಗೆ ಕೇವಲ 4 ರಾಜ್ಯಗಳು ಶೇ.3ಕ್ಕಿಂತ ಹೆಚ್ಚಿನ ವಿತ್ತೀಯ ಕೊರತೆ ಹಾಗೂ 5 ರಾಜ್ಯಗಳ ಹೊಣೆಗಾರಿಕೆ ಶೇ. 25ಕ್ಕಿಂತ ಹೆಚ್ಚಿತ್ತು. 2024-25ರಲ್ಲಿ ದೇಶದ ಪ್ರಮುಖ 14 ರಾಜ್ಯಗಳ ಪೈಕಿ 10 ರಾಜ್ಯಗಳ ಒಟ್ಟು ಹೊಣೆಗಾರಿಕೆ ಶೇ. 25ಕ್ಕಿಂತ ಹೆಚ್ಚು ಹಾಗೂ 6ಕ್ಕಿಂತ ಹೆಚ್ಚಿನ ರಾಜ್ಯಗಳ ವಿತ್ತೀಯ ಕೊರತೆ ಶೇ.3ಕ್ಕಿಂತ ಹೆಚ್ಚಾಗಿದೆ.

2014ರಲ್ಲಿ ದೇಶದ ಸಾಲ 53.11 ಲಕ್ಷ ಕೋಟಿ ರು.ಗಳಷ್ಟಿತ್ತು, 2025-26ನೇ ಸಾಲಿಗೆ ಅದು 200.16 ಲಕ್ಷ ಕೋಟಿ ರು.ಗಳಾಗುವ ಸಾಧ್ಯತೆಗಳಿವೆ. ಅಲ್ಲದೆ, ಕರ್ನಾಟಕ್ಕೆ ನೀಡಬೇಕಾದ ಸಮರ್ಪಕ ಅನುದಾನವನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಹೆದ್ದಾರಿ ಅಭಿವೃದ್ಧಿ, ರೈಲ್ವೆ ಯೋಜನೆ, ಬಂದರು ಅಭಿವೃದ್ಧಿ, ಮೂಲಸೌಕರ್ಯ ಯೋಜನೆ ಸೇರಿ ಬಹುತೇಕ ಯೋಜನೆಗಳಲ್ಲಿ ಮಹಾರಾಷ್ಟ್ರ, ಗುಜರಾತ್‌ ಸೇರಿ ಇತರ ರಾಜ್ಯಗಳಿಗೆ ನೀಡುವಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡುತ್ತಿಲ್ಲ. ಇಷ್ಟೆಲ್ಲ ನ್ಯೂನತೆಗಳಿದ್ದರೂ ಬಿಜೆಪಿಗರು ನಮ್ಮ ರಾಜ್ಯದ ಸಾಲ, ಆರ್ಥಿಕ ಪರಿಸ್ಥಿತಿ ಟೀಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಧನವಿನಿಯೋಗ ಅಂಗೀಕಾರ

ಬಿಜೆಪಿ ಶಾಸಕರ ಗದ್ದಲದ ನಡುವೆಯೇ ಉಭಯ ಸದನಗಳಲ್ಲಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ಧನ ವಿನಿಯೋಗ ವಿಧೇಯಕ-2025 ಹಾಗೂ ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''