ಹಾಸನಾಂಬೆ ದೇವಿ ದರ್ಶನದ ಬಳಿಕ ಉಪಚುನಾವಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷಿ ಸಚಿವರು, ಚನ್ನಪಟ್ಟಣ ಚುನಾವಣೆ ಬಿಸಿ ಆರಂಭವಾಗಿದೆ. ದೀಪಾವಳಿ ಆದ ಮೇಲೆ ಇನ್ನೂ ವೇಗವಾಗುತ್ತದೆ. ಮೂರೂ ಕ್ಷೇತ್ರದಲ್ಲಿ ಗೆಲ್ಲುವಂತಹ ವಾತಾವರಣ ಇದೆ.
ಹಾಸನ : ದೇವೇಗೌಡರು ಯಾವತ್ತು ಮನೆಯಲ್ಲಿ ಕುಳಿತಿಲ್ಲ. ಸದಾ ಆಕ್ಟೀವ್ ಆಗಿದ್ದು, ಆತ್ಮೀಯವಾಗಿ ಇರುವ ವಿಚಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಚುನಾವಣೆಗೆ ನಾವು ತಯಾರಾಗಿದ್ದೇವೆ. ಜನರು ನಮ್ಮ ಪರ ಇದ್ದಾರೆ. ಈ ಉಪ ಚುನಾವಣೆಯಲ್ಲಿ ಐದು ಗ್ಯಾರೆಂಟಿಗಳೇ ನಮ್ಮನ್ನು ಕಾಯುತ್ತವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಹಾಸನಾಂಬೆ ದೇವಿ ದರ್ಶನದ ಬಳಿಕ ಉಪಚುನಾವಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷಿ ಸಚಿವರು, ಚನ್ನಪಟ್ಟಣ ಚುನಾವಣೆ ಬಿಸಿ ಆರಂಭವಾಗಿದೆ. ದೀಪಾವಳಿ ಆದ ಮೇಲೆ ಇನ್ನೂ ವೇಗವಾಗುತ್ತದೆ. ಮೂರೂ ಕ್ಷೇತ್ರದಲ್ಲಿ ಗೆಲ್ಲುವಂತಹ ವಾತಾವರಣ ಇದೆ. ನಮ್ಮ ಪಕ್ಷದವರು ಎಲ್ಲಾ ಕಡೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಮೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವ ಹಾಗೂ ರಾಷ್ಟ್ರದಲ್ಲಿ ಖರ್ಗೆ, ರಾಹುಲ್ ಗಾಂಧಿ, ಸೋನಿಯಾಗಾಂಧಿ, ಸುರ್ಜೆವಾಲಾ ಅವರ ನಾಯಕತ್ವದಲ್ಲಿ ಮೂರನ್ನೂ ಗೆಲ್ತೀವಿ. ಎಲ್ಲಾ ಕ್ಷೇತ್ರಗಳನ್ನು ಸಮಾನವಾಗಿ ತೆಗೆದುಕೊಂಡಿದ್ದೇವೆ. ಯಾವುದು ಜಾಸ್ತಿ, ಕಡಿಮೆ ಇಲ್ಲ, ಮೂರು ಕ್ಷೇತ್ರಗಳು ಗೆಲ್ಲಬೇಕು ಅಷ್ಟೇ. ಚನ್ನಪಟ್ಟಣ ಪ್ರತಿಷ್ಠೆಯಾಗಿಲ್ಲ, ಎಲ್ಲವನ್ನು ಸಮಾನವಾಗಿ, ಸಾಧಾರಣವಾದ ರೀತಿಯಲ್ಲೇ ಚುನಾವಣೆ ಮಾಡಲಾಗುತ್ತಿದೆ ಎಂದರು.
ಅತಿವೃಷ್ಟಿಯಾದಾಗ ಸಚಿವರ ತಂಡ ಮಾಡಲಿಲ್ಲ ಚುನಾವಣೆಗೆ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಅತಿವೃಷ್ಟಿಯಲ್ಲಿ ಸಿಎಂ ಸೂಚನೆ ಕೊಟ್ಟಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಅಂತ ಅಲ್ಲ. ೩೬೫ ದಿನ ೨೪ ಗಂಟೆ ಜಿಲ್ಲಾ ಉಸ್ತುವಾರಿ. ಸಚಿವರು ನಡೆಯುವ ಎಲ್ಲದರ ಬಗ್ಗೆ ಗಮನಹರಿಸಬೇಕು ಅಂತ ಜಿಲ್ಲಾ ಮಂತ್ರಿಗಳಿಗೆ, ಜಿಲ್ಲಾ ಸಚಿವರಿಗೆ ಸೂಚನೆ ಇದೆ. ಆದ್ದರಿಂದ ವಿಶೇಷವಾಗಿ ಏನು ಮಾಡಿಲ್ಲ. ನಾವು ನಿರಂತರವಾಗಿ ರೈತರ ಪರ ಇರುತ್ತೇವೆ. ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಅವರ ಇಬ್ಬರ ನೇತೃತ್ವದಲ್ಲಿ ಮೂರು ಚುನಾವಣೆ ನಡೆಯಲಿದೆ. ನಾವೆಲ್ಲರೂ ಅವರಿಗೆ ಸಾರಥಿಯಾಗಿ ಇರ್ತೀವಿ ಎಂದರು.
ದೇವೇಗೌಡರು ಯಾವತ್ತೂ ಚುನಾವಣೆಗೆ ಇಳಿದಿಲ್ಲ. ಇಳಿಯಲಿ. ಅವರ ಚುನಾವಣೆ ಅವರು ಮಾಡಲಿ. ಮೊಮ್ಮಗನ ಪರವಾಗಿ ಅವರ ಪಕ್ಷದ ಪರವಾಗಿ ಚುನಾವಣೆ ಮಾಡಬೇಡಿ ಎನ್ನಲು ಆಗುತ್ತಾ! ದೇವೇಗೌಡರು ಯಾವತ್ತೂ ಮನೇಲಿ ಕೂತಿಲ್ಲ. ದೇವೇಗೌಡರು ಸದಾ ಆಕ್ಟೀವ್ ಆಗಿದ್ದಾರೆ. ದೇವೇಗೌಡರು ಆತ್ಮೀಯವಾಗಿ ಇರುವ ವಿಚಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಚುನಾವಣೆಗೆ ನಾವು ಪ್ರೀಪೇರ್ ಆಗಿದ್ದೇವೆ, ಜನರು ನಮ್ಮ ಪರ ಇದ್ದಾರೆ. ಐದು ಗ್ಯಾರೆಂಟಿನೇ ನಮಗೆ ಕಾಯುತ್ತದೆ. ಈ ಚುನಾವಣೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಕಡ್ಡಾಯವಲ್ಲ. ಇದು ಉಪಚುನಾವಣೆ, ಒಬ್ಬರು ರಾಜೀನಾಮೆ ಕೊಟ್ಟಿದ್ದೀವಿ. ನಾವು ಆಡಳಿತ ಪಕ್ಷದಲ್ಲಿದ್ದೇವೆ ನಮ್ಮ ಪಕ್ಷ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಹಾಸನಾಂಬೆ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ದೇವಿಯನ್ನು ದೂರದಿಂದ, ಹತ್ತಿರದಿಂದ ನೋಡಿದರೂ ಆಶೀರ್ವಾದ ಸಿಗುತ್ತದೆ. ಈ ನಾಡಿನಲ್ಲಿ ಕಳೆದ ವರ್ಷ ಬರಗಾಲವಿತ್ತು. ಈ ವರ್ಷ ಉತ್ತಮ ಮಳೆಯಾಗಿದೆ. ದೇವರ ಆಶೀರ್ವಾದಿಂದ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ರೈತರಿಗೆ, ಈ ನಾಡಿನ ಜನರಿಗೆ ಒಳ್ಳೆಯದಾಗಲಿ. ನಿನ್ನೆ ಕ್ಯಾಬಿನೆಟ್ ತೀರ್ಮಾನ ಆಗಿದ್ದು, ಮೂವತ್ತು ಜಿಲ್ಲೆಗಳಲ್ಲಿ ತರಬೇತಿ ಕೇಂದ್ರ ತೆರೆದು ಎರಡು ಲಕ್ಷ ಜನರಿಗೆ ತರಬೇತಿ ಕೊಡುತ್ತೇವೆ. ಐದು ಲಕ್ಷ ಮಣ್ಣಿನ ಮಾದರಿ ಪರೀಕ್ಷೆ ಮಾಡಲಾಗುವುದು. ಕರ್ನಾಟಕ ಸ್ಟೇಟ್ ಅರ್ಗಿಕಲ್ಚರ್ ಡೆವಲಪ್ಮೆಂಟ್ ಏಜೆನ್ಸಿ ಬೋರ್ಡ್ ತೆರೆಯುತ್ತೇವೆ. ಅದಕ್ಕೆ ನಾನೇ ಅಧ್ಯಕ್ಷನಾಗಿರುತ್ತೇನೆ. ಆಧುನಿಕವಾಗಿ ಬೆಳೆ ಬೆಳೆಯಬಹುದು ಎಂಬ ಬಗ್ಗೆ ಮಾಹಿತಿ ಹಾಗೂ ತರಬೇತಿ ಕೊಡಲು ಸರ್ಕಾರ ಹೊಸ ಯೋಜನೆ ಜಾರಿ ಮಾಡಲಿದ್ದು, ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದೇವೆ ಎಂದರು. ೨೧೦೦ ಕೋಟಿ ಇನ್ಸೂರೆನ್ಸ್‌ನಲ್ಲಿ ಹಣ ಕೊಡಿಸಿದ್ದೇವೆ. ಕೇಂದ್ರ ಸರ್ಕಾರ ಕೊಡದೆ ಇದ್ದಾಗ ಸುಪ್ರೀಂಕೋರ್ಟ್ ಮೂಲಕ ೩೪೫೪ ಕೋಟಿ ತಂದಿದ್ದೇವೆ. ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಆಗುವ ಹಾಗೇ ಮಾಡುತ್ತೇವೆ ಎಂದು ಹೇಳಿದರು.