ಕನ್ನಡಪ್ರಭ ವಾರ್ತೆ ತುಮಕೂರು ಪತ್ರಕರ್ತರಾದವರು ಸಾಹಿತಿಯಾದರೆ ಅವರ ಸಾಹಿತ್ಯದಲ್ಲಿನ ಮೌಲ್ಯ ಜಾಸ್ತಿ ಇರುತ್ತದೆ. ಪತ್ರಕರ್ತರಲ್ಲಿ ಸಹಜವಾಗಿ ಚಿಕಿತ್ಸಕ ಗುಣ, ಸಮಾಜಮುಖಿ ಚಿಂತನೆಗಳಿದ್ದು ಅವು ಸಾಹಿತ್ಯ ರಚನೆಯಲ್ಲೂ ಪ್ರಭಾವ ಬೀರಿ ಪರಿಣಾಮಕಾರಿ ಸಾಹಿತ್ಯ ರಚನೆ ಸಾಧ್ಯವಾಗುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.ಭಾನುವಾರ ನಗರದ ಕನ್ನಡ ಭವನದಲ್ಲಿ ಲೇಖಕ, ಪತ್ರಕರ್ತ ಜಿ.ಇಂದ್ರಕುಮಾರ್ ಪ್ರತಿಷ್ಠಾನ ಆಯೋಜಿಸಿದ್ದ ಜಿ.ಇಂದ್ರಕುಮಾರ್ ಅವರ ರಾಗಿ ಕುರಿತ ‘ನೆಲೆದೆಲಗ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ತಾವು ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಇಂದ್ರಕುಮಾರ್ ಸಾಂಸ್ಕೃತಿಕ ಸಂಘಟಕರಾಗಿ, ಸಂಘಸಂಸ್ಥೆಗಳ ಒಡನಾಟದೊಂದಿಗೆ ಸಮಾಜಮುಖಿ ಚಿಂತನೆಗಳನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂದರು.ನೆರೆದೆಲಗ ಕೃತಿ ರಾಗಿಯನ್ನು ಕುರಿತ ವಿಶೇಷವಾದ ಪುಸ್ತಕ. ನಮ್ಮ ಪ್ರಮುಖ ಆಹಾರವಾದ ರಾಗಿಯ ಮಹತ್ವದ ಬಗ್ಗೆ ಕಾಳಜಿಯಿಂದ ಅಧ್ಯಯನ ಮಾಡಿ ಕೃತಿ ರಚನೆ ಮಾಡಿದ್ದಾರೆ. ರಾಗಿ ಬಗ್ಗೆ ಐತಿಹಾಸಿಕ, ಪೌರಾಣಿಕ ಘಟನೆಗಳನ್ನು ನೆನೆಸಿಕೊಂಡಿದ್ದಾರೆ. ರಾಗಿಯನ್ನು ನಮ್ಮ ಸಂಸ್ಕೃತಿಯ ಭಾಗವಾಗಿ ಕಂಡಿದ್ದಾರೆ. ರಾಗಿಯ ವೈಜ್ಞಾನಿಕ ಮಹತ್ವವನ್ನೂ ವಿವರಿಸಿದ್ದಾರೆ ಎಂದು ಹೇಳಿದರು.ಮಧುಮೇಹದಿಂದ ನರಳುವವರಿಗೆ ರಾಗಿ ರಾಮಬಾಣ. ರಾಗಿ ಬೆಳೆಗಾರರಾಗಿಯೂ ಇಂದ್ರಕುಮಾರ್ ಅವರು ರಾಗಿಯ ಶ್ರೇಷ್ಠತೆ, ಅದರ ಮೌಲ್ಯವನ್ನು ಆಪ್ತವಾಗಿ ತಮ್ಮ ಕೃತಿಯಲ್ಲಿ ರಚನೆ ಮಾಡಿದ್ದಾರೆ. ರಾಗಿ ಬಗ್ಗೆ ಅಧ್ಯಯನ ಮಾಡುವವರಿಗೆ ಇದೊಂದು ಪ್ರಮುಖ ಆಕರ ಕೃತಿಯಾಗಲಿದೆ ಎಂದು ಡಾ.ಸಿ.ಸೋಮಶೇಖರ್ ಹೇಳಿದರುಜಿ.ಇಂದ್ರಕುಮಾರ್‌ಪ್ರತಿಷ್ಠಾನದ ಕಾಯದರ್ಶಿ, ಹಿರಿಯ ಸಾಹಿತಿ ಡಾ.ಬಿ.ಸಿ.ಶೈಲಾ ನಾಗರಾಜ್ ಆಶಯ ನುಡಿಗಳನ್ನಾಡಿ, ಪತ್ರಕರ್ತ, ಸಾಹಿತಿಯಾದ ಜಿ.ಇಂದ್ರಕುಮಾರ್ ಅವರು ಸಾಹಿತ್ಯ, ಸಾಂಸ್ಕೃತಿಕ ಸಂಘಟಕರಾಗಿಯೂ ನಮ್ಮ ನಡುವೆ ಇದ್ದರು. ನೆಲಮೂಲ ಸಂಸ್ಕೃತಿ, ಪ್ರಗತಿಪರ ಚಿಂತನೆ ರೂಢಿಸಿಕೊಂಡಿದ್ದ ಅವರು ಪತ್ರಕರ್ತರಾಗಿ, ಸಂಘಟಕರಾಗಿ, ಎಷ್ಟೋ ಹೋರಾಟಗಾರರಿಗೆ ಮಾರ್ಗದರ್ಶನ ನೀಡಿ ಎಲ್ಲರೊಂದಿಗೆ ಬೆಳೆದವರು ಎಂದರು. ಜಿ.ಇಂದ್ರಕುಮಾರ್ ಅವರ ಸಾಹಿತ್ಯ, ಸಾಂಸ್ಕೃತಿಕ ಕಾರ್ಯವನ್ನು ಸದಾ ಸ್ಮರಿಸಲು ಪ್ರತಿಷ್ಠಾನವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿಷ್ಠಾನಕ್ಕೆ ನಿರಂತತೆ ತಂದುಕೊಡಲು ಇಂದ್ರಕುಮಾರ್ ಅವರ ಪತ್ನಿ ಜಯಶ್ರೀ ಇಂದ್ರಕುಮಾರ್ ಅವರ ಇಚ್ಛಾಶಕ್ತಿಯಿಂದ 2ನೇ ವರ್ಷದಲ್ಲಿ ಪ್ರತಿಷ್ಠಾನದಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀ.ಹ ಮಾತನಾಡಿ, ರಾಗಿಯ ಮಹತ್ವ ಕುರಿತು ಒಂದು ವಿಶ್ವ ವಿದ್ಯಾಲಯ ಮಾಡಬಹುದಾದ ಕೆಲಸವನ್ನು ಜಿ.ಇಂದ್ರಕುಮಾರ್ ಅವರು ಏಕಾಂಗಿಯಾಗಿ ಮಾಡಿದ್ದಾರೆ. ಕಪ್ಪು ಮಣ್ಣಿನಲ್ಲಿ ಬೆಳೆಯುವ ರಾಗಿ ಆಹಾರವಾಗಿ ನಮಗೆ ಸಂಬಂಧವಿದೆ. ಇವರ ನೆರೆದೆಲಗ ಕೃತಿ ಅಧ್ಯಯನಕ್ಕೆ ಯೋಗ್ಯವಾಗಿದೆ ಎಂದು ಹೇಳಿದರು.ಈ ವೇಳೆ ಹಿರಿಯ ಪತ್ರಕರ್ತ ಹೆಚ್.ಎನ್.ಮಲ್ಲೇಶ್, ಸಾಹಿತಿ ನಾಗರತ್ನ ಚಂದ್ರಪ್ಪ, ಹಿರಿಯ ಪತ್ರಿಕಾ ಛಾಯಾಗ್ರಾಹಕ ಟಿ.ಎಸ್.ತ್ರಿಯಂಬಕ, ರಂಗಭೂಮಿ ಕಲಾವಿದ ಎನ್.ಸಿದ್ಧರಾಜು ಅವರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಆರ್.ದೊಡ್ಡಲಿಂಗಪ್ಪ, ಸಾಹಿತಿ, ಪ್ರಕಾಶಕ ಎಚ್.ಎಂ ನಾಗರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕೆಯುಡ್ಲೂö್ಯಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಟಿ.ಎಂ.ಸತೀಶ್, ಇಂದ್ರಕುಮಾರ್ ಪತ್ನಿ ಜಯಶ್ರೀ ಇಂದ್ರಕುಮಾರ್, ಪುತ್ರಿ ಐ.ಎಸ್.ಶಿಂಷಾ, ಸಾಹಿತಿ ದೊಂಬರನಹಳ್ಳಿ ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.