ಯಲಬುರ್ಗಾ: ಇಡೀ ವಿಶ್ವದಲ್ಲೇ ನಮ್ಮ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಅಂತಹ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ, ಸಮಾನತೆ, ಸಾಮಾಜಿಕ, ಶಿಕ್ಷಣ, ಹಕ್ಕು, ಉದ್ಯೋಗ, ರಾಜ್ಯಾಂಗ, ನ್ಯಾಯಾಂಗ ಸೇರಿದಂತೆ ಸರ್ವ ಜನಾಂಗದವರ ಒಳಿತಿಗಾಗಿ ಇಂತಹ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಎಂದರು.ದೇಶದಲ್ಲಿ ಮೇಲ್ಜಾತಿ, ಕೀಳ್ಜಾತಿ ಎನ್ನುವ ತಾರತಮ್ಯ ಇನ್ನು ಜೀವಂತವಾಗಿದೆ. ಅನೇಕ ದೇವಸ್ಥಾನಗಳಲ್ಲಿ ಬೆಕ್ಕು, ನಾಯಿಗಳಿಗೆ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ದೇವಸ್ಥಾನಗಳಲ್ಲಿ ಇಂದಿಗೂ ಪ್ರವೇಶ ದೊರೆಯುತ್ತಿಲ್ಲ. ಇಂತಹ ಮೌಢ್ಯಗಳು, ಕೆಟ್ಟ ಜಾತಿ ವ್ಯವಸ್ಥೆ ಎಲ್ಲಿಯವರೆಗೆ ನಿರ್ಮೂಲನೆಯಾಗುವುದಿಲ್ಲವೋ ಅಲ್ಲಿಯವರೆಗೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು.ಜಾತಿ ಧರ್ಮದ ಹೆಸರಿನಲ್ಲಿ ಎಂದೂ ರಾಜಕಾರಣ ಮಾಡಬಾರದು. ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಆದರೆ ಜಾತಿ ವ್ಯವಸ್ಥೆ ಇನ್ನು ತಾಂಡವವಾಡುತ್ತಿದೆ. ಇದರ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸುವ ಮೂಲಕ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.ಪಟ್ಟಣದ ಕೆಂಪು ಕೆರೆಯ ಅಭಿವೃದ್ಧಿಗಾಗಿ ₹೨೫ ಕೋಟಿ ಬಿಡುಗಡೆಯಾಗಲಿದೆ. ಇದರ ಜಾಗವನ್ನು ಒತ್ತುವರಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಯಾರೇ ಆಗಿರಲಿ ತಹಸೀಲ್ದಾರರು ಅದರ ಸಂಪೂರ್ಣ ಸರ್ವೆ ಮಾಡಿಸಿ ಒತ್ತುವರಿ ಮಾಡಿಕೊಂಡ ಜಾಗ ವಶಪಡಿಸಿಕೊಳ್ಳಬೇಕು. ಅದರ ಪಕ್ಕದಲ್ಲಿ ಸಾರ್ವಕನಿಕರ ಅನುಕೂಲಕ್ಕಾಗಿ ಸುಂದರ ಪಾರ್ಕ್ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.ತಹಸೀಲ್ದಾರ ಬಸವರಾಜ ತೆನ್ನೆಳ್ಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬೇರೆ ರಾಷ್ಟ್ರಗಳಂತೆ ನಮ್ಮ ಭಾರತ ದೇಶ ಎಲ್ಲ ರಂಗದಲ್ಲೂ ಸಾಕಷ್ಟು ಪ್ರಗತಿ ಪಥದತ್ತ ಸಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಬಿ.ಎಂ. ಶಿರೂರ, ಕೆರಿಬಸಪ್ಪ ನಿಡಗುಂದಿ, ತಾಪಂ ಇಒ ಸಂತೋಷ ಪಾಟೀಲ, ಮುಖ್ಯಾಧಿಕಾರಿ ನಾಗೇಶ, ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಸಂತ ಭಾವಿಮನಿ, ಕಳಕಪ್ಪ ತಳವಾರ, ಸಿಪಿಐ ಮೌನೇಶ ಪಾಟೀಲ ಇದ್ದರು.