ಗೋವಾ ಬಸ್‌ ತಡೆದು ಆಕ್ರೋಶ

KannadaprabhaNewsNetwork | Published : Jul 9, 2024 12:52 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಗೋವಾ ಸರ್ಕಾರದ ಮಾತು ಕೇಳಿ ಕೇಂದ್ರದ ಪ್ರವಾಹ್‌ ತಂಡ ಮಹದಾಯಿ ಜಲಾನಯನ ಪ್ರದೇಶ ಕಣಕುಂಬಿಗೆ ಭೇಟಿ ನೀಡಿದ್ದನ್ನು ಖಂಡಿಸಿ ಸೋಮವಾರ ನಗರದಲ್ಲಿ ರೈತ ಮುಖಂಡರು, ಕರವೇ ಕಾರ್ಯಕರ್ತರು ಅರಬೆತ್ತಲೆ ಪ್ರತಿಭಟನೆ ನಡೆಸಿ ಗೋವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋವಾ ಸರ್ಕಾರದ ಮಾತು ಕೇಳಿ ಕೇಂದ್ರದ ಪ್ರವಾಹ್‌ ತಂಡ ಮಹದಾಯಿ ಜಲಾನಯನ ಪ್ರದೇಶ ಕಣಕುಂಬಿಗೆ ಭೇಟಿ ನೀಡಿದ್ದನ್ನು ಖಂಡಿಸಿ ಸೋಮವಾರ ನಗರದಲ್ಲಿ ರೈತ ಮುಖಂಡರು, ಕರವೇ ಕಾರ್ಯಕರ್ತರು ಅರಬೆತ್ತಲೆ ಪ್ರತಿಭಟನೆ ನಡೆಸಿ ಗೋವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನಾಕಾರರು ಕೈಯಲ್ಲಿ ಬುಟ್ಟಿ, ಪಿಕಾಸಿ ಹಿಡಿದಿದ್ದ ರೈತ ಮುಖಂಡರು, ಕರವೇ ಕಾರ್ಯಕರ್ತರು ಅರೆಬೆತ್ತಲೆಯಾಗಿ ಹಾಗೂ ಗೋವಾ ಸಾರಿಗೆ ಬಸ್‌ ತಡೆದು ಪ್ರತಿಭಟನೆಯನ್ನು ನಡೆಸಿದರು. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮತ್ತು ಗೋವಾ ಸಿಎಂ ಪ್ರಮೋದ ಸಾವಂತ ಅವರ ಭಾವಚಿತ್ರವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅದೇ ರಸ್ತೆ ಮೂಲಕ ಆಗಮಿಸಿದ ಗೋವಾ ಬಸ್ ತಡೆದ ಹೋರಾಟಗಾರರು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಓರ್ವ ಮಹಿಳೆ ಗೋವಾ ಬಸ್ ಏರಿದ ಘಟನೆಯೂ ನಡೆಯಿತು. ಬಳಿಕ ಆ ಮಹಿಳೆಯನ್ನು ಬಸ್​ನಿಂದ ಕೆಳಗಿಳಿಸಲಾಯಿತು.ಈ ವೇಳೆ ಕರವೇ ಮುಖಂಡ ವಾಜೀದ್ ಹಿರೇಕೊಡಿ ಮಾತನಾಡಿ, ಕೋರ್ಟ್ ಆದೇಶ ನೀಡಿದರೂ ನೀರು ಬಿಡುತ್ತಿಲ್ಲ. ಜುಲೈ 21ರೊಳಗೆ ಕೆಲಸ ಪ್ರಾರಂಭವಾಗಬೇಕು. ಇಲ್ಲದಿದ್ದರೆ ನಾವೇ ಕಣಕುಂಬಿಗೆ ಹೋಗಿ ಗೋವಾ ಸರ್ಕಾರ ನಿರ್ಮಿಸಿರುವ ತಡೆಗೋಡೆ ಒಡೆಯುತ್ತೇವೆ. ಕಾಮಗಾರಿಗೆ ಇದೇ ರೀತಿ ವಿರೋಧ ವ್ಯಕ್ತಪಡಿಸಿದರೆ ಗೋವಾಗೆ ಹಾಲು, ತರಕಾರಿ ಸೇರಿ ಮತ್ತಿತರ ಸಾಮಗ್ರಿಗಳು ಹೋಗದಂತೆ ತಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ ಸೋಮು ರೈನಾಪುರೆ ಮಾತನಾಡಿ, ಮಹದಾಯಿ ಯೋಜನೆಗೆ ಮತ್ತೆ ಕ್ಯಾತೆ ತೆಗೆದಿರುವ ಗೋವಾ ಸಿಎಂಗೆ ನಾಚಿಕೆ ಆಗಬೇಕು. ಕಣಕುಂಬಿ ಹುಲಿ ಸಂರಕ್ಷಣಾ ಪ್ರದೇಶ ಎನ್ನುತ್ತಿದ್ದಾರೆ. ಆದರೆ, ಅಲ್ಲಿ ಯಾವುದೇ ಹುಲಿಯೂ ಇಲ್ಲ‌, ಇಲಿಯೂ ಇಲ್ಲ. ಜುಲೈ 21ರಂದು ನರಗುಂದ ಬಂಡಾಯ ನಡೆದಿತ್ತು. ಈಗ ಮತ್ತೆ ಮಹದಾಯಿಗಾಗಿ ಮತ್ತೊಂದು ಬಂಡಾಯ ಏಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವಕಾಶ ಮಾಡಿಕೊಡಬಾರದು ಎಂದು ಕಿಡಿಕಾರಿದರು.

ಈ ಪ್ರತಿಭಟನೆಯಲ್ಲಿ ಯಮನಪ್ಪ ಮಾಳಗೇರಿ, ಹನಮಂತ ಗೋಸ್ಲಿ, ಸಂಗೀತಾ ಕಾಂಬಳೆ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Share this article