ಪಿಯು ಶಿಕ್ಷಣ ಜಿಪಂ ವ್ಯಾಪ್ತಿ ಸೇರ್ಪಡೆಗೆ ಆಕ್ರೋಶ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಪಿಯು ಶಿಕ್ಷಣ ಜಿಪಂ ವ್ಯಾಪ್ತಿ ಸೇರ್ಪಡೆಗೆ ಆಕ್ರೋಶ

ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಾಂಶುಪಾಲರು, ಉಪನ್ಯಾಸಕರಿಂದ ಪ್ರತಿಭಟನೆ । ಡಿಸಿಗೆ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪದವಿಪೂರ್ವ ಶಿಕ್ಷಣ ಇಲಾಖೆ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ಹವಣಾಧಿಕಾರಿ ಸುಪರ್ದಿಗೆ ವಹಿಸುತ್ತಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಾಂಶುಪಾಲರು, ಉಪನ್ಯಾಸಕರು ಗುರುವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪದವಿಪೂರ್ವ ಶಿಕ್ಷಣ ಪಪೂಶಿ ಇಲಾಖೆಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ)ಇಲಾಖೆ ಎಂದು ಹೆಸರು ಬದಲಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿಯು ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಪದವಿಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಹಿಂದಿನಂತೆ ಯಥಾಸ್ಥಿತಿಯಲ್ಲಿಯೇ ಇರಿಸಬೇಕು ಎಂದು ಒತ್ತಾಯಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳ ನಡುವೆ ಒಂದು ಸೇತುವೆಯಾಗಿ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬರುತ್ತಿದೆ. ಕೊಠಾರಿ ಆಯೋಗದ ಶಿಫಾರಸ್ಸಿನಂತೆ +2 ಹಂತವನ್ನು ರಾಜ್ಯದಲ್ಲಿ ಅಳವಡಿಸುವ ಸಲುವಾಗಿ ಪಿ. ಮಲ್ಲಿಕಾರ್ಜುನಪ್ಪನವರ ನೇತೃತ್ವದ ಸಮಿತಿ ನೀಡಿದ ವರದಿಯ ಆಧಾರದ ಮೇಲೆ 1971ರ ಜನವರಿಯಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬಂದಿತು. ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರ ಹಾಗೂ ಶಿಕ್ಷಣ ಸಚಿವರಾಗಿದ್ದ ವೀರಪ್ಪ ಮೊಯ್ಲಿ ದೂರದೃಷ್ಟಿ ಹಾಗೂ ಬದ್ಧತೆಯ ಫಲವಾಗಿ ಜೂನ್, 1992ರಲ್ಲಿ ಸ್ವತಂತ್ರ ಪದವಿಪೂರ್ವ ಶಿಕ್ಷಣ (ಪಪೂಶಿ) ಇಲಾಖೆ ರೂಪುಗೊಂಡು, ದೇಶದಲ್ಲಿಯೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಯಿತು.

ನಮ್ಮ ಸಿಇಟಿಗಳಲ್ಲಿ ಯಶಸ್ಸನ್ನು ಸಾಧಿಸಿದವರು ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳನ್ನ ಅಲಂಕರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನದೇ ಆದ ಶೈಕ್ಷಣಿಕ ಮೌಲ್ಯ ಮತ್ತು ಅಸ್ಮಿತೆ ಹೊಂದಿರುವ ಪಪೂಶಿ ಇಲಾಖೆಯನ್ನು ಹಂತ ಹಂತವಾಗಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿರುವುದು ದುರದೃಷ್ಟಕರ. ಪಪೂಶಿ ಇಲಾಖೆಯೇ ಇಂದು ಮರಣ ಶಯ್ಯೆಯಲ್ಲಿದೆ. ಬಂಗಾರಪ್ಪನವರ ಸುಪುತ್ರ ಮಧು ಬಂಗಾರಪ್ಪನವರೇ ಇಲಾಖೆಯ ಸಚಿವರಾಗಿದ್ದು, ಶವಪೆಟ್ಟಿಗೆಗೆ ಕಡೇ ಮೊಳೆ ಹೊಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ತೋಡಿಕೊಂಡರು.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಹಿಂತೆಗೆದು ಪುನಃ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿತಪ್ಪಿರುವ ಸಮನ್ವಯವನ್ನು ಮರುಸ್ಥಾಪಿಸಬೇಕು. ಕುಸಿಯುತ್ತಿರುವ ಪರೀಕ್ಷಾ ಮೌಲ್ಯ, ಪಾವಿತ್ರತೆಯನ್ನು ಎತ್ತಿಹಿಡಿಯಬೇಕು. ಯಾವುದೇ ಶಿಕ್ಷಕರ ಸಂಘಟನೆಗಳ ಜೊತೆಗಾಗಲಿ, ಶಿಕ್ಷಣ ತಜ್ಞರ ಜೊತೆಗಾಗಲಿ ಸಾಧಕ- ಬಾಧಕಗಳನ್ನು ಕುರಿತು ಚರ್ಚೆ, ಸಮಾಲೋಚನೆಗಳನ್ನು ನಡೆಸದೆ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ.

ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಲ್ಲ, ಓದಿನ ಬಗೆಗೆ ತಾತ್ಸಾರ ಬೆಳೆಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ಪದ್ಧತಿಯಿಂದ ನೈಜ ಮೌಲ್ಯಮಾಪನ ಸಾಧ್ಯವಾಗುವುದಿಲ್ಲ. ಈ ವಿಧಾನದಿಂದ ಪ್ರಮಾಣಾತ್ಮಕ ಫಲಿತಾಂಶ ದೊರಕುತ್ತದೆಯೇ ವಿನಃ ಗುಣಾತ್ಮಕ ಫಲಿತಾಂಶವಲ್ಲ. ಜೊತೆಗೆ ಉಪನ್ಯಾಸಕರು ಶೈಕ್ಷಣಿಕ ವರ್ಷಾರಂಭದ ಕೆಲವು ತಿಂಗಳು ನೂತನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಬಿಟ್ಟು, ಹಳೆಯ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಸಂಪೂರ್ಣ ಬೇಸಿಗೆ ರಜೆಯನ್ನು ಉಪನ್ಯಾಸಕರು ಕಳೆದುಕೊಳ್ಳಬೇಕಾಗುತ್ತದೆ. ಪಪೂಶಿ ಇಲಾಖೆಯನ್ನು ರಜೆ ರಹಿತ ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಲ್. ರಂಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜಪ್ಪ, ಕೋಶಾಧ್ಯಕ್ಷ ಎಂ.ರವೀಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್. ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜ್, ಉಪಾಧ್ಯಕ್ಷ ಕಾಂತರಾಜು ಪಿ., ಕಾರ್ಯಾಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ಕೋಶಾಧ್ಯಕ್ಷ ಎನ್.ಕೆಂಚವೀರಪ್ಪ, ಬೋಧಕೇತರ ಸಂಘದ ಅಧ್ಯಕ್ಷ ದುರುಗೇಶಪ್ಪ ಟಿ., ಪ್ರಧಾನ ಕಾರ್ಯದರ್ಶಿ ಆನಂದ ಎ.ಎಚ್., ಕೋಶಾಧ್ಯಕ್ಷ ಬಿ.ಎಚ್. ಸತೀಶ, ಗೌರವಾಧ್ಯಕ್ಷ ಬಸವಯ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು.

- - -

ಪದವಿಪೂರ್ವ ಶಿಕ್ಷಣ ಇಲಾಖೆ ಮೇಲುಸ್ತುವಾರಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ಹವಣಾಧಿಕಾರಿ ಸುಪರ್ದಿಗೆ ವಹಿಸುತ್ತಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಪ.ಪೂ ಶಿಕ್ಷಣ ಇಲಾಖೆ ಪ್ರಾಂಶುಪಾಲರು, ಉಪನ್ಯಾಸಕರು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

- - - - 23 ಸಿಟಿಡಿ3--

Share this article