ಕನ್ನಡಪ್ರಭ ವಾರ್ತೆ ರಾಮನಗರ
ರೋಟರಿ ಸಿಲ್ಕ್ ಸಿಟಿ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ಸಲ್ಲಿಸಿದ ಸಾಮಾಜಿಕ ಸೇವಾ ಕಾರ್ಯಗಳಿಗೆ 22ಕ್ಕೂ ಹೆಚ್ಚಿನ ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ ಎಂದು ರೋಟರಿ ಸಿಲ್ಕ್ ಸಿಟಿಯ ನಿರ್ಗಮಿತ ಅಧ್ಯಕ್ಷ ಸುನಿಲ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವು. ಅದನ್ನು ಗುರುತಿಸಿ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಇದರ ಹಿಂದೆ ಸದಸ್ಯರು ಹಾಗೂ ಪದಾಧಿಕಾರಿಗಳ ಸಹಕಾರ ಹೆಚ್ಚಿದೆ ಎಂದರು.
ನಮ್ಮ ಕ್ಲಬ್ ಗೆ ಪ್ಲಾಟಿನಂ ಅವಾರ್ಡ್ , ಎನ್ವಾರ್ನಮೆಂಟ್ ಪ್ಲಾಟಿನಂ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜತೆಗೆ, ಕ್ಲಬ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಬೈಸಿಕಲ್ ಸಹ ವಿತರಣೆ ಮಾಡಿದ್ದೇವೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ಸೌಕರ್ಯ ಕಲ್ಪಿಸಿದ ಹಿನ್ನೆಲೆ ಕ್ಲಬ್ ಗೆ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪರಿಸರ, ಮಹಿಳಾ ಮತ್ತು ಮಕ್ಕಳ ಸಬಲೀಕರಣ, ಸಮುದಾಯ ಮತ್ತು ಆರ್ಥಿಕಾಭಿವೃದ್ಧಿ, ಸಾರ್ವಜನಿಕ ಸೇವೆಗಳು, ಯುವ ಸೇವೆಗಳು ಸೇರಿದಂತೆ ವಿವಿಧ ಸೇವೆಗಳಿಗೆ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದರು.ಮೇಕೆದಾಟು ಸಂಗಮದ ಜಿಎಸ್ಆರ್ ಆಗಿ ಗೋಪಾಲ್ ಅವರು ಹೊಸ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ. ಅವರಿಗೆ ರೋಟರಿ ಜಿಲ್ಲಾ 3191 ಕಡೆಯಿಂದ ನ್ಯೂ ಕ್ಲಬ್ ಅಡ್ವೈಸರ್ ಪ್ರಶಸ್ತಿ ಲಭಿಸಿದರೆ, ಲತಾ ಗೋಪಾಲ್ ಅವರಿಗೆ ಬೆಸ್ಟ್ ಅಡ್ವೈಸರ್ ಪಲ್ಸ್ ಪೊಲಿಯೋ ಅವಾರ್ಡ್, ಎ.ಜಿ.ರವಿಕುಮಾರ್ ಅವರಿಗೆ ಬೆಸ್ಟ್ ಗವರ್ನರ್ ಅವಾರ್ಡ್ ದೊರಕಿದೆ ಎಂದರು.
ರೋಟರಿ ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ಶ್ರೀಧರ್ ಅವರನ್ನು ಆಯ್ಕೆ ಮಾಡಲಾಗಿದ್ದು, ರಾಮಲಿಂಗು ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಜು.9ರಂದು ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಸಿಲ್ಕ್ ಸಿಟಿಯ ಪದಾಧಿಕಾರಿಗಳಾದ ಗೋಪಾಲ್, ಪ್ರಭಾಕರ್, ರವಿ, ಎ.ಜಿ.ಸುರೇಶ್ , ಸೋಮಣ್ಣ, ಶಿವರಾಜು, ಮಂಗಳ. ಸ್ವಪ್ನ, ಹೇಮಂತ್ ಸೇರಿದಂತೆ ಹಲವರು ಇದ್ದರು.