ರಾತ್ರೋರಾತ್ರಿ ಬೆಳೆನಾಶ: ರೈತರಿಂದ ದೂರು ದಾಖಲು

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ಸರ್ವೆ ನಂ. ೬೦ರಲ್ಲಿನ ನಾಲ್ಕು ಎಕರೆ ಹಾಗೂ ಹೆಚ್ಚುವರಿ ೩ ಎಕರೆ ಭೂಮಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ವೀಲ್ ಲೋಡರ್ ಬ‍ಳಸಿ ನಾಶಪಡಿಸಲಾಗಿದೆ. ಹೊಲದಲ್ಲಿದ್ದ ಪೇರಲ ಗಿಡ, ತೆಂಗಿನ ಮರ, ಸೀತಾಫಲ ಗಿಡಗಳನ್ನು ಹಾಗೂ ಹೊಲದಲ್ಲಿದ್ದ ಪೈಪ್‌ಲೈನ್ ಹಾಗೂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ನಾಶ ಮಾಡಲಾಗಿದೆ. ಇದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ, ಕೃಷಿ ಉಪಕರಣಗಳು ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ರಣಜಿತ್‌ಪುರ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಆರ್‌ಐಪಿಎಲ್ ಸ್ಪಾಂಜ್ ಐರನ್ ಕಂಪನಿಯ ಸಿಬ್ಬಂದಿ ಡಿ. ೧ರಂದು ರಾತ್ರೋರಾತ್ರಿ ವೀಲ್ ಲೋಡರ್‌ಗಳಿಂದ ನಾಶ ಮಾಡಿದ್ದಾರೆಂದು ಆರೋಪಿಸಿ ರೈತ ಜಿ. ಪರಮೇಶ್ವರಪ್ಪ ಅವರು ಕಾರ್ಖಾನೆಯ ಸಿಬ್ಬಂದಿಗಳಾದ ದಿನೇಶ್ ಸಿಂಗ್ವೆ ಹಾಗೂ ಪ್ರಭುಗೌಡ ಎಂಬವರ ವಿರುದ್ಧ ಸಂಡೂರು ಪೊಲೀಸ್ ಠಾಣೆಯಲ್ಲಿ ಡಿ. ೨ರಂದು ದೂರು ದಾಖಲಿಸಿದ್ದಾರೆ.

ಸರ್ವೆ ನಂ. ೬೦ರಲ್ಲಿನ ನಾಲ್ಕು ಎಕರೆ ಹಾಗೂ ಹೆಚ್ಚುವರಿ ೩ ಎಕರೆ ಭೂಮಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ವೀಲ್ ಲೋಡರ್ ಬ‍ಳಸಿ ನಾಶಪಡಿಸಲಾಗಿದೆ. ಹೊಲದಲ್ಲಿದ್ದ ಪೇರಲ ಗಿಡ, ತೆಂಗಿನ ಮರ, ಸೀತಾಫಲ ಗಿಡಗಳನ್ನು ಹಾಗೂ ಹೊಲದಲ್ಲಿದ್ದ ಪೈಪ್‌ಲೈನ್ ಹಾಗೂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ನಾಶ ಮಾಡಲಾಗಿದೆ. ಇದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ, ಕೃಷಿ ಉಪಕರಣಗಳು ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ರೈತರಾದ ಜಿ. ಪರಮೇಶ್ವರಪ್ಪ ಹಾಗೂ ಕಾಡಪ್ಪ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ಜಮೀನುಗಳನ್ನು ಕೈಗಾರಿಕೆ ಸ್ಥಾಪನೆಗಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಕ್ಕೆ ಪಡೆದಿತ್ತು. ಕೆಐಎಡಿಬಿ ಕಡೆಯಿಂದ ಪಡೆದ ಜಮೀನಿನಲ್ಲಿ ಆರ್‌ಐಪಿಎಲ್ ಕಂಪನಿಯವರು ಸ್ಪಾಂಜ್ ಐರನ್ ಕಾರ್ಖಾನೆಯನ್ನು ಸ್ಥಾಪಿಸುತ್ತಿದ್ದಾರೆ. ಕೆಐಎಡಿಬಿ ಅವರು ನಮ್ಮ ಜಮೀನುಗಳನ್ನು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ೨೦೧೯ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.

ಇತ್ತೀಚೆಗೆ ಕಾರ್ಖಾನೆಯವರು ನಮ್ಮ ಹೊಲಗಳಿಗೆ ಹೋಗುವ ಬಂಡಿ ಜಾಡಿನಲ್ಲಿ ಗೇಟನ್ನು ಅಳವಡಿಸಿರುವುದಲ್ಲದೆ, ನಮ್ಮ ಜಮೀನಿಗೆ ಹೋಗಲು ಅವಕಾಶ ನೀಡುತ್ತಿಲ್ಲ. ಡಿ. ೧ರಂದು ಕಾರ್ಖಾನೆಯ ಸಿಬ್ಬಂದಿ ವೀಲ್ ಲೋಡರ್‌ಗಳನ್ನು ಬಳಸಿ, ನಮ್ಮ ಹೊಲಗಳಲ್ಲಿಯ ಬೆಳೆಯನ್ನು, ಕೃಷಿ ಪರಿಕರಗಳನ್ನು ನಾಶ ಮಾಡಿದ್ದಾರೆ. ಪ್ರಕರಣ ಕೋರ್ಟಿನಲ್ಲಿದ್ದರೂ ನಮ್ಮ ಜಮೀನುಗಳಿಗೆ ಹೋಗಲು ಕಾರ್ಖಾನೆಯವರು ಅವಕಾಶ ನೀಡುತ್ತಿಲ್ಲ. ಇದೀಗ ರೈತರ ಮೇಲೆಯೆ ಕಾರ್ಖಾನೆಯವರು ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ನಾವು ಬದುಕುವುದೇ ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಗುರುವಾರ ರಣಜಿತ್‌ಪುರ ಗ್ರಾಮಕ್ಕೆ ಭೇಟಿ ನೀಡಿದಾಗ, ಕಾರ್ಖಾನೆಯವರು ರೈತರ ಜಮೀನುಗಳಿಗೆ ಹೋಗಲು ಅವಕಾಶ ನೀಡಲಿಲ್ಲ. ದಲಿತ ರೈತರ ಮೇಲೆಯೇ ದೌರ್ಜನ್ಯ ಮಾಡಲಾಗುತ್ತಿದೆ. ರೈತರು ಬೆಳೆದ ಈರುಳ್ಳಿ ಬೆಳೆಯನ್ನು ನಾಶ ಮಾಡಿರುವುದಲ್ಲದೆ, ಅಲ್ಲಿದ್ದ ಕೃಷಿ ಪರಿಕರಗಳನ್ನು ನಾಶ ಮಾಡಲಾಗಿದೆ. ಈ ಕುರಿತು ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ್, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ, ತಾಲೂಕು ಕಾರ್ಯದರ್ಶಿ ದುರುಗಮ್ಮ ತಿಳಿಸಿದರು.

Share this article