ಹನೂರಿಗೆ ಬಣ್ಣ ಉಳಿದ ತಾಲೂಕುಗಳಿಗೆ ಸುಣ್ಣ

KannadaprabhaNewsNetwork | Published : Mar 7, 2025 11:46 PM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ಹೊಸ ಜಿಲ್ಲೆ ಹನೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಒಂದೆರಡು ಯೋಜನೆ ರೂಪಿಸಿದ್ದು, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ತಾಲೂಕನ್ನು ಕಡೆಗಣಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಗೆ ಮಹತ್ವದ ಯೋಜನೆಗಳು ಘೋಷಣೆಯಾಗಿಲ್ಲ.

ದೇವರಾಜು ಕಪ್ಪಸೋಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ಹೊಸ ಜಿಲ್ಲೆ ಹನೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಒಂದೆರಡು ಯೋಜನೆ ರೂಪಿಸಿದ್ದು, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ತಾಲೂಕನ್ನು ಕಡೆಗಣಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಗೆ ಮಹತ್ವದ ಯೋಜನೆಗಳು ಘೋಷಣೆಯಾಗಿಲ್ಲ. ಹನೂರು ತಾಲೂಕು ಕೇಂದ್ರವಾಗಿದ್ದರೂ ಆಡಳಿತ ಕಚೇರಿ ಸ್ಧಾಪನೆಯಾಗದ ಪರಿಣಾಮ ಕಚೇರಿಗಳಿಗೆ ಅಲೆಯ ಬೇಕಿತ್ತು. ಕೆಲ ಕಚೇರಿಗಳು ಸ್ಥಾಪನೆಯಾಗಿರಲೇ ಇಲ್ಲ. ಇದೀಗ ಹೊಸದಾಗಿ ತಾಲೂಕು ಪ್ರಜಾಸೌಧ ನಿರ್ಮಾಣ ಪ್ರಸ್ತಾಪವಾಗಿದೆ. ಕಾಡು ಮತ್ತು ಗಡಿಯಂಚಿನ ತಾಲೂಕು ಕೇಂದ್ರವಾದ ಹನೂರು ಭಾಗದಲ್ಲಿ ವೈದ್ಯಕೀಯ ಸೌಲಭ್ಯವಿಲ್ಲದ ಪರಿಣಾಮ ಜನರು ಆಸ್ಪತ್ರೆಗೆ ಮೈಸೂರು, ಚಾಮರಾಜನಗರ ಮತ್ತು ಕೊಳ್ಳೇಗಾಲಕ್ಕೆ ಹೋಗಬೇಕಿತ್ತು. ಇದೀಗ ಹನೂರು ತಾಲೂಕು ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಸ್ತಾಪ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಬದಲು ತಾಲೂಕು ಆಸ್ಪತ್ರೆ ನಿರ್ಮಾಣವಾಗಿದ್ದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು.₹2 ಕೋಟಿ ವೆಚ್ಚದಲ್ಲಿ ಈಜುಕೊಳ:ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕ್ರೀಡೆಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಕೂರಗಿತ್ತು. ಇದೀಗ ಬಜೆಟ್‌ನಲ್ಲಿ 2 ಕೋಟಿ ವೆಚ್ಚದಲ್ಲಿ ಚಾಮರಾಜನಗರದಲ್ಲಿ ಒಲಂಪಿಕ್ಸ್‌ ಮಾದರಿಯ (50 ಮೀಟರ್) ಈಜುಕೊಳ ನಿರ್ಮಾಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರಿಗೆ ಇಲಾಖೆಯಿಂದ ಚಾಮರಾಜನಗರ ಸೇರಿ ಮೂರು ಜಿಲ್ಲೆಗಳಿಗೆ ಒಟ್ಟು ₹20 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣ ಮಾಡುವುದಾಗಿ ಪ್ರಸ್ತಾಪ ಮಾಡಲಾಗಿದೆ.ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಧಾಪಿಸಲಾಗಿರುವ ಜಿಲ್ಲೆಯಲ್ಲಿರುವ 5 ವಸತಿ ಶಾಲೆಗಳನ್ನು 12ನೇ ತರಗತಿವರೆಗೆ ಮೇಲ್ದರ್ಜೆಗೇರಿಸಿರುವ ಬುಡಕಟ್ಟು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದೆ. ಕೆಶಿಪ್‌ನಿಂದ ಎರಡು ರಸ್ತೆ ಅಭಿವೃದ್ಧಿ ಹನೂರು ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟು ಜನರು ಬೀದಿಗಿಳಿದಿದ್ದರು. ಇದೀಗ ಬಜೆಟ್‌ನಲ್ಲಿ ಕೆ-ಶಿಪ್-4 ಯೋಜನೆಯಡಿ ಹನೂರು-ರಾಮಾಪುರ-ಪಾಲಾರ್‌ಗೆ ಸಂಪರ್ಕ ಕಲ್ಪಿಸುವ 70 ಕಿ.ಮೀ ರಸ್ತೆ ಮತ್ತು ಹುಲ್ಲಹಳ್ಳಿ-ತಗಡೂರು-ಸಂತೇಮರಹಳ್ಳಿಗೆ ಸಂಪರ್ಕ ಕಲ್ಪಿಸುವ 55 ಕಿ.ಮೀ ರಸ್ತೆ ಅಭಿವೃದ್ಧಿಗೆ ಪ್ರಸ್ತಾಪಮಾಡಲಾಗಿದೆ.ವಿಶೇಷ ಪ್ಯಾಕೇಜ್‌ ಇಲ್ಲ:ಚಾಮರಾಜನಗರ ಜಿಲ್ಲಾಕೇಂದ್ರವಾಗಿ 25 ವರ್ಷ ಪೂರೈಸಿದ್ದರೂ ಅಭಿವೃದ್ಧಿಯಾಗದ ನಿಟ್ಟಿನಲ್ಲಿ ಈ ಬಾರಿ ತಮ್ಮ ನೆಚ್ಚಿನ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ಯಾಕೇಜ್‌ ನೀಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಾವುದೇ ಪ್ಯಾಕೇಜ್ ನೀಡಿಲ್ಲ. ಕುಡಿಯುವ ನೀರಿಗಿಲ್ಲ ಆದ್ಯತೆ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇಂದಿಗೂ ವಾರಕ್ಕೊಮ್ಮೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲೇ ನೀರಿನ ಬವಣೆ ಇದೆ. ಎಲ್ಲ ಬಡಾವಣೆಗಳಿಗೂ ನಿತ್ಯ ಕಾವೇರಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ₹276 ಕೋಟಿ ವೆಚ್ಚದ ಹೊಸ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಹೊಸ ಯೋಜನೆಗೆ ಸಿದ್ದರಾಮಯ್ಯ ಅವರು ಕಾಳಜಿ ವಹಿಸದ ಪರಿಣಾಮ ಜಿಲ್ಲಾ ಕೇಂದ್ರದ ಜನತೆ ಕುಡಿಯವ ನೀರಿಗೆ ಬವಣೆ ಪಡುವುದು ಮುಂದುವರಿದಿದೆ. ಬೇಡಗಂಪಣರಿಗಿಲ್ಲ ಪ್ಯಾಕೇಜ್‌:ಜಿಲ್ಲೆಯ ಮಲೆಮಹದೇಶ್ವರಬೆಟ್ಟ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಬೇಡಗಂಪಣರು ವಾಸಿಸುವ ಹಾಡಿಗಳು ಮೂಲ ಸೌಕರ್ಯ ಕೊರತೆಯಿಂದ ಅತ್ಯಂತ ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ನಿರೀಕ್ಷೆ ಮಾಡಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ಮರೀಚಿಕೆ:ಚಾಮರಾಜನಗರ ಜಿಲ್ಲೆಯಲ್ಲಿ ಶೇ.50ರಷ್ಟು ಅರಣ್ಯ ಪ್ರದೇಶವಿದ್ದು, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಪ್ಯಾಕೇಜ್‌ ಅಗತ್ಯವಿತ್ತು. ಇಡೀ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಹೊಸ ಟೌನ್ ಶಿಪ್ ಇಲ್ಲ. ಚಾಮರಾಜನಗರ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೂ ಚಾಮರಾಜನಗರ ಪಟ್ಟಣದಲ್ಲಿ ಜನರಿಗೆ ಚುಡಾದಿಂದ ಯಾವುದೇ ನಿವೇಶನ ಹಂಚಿಕೆಯಾಗಿಲ್ಲ. ಹಾಗಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ನೂತನ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹೊಸ ಟೌನ್‌ಶಿಪ್ ನಿರ್ಮಿಸಬೇಕು ಎಂಬ ಬಹುದಶಕಗಳ ಕೂಗಿಗೆ ಬಜೆನಲ್ಲಿ ಯಾವುದೇ ಭರವಸೆ ಸಿಕ್ಕಿಲ್ಲ. ನೂತನ ವಿವಿಗೂ ಅನುದಾನವಿಲ್ಲ:ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡದ ಪರಿಣಾಮ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಗಡಿ ಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಈ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಾವುದೇ ಅನುದಾನ ನೀಡಿಲ್ಲ. ಅಲ್ಲದೆ, ಮುಂದಿನ ಶೈಕ್ಷಣಿಕ ಸಾಲಿನಿಂದ ಈಗಾಗಲೇ ಮಂಜೂರಾಗಿರುವ ಕಾನೂನು ಕಾಲೇಜು ಪ್ರಾರಂಭ ಮಾಡಲು ಬೇಕಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ.ರೇಷ್ಮೆಗಿಲ್ಲ ಆದ್ಯತೆ: ರೇಷ್ಮೆಗೆ ಒಂದು ಕಾಲದಲ್ಲಿ ಚಾಮರಾಜನಗರ ಜಿಲ್ಲೆ ಪ್ರಸಿದ್ಧಿಯಾಗಿದ್ದು, ಪ್ರಸಿದ್ಧ ರೇಷ್ಮೆ ಮಾರುಕಟ್ಟೆ ಜೊತೆಗೆ ರೇಷ್ಮೆ ಕಾರ್ಖಾನೆಗಳಿದ್ದವು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರೇ ರೇಷ್ಮೆ ಸಚಿವರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜಿಲ್ಲೆಯ ರೇಷ್ಮೆ ರೈತರ ಬವಣೆ ಬಗ್ಗೆ ತಿಳಿದುಕೊಂಡಿದ್ದರು. ಹೀಗಾಗಿ ರೇಷ್ಮೆ ಬೆಳೆಗಾರರು ಮತ್ತು ಕಾರ್ಖಾನೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುತ್ತಾರೆ ಎಂದು ಜಿಲ್ಲೆಯ ರೈತರು ಭಾರಿ ನಿರೀಕ್ಷೆ ಹೊಂದಿದ್ದರು ಆದರೆ ಎಲ್ಲವೂ ಹುಸಿಯಾಗಿದೆ.

Share this article