ಪಾಕ್‌ ಪರ ಘೋಷಣೆ ವಿಡಿಯೋ ತಿರುಚಲಾಗಿದೆ: ಮಂಜುನಾಥ ಗೌಡ

KannadaprabhaNewsNetwork | Published : Feb 29, 2024 2:01 AM

ಸಾರಾಂಶ

ಪಾಕ್ ಪರ ಘೋಷಣೆ ಕೂಗಿಲ್ಲ. ಈ ವಿಡಿಯೋ ತಿರುಚಲಾಗಿದೆ ಎಂದು ನಮ್ಮ ಹಿರಿಯ ನಾಯಕರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾಸೀರ್ ಸಾಬ್ ಜಿಂದಾಬಾದ್ ಅಂತ ಹೇಳಿದ್ದಾರೆ.

ಹೊಸಪೇಟೆ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಡಿಯೋ ತಿರುಚಲಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಆರೋಪಿಸಿದರು.

ಯುವ ಕಾಂಗ್ರೆಸ್ ನಿಂದ ಬುಧವಾರ ನಗರದ ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿಯಲ್ಲಿ‌ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ,

ಕಾಂಗ್ರೆಸ್, ಬಿಜೆಪಿ, ಸಾಮಾನ್ಯ ಜನ ಅಂತ ಅಲ್ಲ, ಪಾಕ್ ಪರ ಯಾರೇ ಘೋಷಣೆ ಕೂಗಿದರೂ ಅದು ತಪ್ಪು. ಈ ಹಿಂದೆ ಮಂಡ್ಯದಲ್ಲಿ ಘಟನೆ, ಆಗಿದ್ದೇನು? ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ಬಿಜೆಪಿ ನಾಯಕರು ಬಾಯಿ ಮುಚ್ಚಿದ್ದರು. ಆಗ ಮಾತನಾಡದವರು, ಈಗ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಪಾಕ್ ಪರ ಘೋಷಣೆ ಕೂಗಿಲ್ಲ. ಈ ವಿಡಿಯೋ ತಿರುಚಲಾಗಿದೆ ಎಂದು ನಮ್ಮ ಹಿರಿಯ ನಾಯಕರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾಸೀರ್ ಸಾಬ್ ಜಿಂದಾಬಾದ್ ಅಂತ ಹೇಳಿದ್ದಾರೆ. ಆದರೆ ಬಿಜೆಪಿ ಗಲಭೆ ಸೃಷ್ಟಿಸುವ ದೃಷ್ಟಿಯಿಂದ ಈ ರೀತಿಯ ಕೆಲಸ ಮಾಡುತ್ತಿದೆ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಒಂದು ಸಮುದಾಯ, ಪಕ್ಷವನ್ನು ಟಾರ್ಗೆಟ್ ಮಾಡಬಾರದು. ಚುನಾವಣೆ ಸಂದರ್ಭದಲ್ಲಿ ಗಲಾಟೆ, ಗಲಭೆ ತರವಲ್ಲ. ಶಾಂತಿಯುತ ರಾಜ್ಯದಲ್ಲಿ ಗಲಾಟೆ ಮಾಡಿಸುವುದು ಸಮಂಜಸವಲ್ಲ ಎಂದರು.

ಕಳೆದ ಹತ್ತು ವರ್ಷದಲ್ಲಿ ಏನು ಬದಲಾಗಿದೆ ಅಂತ ಗೊತ್ತಾಗ್ತಿಲ್ಲ. ಬಿಜೆಪಿ ಆಡಳಿತದಲ್ಲಿ ವೈಫಲ್ಯ ಕಂಡಿದೆ. ಸಂವಿಧಾನವೇ ನಮ್ಮ ಗ್ರಂಥ. ಎಲ್ಲ ವರ್ಗ, ಸಮಾಜ ಮೇಲೆ‌ ಬರಬೇಕು. ಗ್ಯಾರಂಟಿ ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ರಾಜ್ಯದ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಅಚಲ ನಂಬಿಕೆ ಇದೆ ಎಂದರು.

ಯುವ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ, ಮುಖಂಡರಾದ ನಾಗೇಶ್ ಪಾಟೀಲ್, ಭರತ್ ಕುಮಾರ್, ಜಿಸಾನ್ ಹ್ಯಾರಿಶ್, ಶಶಿಕುಮಾರ್, ಗಣೇಶ್, ಜಾವೀದ್ ಇತರರಿದ್ದರು.

Share this article