ಸಮಾಜದ ಪರಿವರ್ತನೆಗೆ ಶಿಕ್ಷಣ ಪ್ರಬಲ ಮಾಧ್ಯಮ. ಈ ನಿಟ್ಟಿನಲ್ಲಿ ಬಡತನ ನಿರ್ಮೂಲನೆ, ಬಡ ವಿದ್ಯಾರ್ಥಿಗಳ, ಹಿಂದುಳಿದವರ ಶಿಕ್ಷಣಕ್ಕೆ ನೆರವಾಗಿ ಸಾಮಾಜಿಕ ಬದಲಾವಣೆ ಮಾಡುತ್ತಿರುವ ಕೃಷ್ಣ ಜೆ. ಪಾಲೆಮಾರ್ ಶ್ರಮ ಶ್ಲಾಘನೀಯ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ, ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.
ಮಂಗಳೂರು: ಸಮಾಜದ ಪರಿವರ್ತನೆಗೆ ಶಿಕ್ಷಣ ಪ್ರಬಲ ಮಾಧ್ಯಮ. ಈ ನಿಟ್ಟಿನಲ್ಲಿ ಬಡತನ ನಿರ್ಮೂಲನೆ, ಬಡ ವಿದ್ಯಾರ್ಥಿಗಳ, ಹಿಂದುಳಿದವರ ಶಿಕ್ಷಣಕ್ಕೆ ನೆರವಾಗಿ ಸಾಮಾಜಿಕ ಬದಲಾವಣೆ ಮಾಡುತ್ತಿರುವ ಕೃಷ್ಣ ಜೆ. ಪಾಲೆಮಾರ್ ಶ್ರಮ ಶ್ಲಾಘನೀಯ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ, ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.ಅವರು ಶನಿವಾರ ಮಂಗಳೂರಿನ ಮೇರಿಹಿಲ್ ಪಾಲೇಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಲ್ಯಾಂಡ್ ಲಿಂಕ್ಸ್ ಸಂಸ್ಥೆ ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾಭವನಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮಾಜಿ ಸಚಿವ ಕೃಷ್ಣ ಪಾಲೇಮಾರ್‌ರವರು ಕೈಗಾರಿಕೋದ್ಯಮಿ, ಬಿಲ್ಡರ್, ಶಿಕ್ಷಣ ಕ್ಷೇತ್ರ, ಧಾರ್ಮಿಕ, ಸಾಮಾಜಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅರ್ಹರಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸಿದ್ದಾರೆ ಎಂದರು.ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸಾಮುದಾಯಿಕ ಒಳಗೊಳ್ಳುವಿಕೆ, ವಿಚಾರ ಸಂಕಿರಣಗಳು, ಆರ್ಥಿಕ ಸಂವಾದಗಳು, ಕೌಶಲ್ಯಾಭಿವೃದ್ಧಿ ಕುರಿತಾದ ಕಾರ್ಯಕ್ರಮಗಳು ನಡೆಯಲಿ. ಅಭಿವೃದ್ಧಿ ಪೂರಕ, ಸಾಮಾಜಿಕ ಜಾಗೃತಿ, ಸೌಹಾರ್ದತೆಗೆ ಕೇಂದ್ರವಾಗಲಿ. ಇಲ್ಲಿ ವಿವಾಹಕ್ಕೊಳಗಾದವರಿಗೆ ಶ್ರೇಯಸ್ಸು ಉಂಟಾಗಲಿ ಎಂದು ಶುಭ ಹಾರೈಸಿದರು.‘ಕೋಟಿಗೊಬ್ಬ ಪಾಲೇಮಾರ್’: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಕರ್ತವ್ಯನಿಷ್ಠೆ, ಉತ್ತಮ ನಡವಳಿಕೆ, ತಂದೆ ತಾಯಿ ಆಶೀರ್ವಾದ ಇದ್ದರೆ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಕೃಷ್ಣ ಪಾಲೇಮಾರ್ ಸಾಕ್ಷಿ. ಒಂದು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ತನ್ನ ಕೈಂಕರ್ಯದ ಮೂಲಕ ಏಕಕಾಲದಲ್ಲಿ ನಾಲ್ಕು ಸಭಾಭವನಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದು, ಅದರಿಂದ ಬಂದ ಆದಾಯವನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಸಂಕಲ್ಪ ತೊಟ್ಟಿರುವುದು ಅಪೂರ್ವ ಸಂಗತಿ. ಈ ಮೂಲಕ ರಾಷ್ಟ್ರದ ಪ್ರಗತಿಗೂ ಅವರು ಕೊಡುಗೆ ನೀಡಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಇರುವ ಅವರ ವ್ಯಕ್ತಿತ್ವ ‘ಕೋಟಿಗೊಬ್ಬ ಪಾಲೆಮಾರ್’ ಎನ್ನುವಂತದ್ದು ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ತುಳುನಾಡಿನ ಸೌಂದರ್ಯದ ಕಿರೀಟವಾಗಿ ಪಾಲೇಮಾರ್ ಕನ್ವೆನ್ಶನ್ ಸೆಂಟರ್ ಮೂಡಿಬಂದಿದೆ. ಆರ್ಥಿಕ ವ್ಯವಸ್ಥೆ ಚಲನಶೀಲವಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಂದು ಉದ್ಘಾಟನೆಗೊಂಡಿರುವ ನಾಲ್ಕು ಸಭಾಭವನಗಳು ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ. ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ ಬದ್ಧತೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮೂಲಕ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಪಾಲೇಮಾರ್ ತೋರಿಸಿಕೊಟ್ಟಿದ್ದಾರೆ. ಪಾಲೇಮಾರ್ ವ್ಯಕ್ತಿತ್ವ ಯುವಜನತೆಗೆ ಮಾದರಿಯಾಗಿದೆ. ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬಿಡುಗಡೆ ಆಗಬೇಕು ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಪ್ರದೀಪ್ ಪಾಲೇಮಾರ್, ಪ್ರಸನ್ನ ಪಾಲೇಮಾರ್ ಇದ್ದರು.
ಕೈಗೆಟಕುವ ದರದಲ್ಲಿ ಲಭ್ಯ: ಕೃಷ್ಣ ಜೆ. ಪಾಲೇಮಾರ್‌ಲ್ಯಾಂಡ್ ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಜನರ ಪ್ರೀತಿ, ವಿಶ್ವಾಸದಿಂದ ಈ ಕಾರ್ಯಸಾಧನೆ ಆಗಿದೆ. ಪಾಲೆಮಾರ್ ಕನ್ವೆನ್ಶನ್ ಸೆಂಟರ್ ವಿಕಾಸ್ ಎಜುಕೇಶನ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ಶಿಕ್ಷಣ, ಹಿಂದುಳಿದವರ ಏಳಿಗೆಗೆ ಪ್ರೋತ್ಸಾಹ ನೀಡಲಾಗುವುದು. ಬಡವರ್ಗದ ಜನರಿಗೆ ಉಪಯೋಗ ಆಗುವ ದೃಷ್ಟಿಯಿಂದ ನಾಲ್ಕು ಸಭಾಂಗಣಗಳನ್ನು ನಿರ್ಮಿಸಲಾಗಿದೆ ಎಂದರು.ಸಾಧಕರಿಗೆ ಗೌರವಾರ್ಪಣೆ: ಸಮಾರಂಭದಲ್ಲಿ ಶಕ್ತಿನಗರದ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಸಾನಿಧ್ಯದ ವಿದ್ಯಾರ್ಥಿಗಳಿಗೆ, ಸ್ನೇಹದೀಪ ಸಂಸ್ಥೆ ಸಂಸ್ಥಾಪಕಿ ತಬಸ್ಸುಮ್, ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದಿವ್ಯಾಂಗ ಕಲಾವಿದ ಕೌಶಿಕ್ ಆಚಾರ್ಯ, ಸಮಾಜ ಸೇವಕಿ ಗೀತಾ ಶೆಟ್ಟಿ ಹಾಗೂ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ಟ್ರಸ್ಟಿ ಜೆ. ಕೊರಗಪ್ಪ ಅವರಿಗೆ ಗೌರವಾಭಿನಂದನೆ ಅರ್ಪಿಸಲಾಯಿತು. ಎಂಜಿನಿಯರ್ ಪ್ರವೀಣ್‌ಕುಮಾರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಏಕಕಾಲಕ್ಕೆ 4 ಸಭಾಂಗಣ ಲೋಕಾರ್ಪಣೆ: ಈ ಸಂದರ್ಭ ಮೇರಿಹಿಲ್ ಪಾಲೇಮಾರ್ ಕನ್ವೆನ್ಶನ್, ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೇಮಾರ್ ಫಾರ್ಮ್ಸ್ ಸಭಾಭವನ, ಜೆಪ್ಪಿನಮೊಗರು ಕಡೆಕಾರ್‌ನ ನೇತ್ರಾವತಿ ಸಭಾಭವನವನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ನಿರ್ದೇಶನದಲ್ಲಿ ಪ್ರಸಿದ್ಧ ಕಲಾವಿದರಿಂದ ‘ಶ್ರೀ ಕೃಷ್ಣ ಲೀಲಾಮೃತ’ ಯಕ್ಷ ನಾಟ್ಯ ಹಾಸ್ಯ ರಂಜನೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.