ನೆಮ್ಮದಿಯ ಬದುಕಿಗೆ ಪಂಚ ಆರೋಗ್ಯ ಸೂತ್ರ ಅಗತ್ಯ

KannadaprabhaNewsNetwork | Published : Mar 19, 2024 12:46 AM

ಸಾರಾಂಶ

ಬಾಗಲಕೋಟೆ: ನಮ್ಮ ನೆಮ್ಮದಿಯ ಬದುಕಿನ ಸೂತ್ರಕ್ಕೆ, ಆನಂದಕ್ಕೆ ಐದು ಆರೋಗ್ಯಗಳು ಮುಖ್ಯ ಎಂದು ಸಂಸ್ಕೃತಿಕ ಚಿಂತಕ, ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡರು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆನಮ್ಮ ನೆಮ್ಮದಿಯ ಬದುಕಿನ ಸೂತ್ರಕ್ಕೆ, ಆನಂದಕ್ಕೆ ಐದು ಆರೋಗ್ಯಗಳು ಮುಖ್ಯ ಎಂದು ಸಂಸ್ಕೃತಿಕ ಚಿಂತಕ, ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡರು ಪ್ರತಿಪಾದಿಸಿದರು.

ನಗರದ ಸಾಮಾಜಿಕ ಸೇವಾ ಸಂಸ್ಥೆ ಗೆಳೆಯರ ಬಳಗ ಹಾಗೂ ಚರಂತಿಮಠದ ಶಿವಾನುಭವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಬದುಕಿನ ಸೊಗಸು ಸೌಂದರ್ಯ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾರೀರಕ ಆರೋಗ್ಯ, ಮಾನಸಿಕ ಆರೋಗ್ಯ, ಭಾವನಾತ್ಮಕ ಆರೋಗ್ಯ, ಸಾಮಾಜಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ ಬಹಳ ಮುಖ್ಯ. ನಮಗೆ ಬೇಕಾಗಿರುವುದು ಈ ಐದು ಆರೋಗ್ಯಗಳು. ಇವುಗಳನ್ನು ಅರಿತರೆ ನಮ್ಮ ಬದುಕು ಸುಗಮ ಎಂದು ತಿಳಿಸಿದರು.ಅಂಗಡಿಯಲ್ಲಿ ಬೆಡ್ ಕೊಳ್ಳಬಹುದೇ ಹೊರತು ನಿದ್ದೆ ಕೊಳ್ಳಲಾಗದು. ಹೀಗೆಯೇ ಸಂತೋಷ, ನೆಮ್ಮದಿಯನ್ನು ಅಂಗಡಿಯಲ್ಲಿ ಕೊಳ್ಳಲಾಗುವುದಿಲ್ಲ. ನೆಮ್ಮದಿ -ಖುಷಿಯ ಬದುಕು ವಸ್ತುಗಳನ್ನು ಕೊಳ್ಳುವುದರಲ್ಲಿ ಸಿಗುವುದಿಲ್ಲ. ಹಾಗೆಯೇ ನೆರೆ ಮನೆಯವರೊಂದಿಗೆ ಹೋಲಿಸಿಕೊಂಡು ಬದುಕುವುದರಲ್ಲೂ ಸಿಗಲಾರದು ಎಂದು ಅವರು ವಿವರಿಸಿದರು. ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಬಂಧಗಳ ಮಹತ್ವ ತಿಳಿಸಬೇಕು. ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ತಿಳಿಸುವುದರ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಿ. ಸಣ್ಣ ಸಣ್ಣ ಸಂಗತಿಗಳಲ್ಲಿ ಖುಷಿ ಕಾಣಿರಿ ಎಂದು ಸಲಹೆ ನೀಡಿದರು.

ಆಕಾಶದಲ್ಲಿ ಹಕ್ಕಿಗಳ ಹಾರಾಟ ಕಂಡ ಕುವೆಂಪು ಅವರು ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು ಎಂದು ಖುಷಿ ಪಟ್ಟರು. ಹಾಗೆಯೇ ರೇಷ್ಮೇ ಹುಳು ತನ್ನ ಸುತ್ತ ದಾರದಿಂದ ಸುತ್ತಿಕೊಳ್ಳುತ್ತಾ ಅಂತಿಮವಾಗಿ ತಾನೇ ಬಲಿಯಾಗುವ ಹಾಗೆ ನಾವು ಅತಿಯಾಸೆ, ಅಸೂಯೆ, ಅಸಮಾಧಾನಕ್ಕೆ ಒಳಗಾಗದೇ ಸರಳವಾದ, ಸುಂದರ ಬದುಕು ಕಟ್ಟಿಕೊಂಡರೆ ಆನಂದ ತನ್ನಿಂದ ತಾನೇ ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.

ಚರಂತಿಮಠದ ಶ್ರೀ ಮ.ನಿ.ಪ್ರ ಪೂಜ್ಯ ಪ್ರಭು ಸ್ವಾಮಿಗಳು ದಿವ್ಯ ಸಾನ್ನಿದ್ಯ ವಹಿಸಿದ್ದರು. ವೇದಿಕೆ ಮೇಲೆ ಚರಂತಿಮಠದ ಶಿವಾನುಭವ ಸಮಿತಿ ಅಧ್ಯಕ್ಷ ಪಂಡಿತ ಆರಬ್ಬಿಯವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೇಯಾ ಜೋರಾಪೂರ ಪ್ರಾರ್ಥಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಮಹಾಬಳೇಶ್ವರ ಗುಡಗುಂಟಿಯವರು ಪರಿಚಯಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ ದರಬಾರ ವಂದಿಸಿದ ಕಾರ್ಯಕ್ರಮವನ್ನು ಬಸವರಾಜ ಭಗವತಿ ನಿರೂಪಿಸಿದರು.

Share this article