ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ದಿನದಿಂದ ದಿನಕ್ಕೆ ಕಾವು ಜೋರಾಗುತ್ತಿದ್ದು, ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ವೀರಶೈವ ಲಿಂಗಾಯತರಲ್ಲಿಯ ಉಪಪಂಗಡ ಪಂಚಮಸಾಲಿ ಸಮಾಜದ ಕೊಡುಗೆ ಬೆಟ್ಟದಷ್ಟಿದೆ. ಆದರೆ, ಲಿಂಗಾಯತರಲ್ಲಿಯೇ ಜನಸಂಖ್ಯೆ ಬಾಹುಳ್ಯದಲ್ಲಿ ಅತಿಹೆಚ್ಚು ಇರುವ ಪಂಚಮಸಾಲಿ ಸಮಾಜಕ್ಕೆ ಬಿಜೆಪಿಯಿಂದ ನಿರೀಕ್ಷಿಸಿದಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಅನುಭವಿಸಿದಾಗ ಪಂಚಮಸಾಲಿಗರಿಗೆ ಮಂತ್ರಿ ಭಾಗ್ಯ ದೊರಕಿದರೂ, ಅಲ್ಲಿಂದ ಮುಂದೆ ಸಾಗಲಿಲ್ಲ ಎಂದು ಪಂಚಮಸಾಲಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
9 ವರ್ಷಗಳ ಬಿಜೆಪಿ ಅಧಿಕಾರದ ಅವಧಿಯಲ್ಲಿ 4 ಜನ ಮುಖ್ಯಮಂತ್ರಿ ಪದವಿಗೇರಿದರು. ಅದರಲ್ಲಿ ಮೂವರು ಲಿಂಗಾಯತ ಸಮುದಾಯದಕ್ಕೆ ಸೇರಿದವರು. ಐದು ಜನ ಡಿಸಿಎಂ ಹುದ್ದೆ ಅನುಭವಿಸಿದರು.
ಅದರಲ್ಲಿ ಒಬ್ಬರು ಲಿಂಗಾಯತರಿಗೆ ಉಪಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಆದರೆ, ಒಮ್ಮೆಯೂ ಪಂಚಮಸಾಲಿ ಸಮುದಾಯಕ್ಕೆ ಸಿಎಂ, ಡಿಸಿಎಂ ಆಗುವ ಅವಕಾಶ ದೊರೆಯಲಿಲ್ಲ ಎಂದು ಪಂಚಮಸಾಲಿ ಸಮುದಾಯದಲ್ಲಿ ಚರ್ಚೆ ನಡೆದಿದೆ.
ಕೇಂದ್ರದಲ್ಲಿ ಬಿಜೆಪಿ 15 ವರ್ಷದಿಂದ ಅಧಿಕಾರದಲ್ಲಿದೆ. ಸುರೇಶ ಅಂಗಡಿ, ಜಿ. ಎಂ. ಸಿದ್ದೇಶ್ವರ, ಭಗವಂತ ಖೂಬಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಬಾಬಾಗೌಡ ಪಾಟೀಲ ಹಾಗೂ ಬಸನಗೌಡ ಪಾಟೀಲ ಯತ್ನಾಳರನ್ನು ಹೊರತು ಪಡಿಸಿದರೆ ಕಳೆದ 10 ವರ್ಷದ ಅವಧಿಯಲ್ಲಿ ಯಾವ ಪಂಚಮಸಾಲಿಗೂ ಇಲ್ಲಿಯವರೆಗೂ ಕೇಂದ್ರ ಮಂತ್ರಿ ಆಗುವ ಅವಕಾಶವೂ ದೊರೆತಿಲ್ಲ.
ಕಿತ್ತೂರು ಕರ್ನಾಟಕದ ಬೆಳಗಾವಿ, ವಿಜಯಪುರ, ಚಿಕ್ಕೋಡಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ವಿಜಯಪುರ ಮೀಸಲು ಕ್ಷೇತ್ರ ಹೊರತುಪಡಿಸಿ ಬೆಳಗಾವಿ, ಚಿಕ್ಕೋಡಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಿಗೆ ಇಲ್ಲಿಯವರೆಗೂ ಪಂಚಮಸಾಲಿಗಳಿಗೆ ಟಿಕೆಟ್ ನೀಡಿಲ್ಲ ಎಂದು ಮುಖಂಡರು ಅಸಮಾಧಾನ ತೋಡಿಕೊಂಡಿದ್ದಾರೆ.
ಅಖಂಡ ಪಂಚಮಸಾಲಿ ಸಮಾಜದಲ್ಲಿ ಶೇ.10 ರಷ್ಟಿರುವ ಬೇರೆ ಲಿಂಗಾಯತ ಉಪಪಂಗಡದವರು ಬಿಜೆಪಿಯಿಂದ 5 ಜನ ಸಂಸದರಾಗಿದ್ದಾರೆ. ಅಲ್ಲದೇ ಕೇಂದ್ರ ಮಂತ್ರಿಯೂ ಆಗಿದ್ದಾರೆ.
ಆದರೆ ಶೇ.80ರಷ್ಟಿರುವ ಪಂಚಮಸಾಲಿ ಸಮಾಜದಿಂದ ಕೇವಲ ಒಬ್ಬರು ಸಂಸದರಿದ್ದಾರೆ. ಈ ಬೇಸರ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೊನೆಗೊಳ್ಳಬೇಕು.
ಬಾಗಲಕೋಟೆ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಪಂಚಮಸಾಲಿಗರಿಗೆ ಅವಕಾಶ ನೀಡಬೇಕು. ಆ ಮೂಲಕ ಈ ತಾರತಮ್ಯದ ಕೊನೆಗೊಳಿಸಬೇಕು.
ಹೈಕಮಾಂಡ್ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಪಂಚಮಸಾಲಿ ಸಮಾಜ ಬಿಜೆಪಿಯ ಬೆನ್ನಿಗೆ ನಿಲ್ಲಲಿದೆ ಎಂಬ ಅಭಿಪ್ರಾಯ ಪಂಚಮಸಾಲಿ ಮುಖಂಡರಿಂದ ಕೇಳಿ ಬರುತ್ತಿದೆ.