ಬೆಳಗಾವಿ ಸುವರ್ಣ ಸೌಧ ಮತ್ತಿಗೆಗೆ ಪಂಚಮಸಾಲಿ ಸಂಕಲ್ಪ

KannadaprabhaNewsNetwork |  
Published : Dec 06, 2024, 09:00 AM IST
4ಕೆಡಿವಿಜಿ13, 14, 15-ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಇತರರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಡಿ.10ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹೋರಾಟಕ್ಕೆ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಯಿಂದಲೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುವವರೆಗೂ ನಾವ್ಯಾರೂ ಸುಮ್ಮನೇ ಕೂಡುವುದೂ ಇಲ್ಲ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಮುಖಂಡ, ಮಾಜಿ ಶಾಸಕ ಶಿವಶಂಕರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಡಿ.10ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹೋರಾಟಕ್ಕೆ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಯಿಂದಲೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುವವರೆಗೂ ನಾವ್ಯಾರೂ ಸುಮ್ಮನೇ ಕೂಡುವುದೂ ಇಲ್ಲ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಮುಖಂಡ, ಮಾಜಿ ಶಾಸಕ ಶಿವಶಂಕರ್ ಹೇಳಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಬುಧವಾರ ಬೆಳಗಾವಿ ಹೋರಾಟದ ಹಿನ್ನೆಲೆಯಲ್ಲಿ ಸಮಾಜದ ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ವಿದ್ಯಾರ್ಥಿ, ಯುವ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಒದಗಿಸುವಂತೆ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಹೋರಾಟ ಇದೀಗ 7ನೇ ಹಂತಕ್ಕೆ ತಲುಪಿದೆ ಎಂದರು. ಬೆಳಗಾವಿಯಲ್ಲಿ ಡಿ.10ರಂದು ಕನಿಷ್ಟ 1 ಸಾವಿರ ಟ್ರ್ಯಾಕ್ಟರ್ ಗಳ ಸಮೇತ ಬೃಹತ್ ರ್‍ಯಾಲಿ ನಡೆಸಿ, ಅಲ್ಲಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ನಮ್ಮ ಹೋರಾಟಕ್ಕೆ ಯಾವುದೇ ಅಡ್ಡಿ, ಆತಂಕ ಎದುರಾದರೂ ಅದನ್ನೆಲ್ಲಾ ಮೆಟ್ಟಿ ನಿಂತು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಶತಃಸಿದ್ಧ. ಇದಕ್ಕಾಗಿ ಸಮಾಜ ಬಾಂಧವರು ಸನ್ನದ್ಧವಾಗಿರಬೇಕು ಅವರು ಹೇಳಿದರು. ಶರಣು ಶರಣಾರ್ಥಿ, ರಸ್ತೆ, ಹೆದ್ದಾರಿಯಲ್ಲೇ ಲಿಂಗಪೂಜೆ, ವಕೀಲರಿಂದ ಮುತ್ತಿಗೆ ಸೇರಿದಂತೆ 6 ಹಂತದ ಹೋರಾಟ ನಡೆಸಲಾಗಿದೆ. ಆದರೂ, ನಮಗೆ ಮೀಸಲಾತಿ ಮರೀಚಿಕೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದರೆ, ಮೀಸಲಾತಿ ನೀಡುವುದಾಗಿ ಬಿಂಬಿಸಿತ್ತು. ಆದರೆ, ನಮ್ಮ ಬೇಡಿಕೆಗೆ ಸ್ಪಂದಿಸದ ಕಾಂಗ್ರೆಸ್‌ ಸರ್ಕಾರವು ನಮ್ಮ ಸಮಾಜಕ್ಕೆ ಕಂಟಕವಾಗಿದೆ ಎಂದರು.

ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಜಿ. ಅಜಯಕುಮಾರ ಮಾತನಾಡಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸುತ್ತಾಡಿ, ಸಮಾಜ ಸಂಘಟಿಸುತ್ತಿದ್ದಾರೆ. ಶ್ರೀಗಳ ಜೊತೆಗೆ ನಾವೂ ಕೈಜೋಡಿಸಿದರೆ 2 ಎ ಮೀಸಲಾತಿ ಸಿಕ್ಕೇ ಸಿಗುತ್ತದೆ. ಬೆಳಗಾವಿಯಲ್ಲಿ ಡಿ.10ರಂದು ನಡೆಯುವ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಸಮೇತ ಹೋರಾಟದಲ್ಲಿ ಭಾಗಿಯಾಗಬೇಕು. ಸಮಾಜದ ಹೋರಾಟಕ್ಕಾಗಿ ಡೀಸೆಲ್ ವ್ಯವಸ್ಥಯನ್ನು ನಾವು ಮಾಡಲಿದ್ದೇವೆ ಎಂದು ಘೋಷಿಸಿದರು.

ಸರ್ಕಾರಕ್ಕೆ ಪಂಚಮಸಾಲಿ ಸಮಾಜದ ಶಕ್ತಿ ತೋರಿಸುವ ಅವಕಾಶ ಈಗ ಸಿಕ್ಕಿದೆ. ಸಮಾಜದ ಭವಿಷ್ಯವಾದ ವಿದ್ಯಾರ್ಥಿ, ಯುವ ಜನರಿಗೆ ಶಿಕ್ಷಣ, ಉದ್ಯೋಗಕ್ಕಾಗಿ 2 ಎ ಮೀಸಲಾತಿಗಾಗಿ ಹೋರಾಟದಲ್ಲಿ ನಾವು ಯಶಸ್ಸು ಸಾಧಿಸುವವರೆಗೂ ಹೋರಾಟ ನಿರಂತರ ಎಂದು ಅವರು ಹೇಳಿದರು.

ಸಮಾಜದ ಮುಖಂಡರಾದ ಮಹಾಂತೇಶ ವಿ.ಒಣರೊಟ್ಟಿ ಮಾತನಾಡಿ, ಡಿ.10ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುವಂತಹ ಸಮಾಜ ಬಾಂಧವರಿಗಾಗಿ ಎರಡು ಬಸ್ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದರು. ಸಮಾಜದ ಮುಖಂಡ ಎಸ್. ಓಂಕಾರಪ್ಪ, ದೀಟೂರು ಶೇಖರಪ್ಪ, ಮಿಟ್ಲಕಟ್ಟೆ ಚಂದ್ರಣ್ಣ, ಚಂದ್ರಶೇಖರಪ್ಪ, ಬಸವರಾಜಪ್ಪ, ಮೋತಿ ಶಂಕರಪ್ಪ, ಕೊಟ್ರೇಶ, ಮುರುಗೇಶ, ಆನಂದ ಜಿರ್ಲಿ, ಕಾಶೀಪುರ ನಿಜಲಿಂಗಪ್ಪ, ದೇವೇಂದ್ರಪ್ಪ, ವಕೀಲರಾದ ಯೋಗೇಶ, ಗುರುಮೂರ್ತಿ ಸೇರಿದಂತೆ ನೂರಾರು ಜನ ಪಂಚಮಸಾಲಿ ಮುಖಂಡರು, ಸಮಾಜ ಬಾಂಧವರು ಸಭೆಯಲ್ಲಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ