ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡಾ.ಸಿ.ಎ.ಅರವಿಂದ್ ಬಣದ ಅಭ್ಯರ್ಥಿಗಳು ಶನಿವಾರ ಚುನಾಯಿತರಾದರು.ಸಂಘದ ಅಧ್ಯಕ್ಷರಾಗಿ ಎಸ್.ಎನ್.ಕೆಂಪೇಗೌಡ, ರಾಜ್ಯ ಪರಿಷತ್ ಸದಸ್ಯರಾಗಿ ಡಾ.ಸಿ.ಎ.ಅರವಿಂದ್ ಹಾಗೂ ಖಜಾಂಚಿಯಾಗಿ ಎನ್.ಜೆ.ಜಯರಾಮು ಅವರು ಭಾರೀ ಮತಗಳ ಅಂತರದಲ್ಲಿ ಚುನಾಯಿತರಾದರು.
ಒಟ್ಟು 31 ನಿರ್ದೇಶಕ ಬಲದ ಸರ್ಕಾರಿ ನೌಕರರ ಸಂಘದ ಮೂರು ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡಾ.ಸಿ.ಎ.ಅರವಿಂದ್ ಮತ್ತು ಗಡ್ಡ ಚಂದ್ರಶೇಖರ್ ಬಣದಿಂದ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಡಾ.ಸಿ.ಎ.ಅರವಿಂದ್ ಬಣದ ಮೂವರು ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ವಿಜೇತರಾದರು. ಅಧ್ಯಕ್ಷರಾಗಿ ಶಿಕ್ಷಕ ಎಸ್.ಎನ್.ಕೆಂಪೇಗೌಡ 20 ಮತಗಳು ಪಡೆದರೆ, ಪ್ರತಿಸ್ಪರ್ಧಿ ಮಾಣಿಕ್ಯನಹಳ್ಳಿ ಜಯರಾಮು 11 ಮತ, ರಾಜ್ಯ ಪರಿಷತ್ ಸದಸ್ಯ ಸ್ಥಾನದ ಅಭ್ಯರ್ಥಿ ಡಾ.ಸಿ.ಎ.ಅರವಿಂದ್ 21 ಮತ, ಪ್ರತಿಸ್ಪರ್ಧಿ ರಾಮಕೃಷ್ಣೇಗೌಡ 10 ಮತ ಹಾಗೂ ಖಜಾಂಚಿ ಎನ್.ಜೆ.ಜಯರಾಮು 22 ಮತಗಳ ಪಡೆದರೆ ಪ್ರತಿಸ್ಪರ್ಧಿ ವೇಣಿಗೋಪಾಲ್ 9 ಮತ ಪಡೆದರು. ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಶಿವಪ್ಪ ಕರ್ತವ್ಯ ನಿರ್ವಹಿಸಿದರು.
ಶಾಸಕ ದರ್ಶನ್ ಗೆ ಅಭಿನಂದನೆ:ನೂತನ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಚುನಾವಣೆಗೂ ಮುನ್ನ ಸರ್ಕಾರಿ ನೌಕರರು ಸಂಘಕ್ಕೆ ಚುನಾವಣೆ ನಡೆಸುವುದು ಸರಿಯಲ್ಲ. ಎಲ್ಲಾ ನೌಕರರು ಹೊಂದಾಣಿಕೆಯಿಂದ ಅಧಿಕಾರ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದರು.
ಆದರೆ, ಅನಿವಾರ್ಯ ಕಾರಣಗಳಿಂದ ಚುನಾವಣೆ ನಡೆಯಿತು. ಶಾಸಕರ ಮಾರ್ಗದರ್ಶನ, ಸಹಕಾರ ಮತ್ತು ರೈತಸಂಘದ ಮುಖಂಡರ ಹೋರಾಟದ ಫಲವಾಗಿ ನಮ್ಮ ತಂಡ ಗೆಲುವು ಸಾಧಿಸಿದೆ. ಎಲ್ಲಾ ಸರ್ಕಾರಿ ನೌಕರರು ಸಹಕಾರದಿಂದ ಈ ಗೆಲುವು ಸಾಧ್ಯವಾಗಿದೆ ಎಂದರು.ಚುನಾವಣೆ ಸಂದರ್ಭದಲ್ಲಿ ಫಲಿತಾಂಶ ವ್ಯತಿರಿಕ್ತವಾಗುತ್ತದೆ ಎಂಬ ಕಾಡುತ್ತಿತ್ತು. ಆದರೆ, ಎಲ್ಲರೂ ನಿರೀಕ್ಷೆಯಂತೆ ಫಲಿತಾಂಶ ನಮ್ಮ ತಂಡದ ಪರವಾಗಿ ಬಂದಿದೆ. ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರ ಸಲಹೆ ಸೂಚನೆಯಂತೆ ಪಕ್ಷಾತೀತವಾಗಿ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕೆ ಸಹಕರಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕುಟುಂಬ ವರ್ಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ರೈತಸಂಘದ ಮುಖಂಡರಾದ ರಾಘವ, ಎಸ್.ದಯಾನಂದ್, ಚಿಕ್ಕಾಡೆ ವಿಜೇಂದ್ರ, ಕೆನ್ನಾಳು ನಾಗರಾಜು, ಯುವರಾಜ ಅಭಿನಂದಿಸಿ ಉತ್ತಮ ಕೆಲಸ ಮಾಡುವಂತೆ ಸಲಹೆ ನೀಡಿದರು.ಮುಖಂಡರಾದ ಚಿಕ್ಕಾಡೆ ಪರಮೇಶ್, ಶಿಕ್ಷಕ ಕುಮಾರ್, ಅನಂತಮೂರ್ತಿ, ನಾಗೇಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.