ಕನ್ನಡಪ್ರಭ ವಾರ್ತೆ ಹನೂರುಘನನೀಲಿ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ ನಾಲ್ಕನೇ ದಿನವಾದ ಭಾನುವಾರ ಪಂಕ್ತಿ ಸೇವೆ ಹಾಗೂ ಹಲವು ಉತ್ಸವಗಳ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಪ್ರದಾಯದಂತೆ ನಡೆದವು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಸಿದ್ಧಿ ಪ್ರಖ್ಯಾತಿ ಪಡೆದಿರುವ ಪಂಕ್ತಿ ಸೇವೆ ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧ ಪಡಿಸಿರುವುದರಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಜಾತ್ರೆಗೆ ಬರುವ ವಾಹನಗಳನ್ನು ತೀವ್ರವಾಗಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಜಾತ್ರೆಗೆ ಬಂದ ಭಕ್ತರು ಸಿದ್ದಪ್ಪಾಜಿಗೆ ಸಾಂತ್ವಿಕ ಪೂಜೆ ಸಲ್ಲಿಸಿದರು.ವಾಸ್ತವ್ಯ ಬಿಡಾರಗಳು: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಚಿಕ್ಕಲೂರು ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದು ದೇವಾಲಯ ಹಾಸುಪಾಸು ಇರುವಂತ ಸ್ಥಳಗಳಲ್ಲಿ ಜಮೀನುಗಳಲ್ಲಿ ಬಿಡಾರಗಳನ್ನು ಹಾಕುವ ಮೂಲಕ ತಮ್ಮ ನೆಂಟರಿಷ್ಟರು ಕುಟುಂಬದವರ ಜೊತೆ ಭಕ್ತರು ವಾಸ್ತವ್ಯ ಹೂಡಿದ್ದರು.ಅಧಿಕಾರಿಗಳ ಕಣ್ಗಾವಲು: ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಪಡಿಸಿರುವುದರಿಂದ ಅಧಿಕಾರಿಗಳ ತಂಡ ಜಾತ್ರೆಯ ದೇವಾಲಯದ ಸುತ್ತಮುತ್ತಲಿನ ಜಮೀನುಗಳಲ್ಲಿಯೂ ಸಹ ಮಫ್ತಿಯಲ್ಲಿ ಪೊಲೀಸರ ಕಣ್ಗಾವಲಿನ ನಡುವೆಯೂ ಅಧಿಕಾರಿಗಳ ಕಣ್ಣು ತಪ್ಪಿಸಿ ಬಹುದೂರದ ತೋಟದ ಜಮೀನುಗಳಲ್ಲಿ ಪಂಕ್ತಿ ಸೇವೆ ನಡೆದಿದೆ. ಮತ ಧರ್ಮ ಜಾತಿಗಳ ತಾರತಮ್ಯವಿಲ್ಲದೆ ಒಟ್ಟಿಗೆ ಕುಳಿತು ಬಾಡೂಟ ಮಾಡುವ ಪಂಕ್ತಿ ಸೇವೆ ನಿಷೇಧ ಮಾಡಿರುವುದು ಚಿಕ್ಕಲೂರು ದೇವಾಲಯದ ಬಳಿ ಬಲಿಪೀಠ ಇಲ್ಲ ಎಂದು ಹೋರಾಟಗಾರರು ಅಪಸ್ವರ ಎತ್ತಿದ್ದು , ಬಲಿ ನೀಡುವುದಿಲ್ಲ ಚಿಕ್ಕಲೂರು ಸಿದ್ದಪ್ಪಾಜಿ ಜಾತ್ರೆ ಸಂಪ್ರದಾಯದಂತೆ 600 ವರ್ಷಗಳ ಇತಿಹಾಸ ಇರುವ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಆಹಾರ ಪದ್ಧತಿಯಂತೆ ಮಾಂಸಹಾರ ಸೇವಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಪ್ರಾಣಿ ದಯಾ ಸಂಘದವರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡಲು ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಭಕ್ತರ ಭಾವನೆಗಳಿಗೆ ತೊಡಕುಂಟಾಗಿದೆ ಎಂದು ಸಿದ್ದಪ್ಪಾಜಿ ದೇವಾಲಯದ ಅಸುಪಾಸಿನಲ್ಲಿ ಇರುವ ಭಕ್ತರು ಸಿಹಿ ಊಟ ಮಾಡಿ ದೇವರಿಗೆ ಅರ್ಪಿಸಿ ಇಷ್ಟಾರ್ಥ ಸಿದ್ಧಿಸುವಂತೆ ಭಕ್ತರು ಪೂಜೆ ಸಲ್ಲಿಸಿದರು. ಇನ್ನು ಕೆಲವರು ಜಮೀನುಗಳಲ್ಲಿ ಬಾಡೂಟ ತಯಾರಿಸಿ ಪಂಕ್ತಿಸೇವೆ ಮಾಡಿದರು. ರಾಜ್ಯದ ತಳ ಸಮುದಾಯಗಳ ಸಂಸ್ಕೃತಿ ಆಚರಣೆ ಬಿಂಬಿಸುವ ಪಂಕ್ತಿ ಭೋಜನ ಚಿಕ್ಕಲ್ಲೂರು ಜಾತ್ರೆಯ ವಿಶಿಷ್ಟವಾದ ಆಚರಣೆಯಾಗಿದೆ.
ಕಂಡಾಯಗಳ ಉತ್ಸವ: ಚಿಕ್ಕಲೂರು ಜಾತ್ರಾ ಮಹೋತ್ಸವದ ಪ್ರಯುಕ್ತ ಕುರುಬನ ಕಟ್ಟೆಯಿಂದ ಬಂದಿದ್ದ ಕಂಡಾಯಗಳ ಉತ್ಸವ ವೇಳೆ ಸಿದ್ದಪ್ಪಾಜಿ ಭಕ್ತರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಿದ್ದಪ್ಪಾಜಿಗೆ ಉಘೇಎಂದು ಜೈಕಾರ ಹಾಕಿದರು. ದಾಸೋಹಕ್ಕೆ ಸಾಲುಗಟ್ಟಿ ನಿಂತ ಭಕ್ತರು: ಚಿಕ್ಕಲ್ಲೂರು ಜಾತ್ರಾ ಮಹೋತ್ಸವದ ಪಂಕ್ತಿ ಸೇವೆಗೆ ಬಂದಿದ್ದ ಭಕ್ತರು ಸಿದ್ದಪ್ಪಾಜಿ ದೇವರ ದರ್ಶನ ಪಡೆದು ಮಠದ ದಾಸೋಹದ ಮುಂಬಾಗ ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ದಾಸೋಹ ಭವನದಲ್ಲಿ ದಾಸೋಹ ಸವಿದರು.ಬಾರಿ ಭಕ್ತ ಸಮೂಹ: ಕಳೆದ 3 ದಿನಗಳಿಂದ ಚಿಕ್ಕಲ್ಲೂರು ಜಾತ್ರೆಯಲ್ಲಿ ಚಂದ್ರಮಂಡಲ ಉತ್ಸವ, ಹುಲಿವಾಹನ ಉತ್ಸವ, ಶನಿವಾರ ಮುಡಿಸೇವೆ. ಭಾನುವಾರ ಪಂಕ್ತಿ ಸೇವೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಸಿದ್ದಪ್ಪಾಜಿ ಮಂಟೇಸ್ವಾಮಿಯ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆಗಳನ್ನು ಮಾಡುವ ನಿಟ್ಟಿನಲ್ಲಿ ದೇವಾಲಯದ ಆವರಣದ ಹಾಸುಪಾಸು ಹಾಗೂ ಹೊಸಮಠ, ಹಳೆಮಠ, ಚಿಕ್ಕಲ್ಲೂರು, ಕೊತ್ತನೂರು ಬಾಲಗುಣಸೆ ಸುಂಡ್ರಳ್ಳಿ ಬಳಿ ಬಾರಿ ಭಕ್ತ ಸಮೂಹ ಕಂಡುಬಂದಿತು.ಪೊಲೀಸ್ ಬಂದೋಬಸ್ತ್: ಚಿಕ್ಕಲೂರು ಜಾತ್ರೆಯಲ್ಲಿ ನಡೆಯುತ್ತಿರುವ ಪಂಕ್ತಿ ಸೇವೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿರುವುದರಿಂದ ಬಾರಿ ಬಿಗಿ ಬಂದೋಬಸ್ತ್ ಮೂಲಕ ದೇವಾಲಯ ಹಾಗೂ ಹಳೆಮಠ, ಹೊಸಮಠ ಮತ್ತು ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.