ಬಿಜೆಪಿ ಪಾಲಾದ ಯಲಬುರ್ಗಾ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
ಕನ್ನಡಪ್ರಭ ವಾರ್ತೆ ಯಲಬುರ್ಗಾಸ್ಥಳೀಯ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಂದಯ್ಯ ಕಳ್ಳಿಮಠ ಹಾಗೂ ಕಾಂಗ್ರೆಸ್ಸಿನ ಸದಸ್ಯೆ ಡಾ. ನಂದಿತಾ ದಾನರಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಜಯಲಕ್ಷ್ಮೀ ಬೇಲೇರಿ, ಕಾಂಗ್ರೆಸ್ಸಿನ ರೇವಣೆಪ್ಪ ಹಿರೇಕುರಬರ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ಸಿನ ಸದಸ್ಯೆ ಡಾ. ನಂದಿತಾ ದಾನರಡ್ಡಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇವಣೆಪ್ಪ ಹಿರೇಕುರಬರ ನಾಮಪತ್ರ ಸಲ್ಲಿಸಿ ಬಳಿಕ ಹಿಂಪಡೆದರು. ಕಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ಉಳಿದಿದ್ದರಿಂದ ಅಧ್ಯಕ್ಷರಾಗಿ ಅಂದಯ್ಯ ಕಳ್ಳಿಮಠ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಬೇಲೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ತೆನ್ನಳ್ಳಿ ಘೋಷಿಸಿದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ನಾಗೇಶ, ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರ, ವಿಷಯ ನಿರ್ವಾಹಕಾಧಿಕಾರಿ ಸಮೀರ ಕಾರ್ಯ ನಿರ್ವಹಿಸಿದರು. ಪಪಂನ ೧೫ ಸದಸ್ಯರು ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ಮಾಜಿ ಸಚಿವರಾದ ಹಾಲಪ್ಪ ಆಚಾರ್, ಪಕ್ಷದ ಸರ್ವ ಸದಸ್ಯರು, ಮುಖಂಡರು ಪರಿಶ್ರಮದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪಕ್ಷಬೇಧ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ವಿಜಯೋತ್ಸವ ಆಚರಣೆ:ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸಲಿಂಗಪ್ಪ ಭೂತೆ, ಬಸವರಾಜ ಗೌರಾ, ವೀರಣ್ಣ ಹುಬ್ಬಳ್ಳಿ, ಸಿ.ಎಚ್. ಪಾಟೀಲ, ಮಾರುತಿ ಗಾವರಾಳ, ಸಿದ್ದರಾಮೇಶ ಬೆಲೇರಿ, ಎಸ್.ಎನ್. ಶ್ಯಾಗೋಟಿ, ಪ್ರಭುರಾಜ ಕಲಬುರ್ಗಿ, ಸಂಗಪ್ಪ ರಾಮತಾಳ, ಈರಪ್ಪ ಬಣಕಾರ, ಶಂಕರ ಭಾವಿಮನಿ, ಕಲ್ಲೇಶ ಕರಮುಡಿ ಹಾಗೂ ಪಪಂ ಸದಸ್ಯರು ಇದ್ದರು.