ಕನ್ನಡಪ್ರಭ ವಾರ್ತೆ ಬೀದರ್
ವಾಹನ ಚಾಲಕರಿಂದ ಸಂಚಾರ ಪೊಲೀಸರು ವಸೂಲಿ ಮಾಡುವ ದಂಡಕ್ಕೆ ಈಗ ಕೈಯಿಂದ ಬರೆದು ಕೊಡುವ ರಶೀದಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಫೆ.5ರಿಂದಯಿ ಈ-ಚಲನ್ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ತಿಳಿಸಿದರು.ಈ ಕುರಿತಂತೆ ಮಂಗಳವಾರ ಪರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾರ್ವಜನಿಕ ರಿಂದ ರಸ್ತೆಯಲ್ಲಿ ಸಂಚಾರ ಪೊಲೀಸರು ಅನಗತ್ಯವಾಗಿ ದಂಡದ ಹೆಸರಿನಲ್ಲಿ ಹಣ ಕೀಳುತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಹೀಗಾಗಿ ಈಗ ಆ ವ್ವವಸ್ಥೆ ಸಂಪೂರ್ಣವಾಗಿ ರದ್ದುಪಡಿಸಿ ಇ-ಚಲನ್ ನೀಡಲಾಗುವುದು. ಎಷ್ಟೇ ದಂಡ ಇದ್ದರೂ ಅದು ನೇರವಾಗಿ ಸರ್ಕಾರದ ಖಜಾನೆಗೆ ಹೋಗುತ್ತದೆ ಎಂದರು.
ಜಿಲ್ಲೆಯಲ್ಲಿ ರಸ್ತೆ ಜಾಗೃತಿ ಅಭಿಯಾನ ಕುರಿತು ಜನರಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿರುವ ಸುಮಾರು 27 ವಾಹನ ಕಲಿಕಾ ಶಾಲೆಗಳ ಸಹಕಾರ ಪಡೆದು ಪ್ರತಿ ವರ್ಷ ವಾಹನ ಚಾಲನಾ ಪರವಾನಗಿ ಪಡೆಯುವ ವಾಹನ ಚಾಲಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ತಿಳಿಸಲಾಗುವುದು ಅಲ್ಲದೇ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕಿಕೊಳ್ಳುವ ಕುರಿತು ಮನವರಿಕೆ ಮಾಡಿಸಲಾಗುವುದು ಎಂದು ತಿಳಿಸಿದರು.ರಾತ್ರಿ ಅನವಶ್ಯಕ ಓಡಾಡದಿರಿ, ತಂತ್ರಜ್ಞಾನ ಬಳಸಿ ಅಪರಾಧಿ ಪತ್ತೆರಾತ್ರಿ ಸಮಯದಲ್ಲಿ ಅನಾವಶ್ಯಕವಾಗಿ ಹಾಗೂ ಸಂಶಯಾಸ್ಪದವಾಗಿ ಓಡಾಡುತ್ತಿರುವವರು ಎಚ್ಚರ ವಹಿಸಿ ಇಲ್ಲವೇ ಅವರನ್ನು ಅತ್ಯಾಧುನಿಕ ತಂತ್ರಜ್ಞಾನದ (ಎಂಸಿಸಿಟಿಎನ್ಎಸ್) ಯಂತ್ರದ ಮೂಲಕ ಅಪರಾಧಿಕ ಪ್ರಕರಣಗಳ ಪತ್ತೆ ಕಾರ್ಯ ಆರಂಭಿಸಲು ಮುಂದಾಗಲಿದ್ದಾರೆ.
ಈ ಕುರಿತಂತೆ ಮಂಗಳವಾರ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ರಾತ್ರಿ ಹೊತ್ತು ಅನಗತ್ಯವಾಗಿ ಓಡಾಡುವರ ಮೇಲೆ ಏನಾದರೂ ಅಪರಾಧಿಕ ಪ್ರಕರಣಗಳಿವೆಯೇ ಎಂಬುವುದನ್ನು ಪತ್ತೆ ಹಚ್ಚಲು ನೂತನ ಯಂತ್ರ ಬಳಕೆ ಮಾಡಲಾಗುತ್ತಿದೆ. ಅನವಶ್ಯಕ ಓಡಾಟ ಕಂಡುಬಂದಲ್ಲಿ ಅಂಥ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು ಇಲ್ಲಿಯವರೆಗೆ ಆ ಯಂತ್ರದಲ್ಲಿ ಸುಮಾರು 96 ಜನ ಅಪರಾಧಿಕ ಕೃತ್ಯ ಎಸಗಿದವರು ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿಸಿದರು.ವಿನೂತನ ಯಂತ್ರದ ಮೂಲಕ 2022ರಲ್ಲಿ 456 ಜನರ ಹೆಬ್ಬೆರಳಿನ ಗುರುತನ್ನು ಸಂಗ್ರಹಿಸಲಾಗಿತ್ತು. 2023ರಲ್ಲಿ ಜಿಲ್ಲೆಯಾದ್ಯಂತ ಸುಮಾರು 13 ಸಾವಿರ ಜನರ ಹೆಬ್ಬೆರಳಿನ ಗುರುಕು (ಥಂಬ್) ಪಡೆದಾಗ ಅದರಲ್ಲಿ ಸುಮಾರು 96 ಜನರ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿರುವುದನ್ನು ಪತ್ತೆಯಾಗಿದೆ ಎಂದು ತಿಳಿಸಿದರು.
ಇವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇಂತಹ ನೂತನ ತಂತ್ರಜ್ಞಾನದಿಂದ ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಲು ಸಹಾಯವಾಗಿದೆ. ಹೀಗಾಗಿ ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಓಡಾಡುವರು ಎಚ್ಚರ ವಹಿಸುವುದೆ ಲೇಸು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವಾನಂದ ಪಾಟೀಲ್ ನ್ಯೂ ಟೌನ್ ಸಿಪಿಐ ವಿಜಯಕುಮಾರ ಇದ್ದರು.ಲಕ್ಕಿ ಡ್ರಾ ಹೆಸರಿನಲ್ಲಿ ಜನರಿಗೆ ಮೋಸ, 6 ಜನರ ಬಂಧನ
ನಗರದ ಮಯೂರಾ ಹೊಟೇಲ್‌ನಲ್ಲಿ ಅನಧಿಕೃತವಾಗಿ ಲಕ್ಕಿ ಡ್ರಾ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವುದನ್ನು ಮಂಗಳವಾರ ಬೆಳಗ್ಗೆ ಪತ್ತೆ ಹಚ್ಚಿ ಬೀದರ್‌ನ ಇಬ್ಬರು ಹಾಗೂ ಮಹಾರಾಷ್ಟ್ರದ 4 ಜನ ಸೇರಿದಂತೆ ಒಟ್ಟು 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.ನೂತನ ನಗರ ಪೊಲೀಸ್ ಠಾಣೆಯ ಸಿಪಿಐ ವಿಜಯಕುಮಾರ ಅವರು ಖಚಿತ ಮಾಹಿತಿ ಮೇರೆಗೆ ಪಿಎಸ್ ತಸ್ಲೀಮಾ ಸುಲ್ತಾನಾ ಹಾಗೂ ಸಿಬ್ಬಂದಿಯರಾದ ರಾಮಣ್ಣ, ಧನರಾಜ, ಮಲ್ಲಿಕಾರ್ಜುನ ಅವರು ಎಸ್ಪಿ ಹಾಗೂ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಬೀದರ್ ಮಯೂರಾ ಹೊಟೇಲ್‌ನ ರೂಮ್ ಸಂಖ್ಯೆ 106 ನಲ್ಲಿ ವೆಂಕಟೇಶ್ವರ ಎಂಟರಪ್ರೈಸೆಸ್ ಹೆಸರಿನಲ್ಲಿ ಅನಧಿಕೃತವಾಗಿ ಲಕ್ಕಿ ಡ್ರಾ ನಡೆಸಿ ಡ್ರಾ ಹಾಕಿದ ಜನರಿಗೆ ಗೊತ್ತಿಲ್ಲದಂತೆ ಡ್ರಾ ಮಾಡಿ ಜನರ ಹಣ ಲಪಟಾಯಿಸಿಕೊಂಡು ಹೋಗಲು ಪ್ರಯತ್ನ ಮಾಡಿ ಜನರಿಗೆ ವಂಚಿಸಿ ಮೋಸ ಮಾಡುತಿದ್ದ ಜನರ ಮೇಲೆ ದಾಳಿ ಮಾಡಿ ಅವರಿಂದ 1.92 ಲಕ್ಷ ರು. ನಗದು ಒಂದು ಅರ್ಟಿಗಾ ಕಾರು ಮತ್ತು 6 ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಂಡು 6 ಜನರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಲ್ಲಿ ಇಬ್ಬರು ಬೀದರ್ ಜಿಲ್ಲೆಯವರಾಗಿದ್ದು ರಮೇಶ ಸುತಾರ ನಿರ್ಣಾ ಸದ್ಯ ಇರುವುದು ಮೈಲೂರಿನಲ್ಲಿ, ಅಮೃತ ಮೋತಿರಾಮ ಚವ್ಹಾಣ್ ಸಿಂಧೋಲ ತಾಂಡಾ ಸದ್ಯ ಸಿಎಂಸಿ ಕಾಲೋನಿ, ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯವರಾದ ಕಿರಣ ಜಯಸಿಂಗ ಮೋರೆ, ಸಿದ್ದೇಶ್ವರ ಸುನೀಲ್ ಚಾಬೋಟೆ, ಅಮಿತ ಹರಿದಾಸ ಭೋಸ್ಲೆ ಹಾಗೂ ಸುಮಿತ ನವನಾಥ ಮನಾಳೆ ಇವರ ವಿರುದ್ಧ ನೂತನ ಪೊಲೀಸ್ ಠಾಣೆಯಲ್ಲಿ ಕಲಂ 420 ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.