ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ವಿಧ್ವಂಸಕ ಕೃತ್ಯಗಳು ನಡೆಯದಂತೆ ತೀವ್ರ ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅವರು ಚರ್ಚಿಸಿದರು. ಈ ಪ್ರಕರಣದಲ್ಲಿ ಈವರೆಗಿನ ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದರು.
ರಾಜ್ಯದಲ್ಲಿ ಹಿಂದೆ ನಡೆದಿರುವ ವಿಧ್ವಂಸಕ ಕೃತ್ಯಗಳು ಹಾಗೂ ಅದರ ಹಿಂದಿನ ಉಗ್ರ ಸಂಘಟನೆಗಳ ಬಗ್ಗೆಯೂ ಸಭೆಯಲ್ಲಿ ಗೃಹ ಸಚಿವರು ಚರ್ಚಿಸಿದ್ದಾರೆ. ಹಿಂದಿನ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಅಗತ್ಯವಿದ್ದಲ್ಲಿ ಈ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖಾ ತಂಡದಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.------------------
ಸುಮಾರು ಹತ್ತು ವರ್ಷಗಳ ಬಳಿಕ ನಗರದಲ್ಲಿ ಬಾಂಬ್ ಸ್ಫೋಟದ ಘಟನೆ ನಡೆದಿದೆ. ದೇಶ-ವಿದೇಶಗಳಲ್ಲಿ ಬೆಂಗಳೂರು ನಗರದ ಸುರಕ್ಷತೆ ಬಗ್ಗೆ ಚರ್ಚೆಗಳಾಗುತ್ತಿವೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಿಂದ ಇಲ್ಲಿ ಒಂದು ಸಣ್ಣ ಅಹಿತಕರ ಘಟನೆ ಜರುಗಿದರೂ ಭಾರೀ ಸುದ್ದಿಯಾಗುತ್ತದೆ. ಹೀಗಾಗಿ ನಗರದ ಖ್ಯಾತಿ ಹಾಗೂ ಸುರಕ್ಷತೆ ಕಾಪಾಡುವ ಹೊಣೆ ಎಲ್ಲರ ಮೇಲಿದೆ. ಹೀಗಾಗಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೃಹ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಗುಪ್ತಚರ ದಳದ ಎಡಿಜಿಪಿ ಶರತ್ ಚಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರದ ಎಲ್ಲಾ ಡಿಸಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
-----------------------ಚಿತ್ರ ಶೀರ್ಷಿಕೆ...
- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.