ಕನ್ನಡಪ್ರಭ ವಾರ್ತೆ ಸವದತ್ತಿ
ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯು ಜ.27ರಂದು ಪರಸಗಡ ನಾಟಕೋತ್ಸವ-2024ಕ್ಕೆ ಚಾಲನೆ ನೀಡಲಿದೆ. ರಂಗಭೂಮಿ ಕಲೆಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡುತ್ತ ಸಾಗುತ್ತಿರುವ ಈ ಸಂಸ್ಥೆಯು 2022ರಲ್ಲಿ ಬೆಳ್ಳಿ ಹಬ್ಬದ ಸಂಭ್ರಮದೊಂದಿಗೆ 25 ನಾಟಕಗಳನ್ನು ಪ್ರದರ್ಶನಗೊಳಿಸುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ.ಕಲಾವಿದರು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಝಕೀರ ನದಾಫ ನೇತೃತ್ವದಲ್ಲಿ ಶಿವಾನಂದ ತಾರೀಹಾಳ, ಶ್ರೀನಿವಾಸ ಗದಗ, ಗೋಪಾಲ ಪಾಸಲಕರ, ಮಯೂರ ಶಿಂಧೆ ಸೇರಿದಂತೆ ಇನ್ನೂ ಅನೇಕ ಕಲಾವಿದರು ಪಟ್ಟಣದ ಸಾಕಷ್ಟು ರಂಗ ಪೋಷಕರ ಸಹಾಯದೊಂದಿಗೆ ಪ್ರತಿವರ್ಷ ಪರಸಗಡ ನಾಟಕೋತ್ಸವ ಎಂಬ ನಾಮಧೇಯದ ಮೇಲೆ ರಂಗದಸೌತನವನ್ನು ನೀಡುತ್ತಿದೆ. ಅಪಾರ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿರುವ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯು ಈಗ ಐತಿಹಾಸಿಕ ದೇಸಾಯಿ ಕೋಟೆಯಲ್ಲಿ 27ನೇ ವರ್ಷದ ಅಂಗವಾಗಿ 9 ನಾಟಕಗಳನ್ನು ಪ್ರದರ್ಶನಗೊಳಿಸುವ ನಿಟ್ಟಿನಲ್ಲಿ ಪರಗಡ ನಾಟಕೋತ್ಸವ-2024ರ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಜ.27ರಂದು ಸಂಜೆ 7ಗಂಟೆಗೆ ಪರಸಗಡ ನಾಟಕೋತ್ಸವ-2024ಕ್ಕೆ ವಿದ್ಯುಕ್ತ್ತವಾಗಿ ಚಾಲನೆ ಸಿಗಲಿದೆ.
ಪರಸಗಡ ನಾಟಕೋತ್ಸವ-2024ರ ಅಂಗವಾಗಿ ಜ.27ರಿಂದ ಫೆ.4ರವರೆಗೆ 9 ನಾಟಕಗಳು ಪ್ರದರ್ಶನಗೊಳ್ಳಲಿವೆ. ಪರಸಗಡ ನಾಟಕೋತ್ಸವ-2024ರಲ್ಲಿ ಜ.27ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಶ್ರೀಧರ ಗಸ್ತಿಯವರ ಕಥೆ ಆಧಾರಿತ, ಝಕೀರ ನದಾಫ ರಚಿಸಿ ನಿರ್ದೇಶಿಸಿದ ದೇವಸೂರ ನಾಟಕ, ಜ.28ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಸಂತೆಬೆನ್ನೂರು ಫೈಜ್ನಟರಾಜ ಕಥೆ ಆಧಾರಿತ, ಝಕೀರ ನದಾಫ ರಚಿಸಿ ನಿರ್ದೇಶಿಸಿದ ಹುಚ್ಚರ ಕನಸು ನಾಟಕ, ಜ.29ರಂದು ಶಿವಸಂಚಾರ ಸಾಣೆಹಳ್ಳಿಯವರಿಂದ ಜಯಂತ ಕಾಯ್ಕಿಣಿ ರಚಿಸಿದ, ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಜೊತೆಗಿರುವನು ಚಂದಿರ ನಾಟಕ, ಜ.30ರಂದು ಶಿವಸಂಚಾರ ಸಾಣೆಹಳ್ಳಿಯವರಿಂದ ಕೆ.ಎನ್.ಸಾಳುಂಕೆ ರಚಿಸಿದ, ಮಾಲತೇಶ ಆರ್. ಬಡಿಗೇರ ನಿರ್ದೇಶಿಸಿದ ತಾಳಿಯ ತಕರಾರು ನಾಟಕ ಹಾಗೂ ಜ.31ರಂದು ಶಿವಸಂಚಾರ ಸಾಣೆಹಳ್ಳಿಯವರಿಂದ ಡಾ.ನಟರಾಜ್ ಬೂದಾಳು ರಚಿಸಿದ, ಸಿ.ಬಸವಲಿಂಗಯ್ಯ ನಿರ್ದೇಶನದ ಕಲ್ಯಾಣದ ಬಾಗಿಲು ನಾಟಕ ಪ್ರದರ್ಶನಗೊಳ್ಳಲಿದೆ.ಫೆ.1ರಂದು ಸಮುದಾಯ ಧಾರವಾಡ ಇವರಿಂದ ಕುಂ.ವಿ.ವೀರಭದ್ರಪ್ಪಾ ರಚಿಸಿದ, ವಾಸುದೇವ ಗಂಗೇರ ನಿರ್ದೇಶನದ ದೇವರ ಹೆಣ ನಾಟಕ, ಫೆ.2ರಂದು ರಂಗ ಸೃಷ್ಠಿ ಬೆಳಗಾವಿ ಇವರಿಂದ ಡಾ.ರಾಮಕೃಷ್ಣ ಮರಾಠೆ ರಚಿಸಿದ, ಶಿರೀಷ ಜೋಶಿ ನಿರ್ದೇಶನದ ಈಸಕ್ಕಿಯ ಆಸೆ ನಾಟಕ, ಫೆ.3ರಂದು ರಂಗಾಸ್ಥೆ ಬೆಂಗಳೂರು ಇವರಿಂದ ತಲಕಾಡು ಗುರುರಾಜು ರಚಿಸಿ ನಿರ್ದೇಶಿಸಿದ ಕಾದು ಕಥೆಯಾದವರು ನಾಟಕ, ಫೆ.4ರಂದು ನಾಡೋಜ ನಾಟ್ಯ ಭೂಷಣ ಏಣಗಿ ಬಾಳಪ್ಪನವರ ಸ್ಮರಣಾರ್ಥ ರಂಗಾಸ್ಥೆ ಬೆಂಗಳೂರು ಇವರಿಂದ ಗಣೇಶ ಮಂದಾರ್ತಿ ರಚಿಸಿ ನಿರ್ದೇಶಿಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದ್ರೋಪತಿ ಹೇಳ್ತಾವ್ಳೆ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರಶಸ್ತಿ ಪ್ರಧಾನ: ಪ್ರತಿವರ್ಷ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ನಡೆಯುವ ಪರಸಗಡ ನಾಟಕೋತ್ಸವದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಲಿದೆ. ಸಂಸ್ಥೆಯಿಂದ ನೀಡಲಾಗುವ ಮೂರು ಪ್ರಶಸ್ತಿಗಳಿಗೆ ನಾಟಕಕಾರ, ಚಿತ್ರಕಲಾವಿದ ಹಾಗೂ ರಂಗ ಚಿಂತಕರನ್ನು ಆಯ್ಕೆ ಮಾಡಲಾಗಿದೆ.ಪ್ರಗತಿ ಪರ ರೈತ ರುದ್ರಪ್ಪ ಶಿಂಧೆ ಇವರಿಂದ ಕೊಡಲ್ಪಡುವ ರಂಗ ಆರಾಧಕ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಪ್ರಸಾಧನಕಾರ ಸಂತೋಷ ಗಜಾನನ ಮಹಾಲೆ, ಹಿರಿಯ ವಕೀಲ ದಿ.ವ್ಹಿ.ಆರ್.ಕಾರದಗಿಯವರ ಸ್ಮರಣಾರ್ಥ ನೀಡುವ ಮತ್ತೊಂದು ರಂಗ ಆರಾಧಕ ಪ್ರಶಸ್ತಿಯನ್ನು ಸಾಣೆ ಹಳ್ಳಿಯ ರಂಗಕರ್ಮಿ ಶಿವ ಸಂಚಾರದ ಸಂಚಾಲಕ ಬಿ. ರಾಜುಗೆ, ರಂಗಪ್ರೇಮಿ ದಿ.ಚಂದ್ರಕಾಂತ ಸುಳ್ಳದರವರ ಸ್ಮರಣಾರ್ಥ ನೀಡುವ ರಂಗಚಂದ್ರ ಪ್ರಶಸ್ತಿಯನ್ನು ಬೆಳಗಾವಿಯ ನಾಟಕಕಾರ, ರಂಗ ನಿರ್ದೇಶಕ ಬಾಬಾಸಾಹೇಬ ಕಾಂಬಳೆಗೆ ನೀಡಲಾಗುತ್ತಿದೆ.