ಧಾರವಾಡ:
ನಗರದ ಭಾರತ ಪ್ರೌಢಶಾಲೆಯ ಸಭಾಭವನದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಜತೆಗೂಡಿ ಆಯೋಜಿಸಿದ್ದ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಾಲ ಮತ್ತು ಕಿಶೋರ ಮಕ್ಕಳನ್ನು ದುಡಿಮೆಗೆ ಕಳುಹಿಸಬಾರದು. ಅವರಿಗೆ ಉತ್ತಮ ಸಂಸ್ಕಾರ ನೀಡಿ, ಶಿಕ್ಷಣ ಮತ್ತು ಕೌಶಲ್ಯಭರಿತ ತರಬೇತಿ ನೀಡಬೇಕು ಎಂದರು.
ಮಕ್ಕಳಿಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ಕಿರುಕುಳ ಆದಾಗ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತಿಳಿಸಬೇಕು. ತೊಂದರೆ, ಕಿರುಕುಳ, ಹಲ್ಲೆ ಆದಾಗ ಭಯಪಡದೆ ಶಾಲೆಯ ಶಿಕ್ಷಕರಿಗೆ, ಪಾಲಕರಿಗೆ ಅದರಲ್ಲೂ ವಿಶೇಷವಾಗಿ ಮನೆಯಲ್ಲಿ ತಾಯಿಗೆ ಮಾಹಿತಿ ನೀಡಬೇಕು. ಇದು ಎಲ್ಲ ಮಕ್ಕಳಿಗೂ ಅನ್ವಯಿಸುತ್ತದೆ. ಬಾಲ್ಯವಿವಾಹ, ಒತ್ತಾಯದ ದುಡಿಮೆ ತಡೆಯಲು ನೇರವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ, ಬಡತನ ಮತ್ತು ಶಿಕ್ಷಣದ ಕೊರತೆಯಿಂದ ಬಾಲ ಕಾರ್ಮಿಕ ಪದ್ಧತಿ ಇಂದಿಗೂ ಮುಂದುವರಿದೆ. ಮಕ್ಕಳ ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ. ಇದರ ಬಗ್ಗೆ ಅರಿವು ಮೂಡಿಸಬೇಕೆಂದರು.
ಇದೇ ವೇಳೆ ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಯಾಗಿ ಶಾಲಾ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಜಿಲ್ಲಾಧಿಕಾರಿ ಶೈಕ್ಷಣಿಕ ಕಿಟ್ ವಿತರಿಸಿದರು. ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಅಕ್ರಮ ಅಲ್ಲಾಪುರ, ಭುವನೇಶ್ವರಿ ಕೋಟಿಮಠ, ಮೀನಾಕ್ಷಿ ಶಿಂದಿಹಟ್ಟಿ, ರಜನಿ ಹಿರೇಮಠ, ಸಂಗೀತಾ ಬೆನಕನಕೊಪ್ಪ, ಲತಾ ಟಿ.ಎಸ್. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಭಾರತ ಪ್ರೌಢಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.