ಪರಿಸರಕ್ಕಾಗಿ ನಾವು: ಜಿಲ್ಲಾ ಸಂಘಟನೆ ಅಸ್ತಿತ್ವಕ್ಕೆ

KannadaprabhaNewsNetwork | Published : Jan 19, 2024 1:55 AM

ಸಾರಾಂಶ

ಪರಿಸರ ನಾಶದಂಥ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಾರ್ಯಪ್ರವೃರ್ತರಾಗಲು ಪರಿಸರ ಆಸಕ್ತರ ಸಂಘಟನೆ ಅವಶ್ಯವಾಗಿದೆ. ಈ ಉದ್ದೇಶದಿಂದ ಪರಿಸರಕ್ಕಾಗಿ ನಾವು ಎನ್ನುವ ತಂಡ ರಚಿಸಲಾಗಿದೆ ಎಂದು ಪರಿಸರ ಅಧ್ಯಯನ ಕೇಂದ್ರ ಮುಖ್ಯಸ್ಥ ಜಿ.ಎಲ್. ಜನಾರ್ಧನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಪರಿಸರ ನಾಶ ಪರಿಣಾಮ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆ, ಅಹಾರ ಉತ್ಪನ್ನಗಳ ಕೊರತೆ, ಜಲಕ್ಷಾಮ ಮುಂತಾದ ಸಮಸ್ಯೆಗಳು ಎದುರಿಸುತ್ತಿದ್ದೇವೆ. ಇದನ್ನು ಸರಿಪಡಿಸುವತ್ತ ಗಮನಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಭೀಕರವಾಗಲಿದೆ ಎಂದು ಪರಿಸರ ಅಧ್ಯಯನ ಕೇಂದ್ರ ಮುಖ್ಯಸ್ಥ ಜಿ.ಎಲ್. ಜನಾರ್ಧನ್‌ ಅಭಿಪ್ರಾಯಿಸಿದರು.

ನಗರದ ಮಥುರ ಪ್ಯಾರಡೈಸ್ ಸಭಾಂಗಣದಲ್ಲಿ ‘ಪರಿಸರದಿಂದ ನಾವು, ಪರಿಸರಕ್ಕಾಗಿ ನಾವು’ ಎನ್ನುವ ಧ್ಯೇಯದೊಂದಿಗೆ ರಾಜ್ಯಮಟ್ಟದಲ್ಲಿ ಸ್ಥಾಪನೆಗೊಂಡಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಜಿಲ್ಲಾ ಘಟಕದ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.

ಪರಿಸರ ನಾಶದಂಥ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಾರ್ಯಪ್ರವೃರ್ತರಾಗಲು ಪರಿಸರ ಆಸಕ್ತರ ಸಂಘಟನೆ ಅವಶ್ಯವಾಗಿದೆ. ಈ ಉದ್ದೇಶದಿಂದ ಪರಿಸರಕ್ಕಾಗಿ ನಾವು ಎನ್ನುವ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ನಗರ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಅನೇಕ ಪರಿಸರ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಸಂಘಟಿತ ಪ್ರಯತ್ನ ಆಗಬೇಕಾಗಿರುವುದರಿಂದ ಪರಿಸರಕ್ಕಾಗಿ ನಾವು ಸಂಘಟನೆ ಮೂಲಕ ರಚನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸದಸ್ಯರು ತಮ್ಮ ಹಾಗೂ ಪರಿಸರಕ್ಕೆ ತಾವು ಮಾಡುತ್ತಿರುವ ಕಾರ್ಯ ಚಟುವಟಿಕೆಗಳ ಪರಿಚಯ ತಿಳಿಸಿದರು. ಜೊತೆಗೆ ಜಿಲ್ಲೆಯಲ್ಲಿರುವ ಪ್ರಮುಖ ಪರಿಸರ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು. ಈ ವಿಶೇಷ ಸಭೆಯಲ್ಲಿ ಉತ್ತಮ ಚರ್ಚೆಯೊಂದಿಗೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಂಚಲನಾ ಸಮಿತಿ: ಪರಿಸರಕ್ಕಾಗಿ ನಾವು ಜಿಲ್ಲಾ ಸಂಚಲನಾ ಸಮಿತಿಗೆ ಪ್ರೊ. ಎಲ್‌.ಕೆ. ಶ್ರೀಪತಿ, ಕೆ.ಟಿ.ಗಂಗಾಧರ್, ಸಾಗರದ ಅಖಿಲೇಶ್ ಚಿಪ್ಳಿ, ಹೊಸನಗರದ ಧನುಷ್, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪ್ರಮುಖರಾದ ಪ್ರೊ. ಬಿ.ಎಂ. ಕುಮಾರಸ್ವಾಮಿ, ಜಿ.ಎಲ್. ಜನಾರ್ಧನ್, ಎಂ.ಶಂಕರ್, ಅಖಿಲೇಶ್ ಚಿಪ್ಳಿ, ಪ್ರೊ. ಎ.ಎಸ್. ಚಂದ್ರಶೇಖರ್, ರಾಜೇಶ್ವರಿ ಸಾಗರ, ಕೀರ್ತನ ಜಗದೀಶ್, ಅಕ್ಷತಾ, ಎನ್. ಗೋಪಿನಾಥ್, ಎಸ್.ಬಿ. ಅಶೋಕ್‌ಕುಮಾರ್, ಅಜೇಯ ಕುಮಾರ್ ಶರ್ಮಾ, ಡಾ. ಬಾಲಕೃಷ್ಣ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ವ್ಯಕ್ತಿಗತ ಹಾಗೂ ಪರಿಸರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿರುವ 50ಕ್ಕೂ ಹೆಚ್ಚು ಪರಿಸರಾಸಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ರಾಜ್ಯ ಸಂಘಟನಾ ಜಿಲ್ಲಾ ಪ್ರತಿನಿಧಿ ಸೀಮಾ ಎಸ್.ಆರ್. ಸ್ವಾಗತಿಸಿ, ತ್ಯಾಗರಾಜ ಮಿತ್ಯಾಂತ ವಂದಿಸಿದರು.

ಸಭೆಯ ಪ್ರಮಖ ನಿರ್ಣಯಗಳು ೧. ಈ ಹಿಂದೆ ಶರಾವತಿ ಲಿಂಗನಮಕ್ಕಿ ನೀರನ್ನು ಕೊಳವೆ ಮಾರ್ಗ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಸರ್ಕಾರದ ಯೋಜನೆಗೆ ರಾಜ್ಯ ದ ವಿವಿಧೆಡೆ ಭಾರಿ ಪ್ರತಿಭಟನೆ ನಡೆದು ಯೋಜನೆ ಸ್ಥತಗೊಳಿಸಲಾಗಿದೆ. ಆದರೆ ಈಗ ಈ ಯೋಜನೆ ಪುನಃ ಮುನ್ನಲೆಗೆ ಬಂದಿದ್ದು, ಇದಕ್ಕೆ ‘ಪರಿಸರಕ್ಕಾಗಿ ನಾವು’ ಸಂಘಟನೆ ತೀವ್ರವಾಗಿ ವಿರೋಧಿಸಲಿದ್ದು, ಈ ವಿಚಾರವನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುವುದು.

2. ಶರಾವತಿ ಕೊಳ್ಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಂಪ್ ಸ್ಟೋರೇಜ್ ಜಲ ಯೋಜನೆಯು ಭಾರಿ ಪ್ರಮಾಣದ ಅರಣ್ಯ ನಾಶ ಹಾಗೂ ಅಳಿವಿನ ಅಂಚಿನಲ್ಲಿರುವ ಸಿಂಗಳೀಕ ಆವಾಸ ಸ್ಥಾನಕ್ಕೆ ಕುತ್ತು ತರಲಿದೆ. ಆದ್ದರಿಂದ ಈ ಯೋಜನೆ ವಿಚಾರ ಕೈಬಿಡಬೇಕು.

3. ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳಾದ ರಸ್ತೆ ಅಗಲೀಕರಣ, ಕೊಡಚಾದ್ರಿ ರೋಪ್ ವೇ ಮುಂತಾದ ಪಶ್ಚಿಮಘಟ್ಟ ಸೂಕ್ಷ್ಮವಲಯದ ಪರಿಸರ ನಾಶದ ಯೋಜನೆಗಳನ್ನು ಕೂಡಲೇ ನಿಲ್ಲಿಸಿ, ಪರಿಸರ ಸಂರಕ್ಷಣೆ ಕಾಪಾಡಬೇಕು.

4. ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿರುವ ಏಕಬಳಕೆ ಪ್ಲಾಸ್ಟಿಕ್ ಭಾರಿ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಬಳಕೆಯಾಗುತ್ತಿದೆ. ಕಾನೂನುಬಾಹಿರವಾಗಿ ಮಾರಾಟ ಮತ್ತು ಬಳಕೆ ತಡೆಗಟ್ಟಲು ಸಂಬಂಧಿತ ಇಲಾಖೆಗಳು ಕೂಡಲೇ ಕ್ರಮ ಕೈಗೊಳ್ಳಬೇಕು.

5. ಶಿವಮೊಗ್ಗ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಉಲ್ಬಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಜಿಲ್ಲೆಯಲ್ಲಿರುವ ಜಲಮೂಲಗಳಾದ ಕೆರೆ-ಕಟ್ಟೆಗಳ ಒತ್ತುವರಿ ತೆರವುಗೊಳಿಸಿ ಜಲಪುನಶ್ಚೇತನ ಕಾರ್ಯ ಶೀಘ್ರವಾಗಿ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು.

6. ಜಿಲ್ಲೆಯಲ್ಲಿ ಜೀವವೈವಿಧ್ಯತೆ ಸಂಪತ್ಭರಿತವಾಗಿದ್ದು, ಇದನ್ನು ಉಳಿಸಿ ಸಂರಕ್ಷಣೆ ಮಾಡುವ ಹೊಣೆ ಸರ್ಕಾರದ್ದಾಗಿದ್ದು, ಈ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಈ ದಿಶೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಗಳಲ್ಲಿ ಜೀವ ವೈವಿಧ್ಯತಾ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಬೇಕು.

Share this article