ಮಸ್ಕಿ ಪಟ್ಟಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಚರಂಡಿ, ಸರ್ವಿಸ್ ರಸ್ತೆ ನಿರ್ಮಾಣ
ಇಂದರಪಾಷ ಚಿಂಚರಕಿಕನ್ನಡಪ್ರಭ ವಾರ್ತೆ ಮಸ್ಕಿದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ ವಾಹನ ದಟ್ಟಣೆ ಆಗದಂತೆ ತಡೆಗಟ್ಟಿ ಜನರ ಅನೂಕೂಲಕ್ಕಾಗಿ ಸರ್ಕಾರ ಮಸ್ಕಿ ಪಟ್ಟಣದಲ್ಲಿ ಅಂದಾಜು ₹10 ಕೋಟಿ ವೆಚ್ಚದಲ್ಲಿ 2 ಕೀಮಿವರೆಗೆ ಎರಡು ಕಡೆ ಸರ್ವಿಸ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಸರ್ವಿಸ್ ರಸ್ತೆಯಲ್ಲಿಯೇ ವಾಹನಗಳನ್ನು ಅಡ್ಡಾ-ದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಒಡಾಟಕ್ಕೆ ಜನರು ವಾಹನ ಸವಾರರು ತೊಂದರೆ ಪಡುವಂತಾಗಿದೆ.
ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಅಗಲಿಕರಣಕ್ಕಾಗಿ ಸರ್ಕಾರ ಸುಮಾರು ₹10 ಕೋಟಿ ಮೀಸಲಿಟ್ಟು ಇಲ್ಲಿನ ಅಶೋಕ ವೃತ್ತ(ಮುದಗಲ್ ಕ್ರಾಸ್ )ದಿಂದ ಬಸವೇಶ್ವರರ ವೃತ್ತದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿ ವರ್ಷ ಗತಿಸುತ್ತಿದೆ. ಆದರೆ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ನಿರ್ಮಿಸಲು ಬೇಕಾದ ಅಗತ್ಯ ಸಿದ್ದತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳದೇ ಇರುವುದರಿಂದ ಇದೀಗ ನೀರಿಕ್ಷೆಯಂತೆ ಕಾಮಗಾರಿ ನಡೆಯದೇ ಇರುವುದರಿಂದ ಜನಸಾಮಾನ್ಯರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸರ್ವಿಸ್ ರಸ್ತೆಯಲ್ಲೇ ಪಾರ್ಕಿಂಗ್:ಪಟ್ಟಣದಲ್ಲಿ ಎರಡು ಬದಿಗಳಲ್ಲಿ ಸ್ಥಳೀಯ ವಾಹಗಳ ಓಡಾಟಕ್ಕೆ ಅನೂಕೂಲವಾಗಲೇಂದು ಹೆದ್ದಾರಿಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿನ ಹಳೆ ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ಬರುವವರು ಸೇರಿದಂತೆ ಇತರರು ಸರ್ವಿಸ್ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದು ಇದರಿಂದ ಸರ್ವಿಸ್ ರಸ್ತೆಯಲ್ಲಿ ಓಡಾಟ ನಡೆಸಲು ವಾಹನ ಸವಾರರು ಹಾಗೂ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.
ಸಾರ್ವಜನಿಕರ ಒತ್ತಾಯ:ಮಸ್ಕಿ ಪಟ್ಟಣದಲ್ಲಿನ ನಡೆಯುತ್ತಿರುವ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸುತ್ತಿರುವ ವಾಹನಳಿಗೆ ಕಡಿವಾಣ ಹಾಕಬೇಕು ಹಾಗೂ ಇಲ್ಲಿನ ಟ್ಯಾಕ್ಸಿ ಹಾಗೂ ಆಟೋಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ತಡೆಗಟ್ಟಬಹುದು. ಈಗಲಾದರೂ ತಾಲೂಕು ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ತ್ವರಿತಗತಿಯಲ್ಲಿ ಕಾಮಗಾರಿ ಮಾಡಿ ಮುಗಿಸಲು ಮುಂದಾಗಬೇಕಿದೆ.