ಸೋಮರಡ್ಡಿ ಅಳವಂಡಿ
ಕೊಪ್ಪಳ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ದಡ್ಡರಿರುವ ಮಕ್ಕಳನ್ನು 10 ತರಗತಿಗೆ ಸೇರ್ಪಡೆ ಮಾಡಿಕೊಳ್ಳದೆ ಹೊರಹಾಕುತ್ತಿರುವ ಇನ್ನೊಂದು ಮುಖ ಅನಾವರಣವಾಗಿದೆ. ಇದರ ನಡುವೆ ಸರ್ಕಾರಿ ಶಾಲೆಗಳು ಸಾಧಾರಣ ಮಕ್ಕಳನ್ನು ಬಾಹ್ಯವಾಗಿ ನೋಂದಣಿ ಮಾಡಿಸುತ್ತಿವೆ ಎಂಬ ದೂರುಗಳು ಸಹ ಕೇಳಿಬಂದಿದೆ.
ಬೇರೆ ಶಾಲೆಗೆ 10ನೇ ತರಗತಿಗೆ ವರ್ಗಾವಣೆ (ಟಿಸಿ) ಪತ್ರ ತೆಗೆದುಕೊಂಡು ಹೋದರೆ 9ನೇ ತರಗತಿ ತೇರ್ಗಡೆ ಮಾಡುತ್ತಿದ್ದೇವೆ. ಇಲ್ಲದಿದ್ದರೆ ಫೇಲ್ ಮಾಡುತ್ತೇವೆಂದು ಪಾಲಕರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆದರಿಕೆ ಹಾಕುತ್ತಿವೆ. ಇದರಿಂದ ಆತಂಕಗೊಂಡ ಪಾಲಕರು ತಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಸರ್ಕಾರಿ ಶಾಲೆಗೆ ಪ್ರವೇಶಾತಿ ಪಡೆಯಲು ಮುಂದಾಗಿದ್ದಾರೆ.ಪತ್ತೆ ಹೇಗೆ?
ಖಾಸಗಿ ಸಂಸ್ಥೆಗಳ ಕರಾಳ ಮುಖ ತೆರೆದಿಡಲು ಕಳೆದ ವರ್ಷ 9ನೇ ತರಗತಿಯಲ್ಲಿ ಎಷ್ಟು ಮಕ್ಕಳಿದ್ದರು, ಇದೀಗ 10ನೇ ತರಗತಿಯಲ್ಲಿ ಎಷ್ಟಿದ್ದಾರೆ ಎಂಬುವುದು ಅಥವಾ 10ನೇ ತರಗತಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿರುವ ಮಕ್ಕಳ ಮಾಹಿತಿ ಲೆಕ್ಕ ಹಾಕಿದಾರೆ ಖಾಸಗಿ ಶಾಲೆಯಿಂದ ಹೊರಹಾಕಲ್ಪಟ್ಟ ಮಕ್ಕಳ ಸಂಖ್ಯೆ ಸಿಗುತ್ತದೆ.ಬಾಹ್ಯ ನೋಂದಣಿಖಾಸಗಿ ಶಿಕ್ಷಣ ಸಂಸ್ಥೆಗಳು ಫೇಲಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಬಾಹ್ಯ ವಿದ್ಯಾರ್ಥಿಯಾಗಿ ಎಸ್‌ಎಸ್‌ಎಲ್‌ಸಿ ನೋಂದಣಿ ಮಾಡಿಸುತ್ತಿವೆ. ಇದು ಶೇಕಡಾವಾರ ಫಲಿತಾಂಶದ ಲೆಕ್ಕಕೆ ಪರಿಗಣಿಸದೆ ಇರುವುದರಿಂದ ಇಂತಹ ದಾರಿಯನ್ನು ಸಹ ಕಂಡುಕೊಂಡಿವೆ. ಇಂತಹ ಪ್ರಕರಣ ಸರ್ಕಾರಿ ಶಾಲೆಯಲ್ಲಿಯೂ ನಡೆಯುತ್ತಿರುವ ದೂರುಗಳು ಬಂದಿವೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಹೇಳಿದ್ದಾರೆ. ಅದರಲ್ಲೂ ಮೊರಾರ್ಜಿ ಶಾಲೆಯಲ್ಲಿ ಇಂಥ ಅಡ್ಡ ಹಾದಿಯ ಪ್ರಯತ್ನ ನಡೆಯುತ್ತಿದೆ. 100ಕ್ಕೆ 100ರಷ್ಟು ಫಲಿತಾಂಶಕ್ಕಾಗಿ ಸಾಧಾರಣ ವಿದ್ಯಾರ್ಥಿಗಳನ್ನು ಬೇರೆಡೆಗೆ ಕಳಿಸಲಾಗಿದೆ ಎಂದು ಪಾಲಕರು ದೂರಿದ್ದಾರೆ. ಈ ಕುರಿತು ಪಾಲಕರು ಲಿಖಿತ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ವರದಿ ಕೇಳಿದ ಮಕ್ಕಳ ರಕ್ಷಣಾ ಆಯೋಗ
ಎಸ್‌ಎಸ್‌ಎಲ್‌ಸಿ 100% ರಿಸಲ್ಟ್‌ಗಾಗಿ ದಡ್ಡ ಮಕ್ಕಳಿಗೆ ಟಿಸಿ ಶೀರ್ಷಿಕೆಯಡಿ ಕನ್ನಡಪ್ರಭ ಶುಕ್ರವಾರ ಪ್ರಕಟಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಡಿಡಿಪಿಐಯಿಂದ ವರದಿ ಕೇಳಲಾಗುವುದು ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇದು ಅಕ್ಷಮ್ಯ ಅಪರಾಧವಾಗಿದೆ. ಡಿಡಿಪಿಐಯಿಂದ ವಿವರಣೆ ಕೇಳಿ ಸಂಬಂಧಿಸಿದ ಶಾಲೆಗಳ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಪಾಲಕರು, ನಿಮ್ಮ ಮಗುವನ್ನು 9ನೇ ತರಗತಿ ಮುಗಿದ ತಕ್ಷಣ ಶಾಲೆಯಿಂದ ಹೊರಗೆ ಕಳುಹಿಸಿದ್ದರೇ ಆಯೋಗಕ್ಕೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.ಸರ್ಕಾರಿ ಶಾಲೆಗೆ 43 ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಖಾಸಗಿ ಶಾಲೆಯಿಂದ ಹೊರಗೆ ಬಂದು ಸರ್ಕಾರಿ ಶಾಲೆಯ 10ನೇ ತರಗತಿಗೆ 43 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ತಿಳಿಸಿದ್ದಾರೆ. ಕನ್ನಡಪ್ರಭ ವರದಿಗೆ ಲಿಖಿತ ಪ್ರತಿಕ್ರಿಯೆ ನೀಡಿರುವ ಅವರು, ದಡ್ಡರು ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಹೊರಹಾಕಿಲ್ಲ. ವಿವಿಧ ಕಾರಣಗಳಿಂದ ಹೊರ ಬಂದು ತಮಗೆ ಅನುಕೂಲವಾಗಿರುವ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿದ್ದಾರೆಂದು ತಿಳಿಸಿದ್ದಾರೆ.