ಗೋಕರ್ಣ: ಭಕ್ತಿಮಾರ್ಗವನ್ನು ಅನುಸರಿಸಿದವರಿಗೆ ಮುಕ್ತಿ ಖಚಿತ. ಶಕ್ತಿಗಿಂತ ಭಕ್ತಿ ಮುಖ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಗುರುವಾರ ಜೀವಯಾನ ಮಾಲಿಕೆಯಲ್ಲಿ ಯಮನನ್ನು ಗೆದ್ದವರುಂಟೇ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.ಅಮೃತತ್ವವನ್ನು ಕಳೆದುಕೊಂಡ ಪ್ರತಿ ಜೀವವೂ ಅಮರತ್ವಕ್ಕಾಗಿ ಹಪಹಪಿಸುತ್ತಿರುತ್ತದೆ. ಇದು ಪ್ರತಿ ಜೀವದ ಆಳ, ಗಾಢ ಬಯಕೆ. ಶಾಶ್ವತವಾಗಿ ಬದುಕಬೇಕು ಎಂಬ ಉದ್ದೇಶದಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬದುಕಲು ಬಯಸುವವರು ಎಷ್ಟು ಕಾಲ ಬದುಕಿದರೂ, ಅನಿವಾರ್ಯವಾದ ಮೃತ್ಯುವನ್ನು ಮುಂದೂಡುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ ಎಂದರು.ನಮಗೆ ಕ್ಲೇಶವಾದ್ದನ್ನು ಬೇರೆಯವರಿಗೆ ಮಾಡಬಾರದು. ಅಮರತ್ವಕ್ಕೆ ತಪಸ್ಸು ಮಾಡಿದ ರಾವಣ ಬೇರೆಯವರನ್ನು ಕ್ರೂರವಾಗಿ ಸಾಯಿಸಲು ಬಯಸುತ್ತಾನೆ. ಇದೇ ರಾಕ್ಷಸತ್ವ. ಇಂಥ ರಾವಣ, ಯಮನ ಜತೆ ಯುದ್ಧಕ್ಕೆ ಮುಂದಾದ. ವ್ಯವಸ್ಥೆ ಏರ್ಪಡಿಸುವ ಮತ್ತು ವ್ಯವಸ್ಥೆಯ ಭಂಜಕರ ನಡುವಿನ ಸಂಘರ್ಷ ಇದಾಗಿತ್ತು ಎಂದರು.ಮೃತ್ಯುಕಾರಕವಾದ ಕಾಲದಂಡದೊಂದಿಗೆ ರಥಾರೂಢನಾಗಿ ಯಮ ಯುದ್ಧಕ್ಕೆ ಸಜ್ಜಾಗುತ್ತಾನೆ. ಕಾಲಕ್ಕೆ ಬಂದ ಕ್ರೋಧದಿಂದ ದೇವರೂ ಭೀತಗೊಂಡರು. ಯಮನ ಪರಿವಾರ ನೋಡಿದ ರಾವಣನ ಅಮಾತ್ಯರು ಯುದ್ಧ ಅಸಾಧ್ಯ ಎಂದು ಹೇಳಿ ಕಾಲಿಗೆ ಬುದ್ಧಿ ಹೇಳಿದರು. ಆದರೆ ರಾವಣ ಧೈರ್ಯದಿಂದ ಕಾಲನನ್ನು ಎದುರಿಸಿದ. ರಾವಣನ ಮರ್ಮಸ್ಥಾನಗಳನ್ನು ಯಮ ಕತ್ತರಿಸಿದ. ರಾವಣ ನಿಶ್ಚೇತನಾಗಿ ಬೀಳುತ್ತಾನೆ. ಎಚ್ಚೆತ್ತುಕೊಂಡು ಯಮನ ಮೇಲೆ ಬಾಣಪ್ರಹಾರ ಮಾಡಿದ. ಘೋರ ಕದನದಲ್ಲಿ ಯಮನ ಮುಂದೆ ರಾವಣದ ಆಟ ನಡೆಯಲಿಲ್ಲ. ಆದರೆ ವರಬಲ ಇದ್ದ ರಾವಣ ಸಾಯಲಿಲ್ಲ ಎಂದು ಬಣ್ಣಿಸಿದರು.ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ಜಿ.ಎಸ್. ಹೆಗಡೆ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಪುಳು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಕಾರ್ಯದರ್ಶಿ ರವೀಂದ್ರ ಭಟ್ ಸೂರಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು