ಕೊಪ್ಪಳ: ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿರುವುದನ್ನು ವಿರೋಧಿಸಿ ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿಸಿದರು.ರಾಮಭಕ್ತರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. 30 ವರ್ಷಗಳ ಹಿಂದಿನ ಪ್ರಕರಣಗಳನ್ನು ಏಕೆ ಈಗ ರೀಓಪನ್ ಮಾಡಲಾಗುತ್ತಿದೆ ಎಂದೆಲ್ಲ ಕಿಡಿಕಾರಿ ಘೋಷಣೆ ಹಾಕಿದರು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.30 ವರ್ಷಗಳ ಹಿಂದಿನ ಪ್ರಕರಣಗಳನ್ನು ಈಗ ರೀಓಪನ್ ಮಾಡುವ ಅಗತ್ಯ ಏನಿತ್ತು? ಹಾಗೆ ಓಪನ್ ಮಾಡಬೇಕು ಎನ್ನುವುದಾದರೆ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಪ್ರಕರಣಗಳನ್ನು ರೀಓಪನ್ ಮಾಡಲಿ ಎಂದು ಸವಾಲು ಹಾಕಿದರು.ರಾಮನ ಧ್ಯಾನವನ್ನು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಕಮ್ಯೂನಿಷ್ಟ್ ದೇಶ ಚೀನಾದಲ್ಲಿಯೂ ಆರಾಧಿಸುತ್ತಾರೆ, ಅನೇಕ ದೇಶಗಳಲ್ಲಿ ಶ್ರೀರಾಮನನ್ನು ಪೂಜಿಸುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಈ ರೀತಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ವಿರುದ್ಧ ಪ್ರಕರಣ ಹಾಕುವುದು, ಗಲಾಟೆ ಮಾಡಿಸುವುದು ಮಾಡುತ್ತಿದ್ದಾರೆ. ಕನ್ನಡ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ. ಇಂಥ ಸರ್ಕಾರವನ್ನು ಕಿತ್ತೊಗೆಯುವುದೊಂದೇ ದಾರಿ ಎಂದರು.ಶ್ರೀರಾಮನನ್ನು ಕಾಲ್ಪನಿಕ ಎನ್ನುತ್ತಾರೆ. ಆದರೆ, ರಾಮಮಂದಿರ ಬಳಿ ಮಹರ್ಷಿ ವಾಲ್ಮಿಕಿ ಪ್ರತಿಮೆ ನಿರ್ಮಾಣ ಮಾಡಬೇಕು ಎನ್ನುತ್ತಾರೆ. ಶ್ರೀರಾಮ ಕಾಲ್ಪನಿಕ ಎನ್ನುವವರು ಮಹರ್ಷಿ ವಾಲ್ಮಿಕಿಯ ಪ್ರತಿಮೆ ನಿರ್ಮಾಣ ಮಾಡಬೇಕು ಎನ್ನುವುದರಲ್ಲಿ ಅರ್ಥ ಏನಿದೆ? ಶ್ರೀರಾಮನನ್ನು ಪರಿಚಯಿಸಿದ್ದೇ ವಾಲ್ಮೀಕಿ ಮಹರ್ಷಿ. ಕಾಂಗ್ರೆಸ್ ಪಕ್ಷದವರಲ್ಲಿ ಈ ಗೊಂದಲ ಇದೆ ಎಂದರು.ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ಚಕಾರ ಎತ್ತುತ್ತಿಲ್ಲ. ಬರಗಾಲ ಇದ್ದರೂ ಕೇವಲ ₹2 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ನಮ್ಮ ಸರ್ಕಾರ ಇದ್ದ ವೇಳೆಯಲ್ಲಿ ಹೆಕ್ಟೇರ್‌ಗೆ ₹15 ಸಾವಿರ ಹಾಕಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಮುಖಂಡರಾದ ನರಸಿಂಹರಾವ್ ಕುಲಕರ್ಣಿ, ಮಹಾಂತೇಶ ಪಾಟೀಲ್, ಮಂಜುನಾಥ ಪಾಟೀಲ್, ಡಾ.ಬಸವರಾಜ, ಬಸವರಾಜ ಗೌರಾ, ಮಂಜುಳಾ ಕರಡಿ, ಶೋಭಾ ನಗರಿ, ಗೀತಾ ಪಾಟೀಲ್, ಅರವಿಂದಗೌಡ ಪಾಟೀಲ, ಮಹಾಲಕ್ಷ್ಮಿ ಕಂದಾರಿ ಇದ್ದರು.