ಪಾವಗಡ ಸೋಲಾರ್‌ ಪಾರ್ಕ್‌ 2ನೇ ಹಂತ 2 ವರ್ಷದಲ್ಲಿ ಪೂರ್ಣ: ಇಂಧನ ಸಚಿವ ಕೆ.ಜೆ. ಜಾರ್ಜ್

KannadaprabhaNewsNetwork | Published : Mar 16, 2024 1:48 AM

ಸಾರಾಂಶ

ರೈತರಿಂದ ಗುತ್ತಿಗೆ ಅಧಾರದ ಮೇಲೆ ಇನ್ನೂ10 ಸಾವಿರ ಎಕರೆ ಜಮೀನು ಪಡೆದು, ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದೇವೆ. ಇದು ಈ ಭಾಗದ ರೈತರಿಗೆ ಒಂದು ದೊಡ್ಡ ಮಟ್ಟದ ವರದಾನ. ಸೋಲಾರ್‌ ಪಾರ್ಕ್‌ 2ನೇ ಹಂತ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ

ರೈತರಿಂದ ಗುತ್ತಿಗೆ ಅಧಾರದ ಮೇಲೆ ಇನ್ನೂ10 ಸಾವಿರ ಎಕರೆ ಜಮೀನು ಪಡೆದು, ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದೇವೆ. ಇದು ಈ ಭಾಗದ ರೈತರಿಗೆ ಒಂದು ದೊಡ್ಡ ಮಟ್ಟದ ವರದಾನ. ಸೋಲಾರ್‌ ಪಾರ್ಕ್‌ 2ನೇ ಹಂತ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.ಈಗಾಗಲೇ 2050 ಮೆಗಾ ವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಘಟಕ ನಿರ್ಮಾಣದ ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ತಿರುಮಣಿ ಗ್ರಾಮಕ್ಕೆ ಭೇಟಿ ನೀಡಿ ಸೌರಶಕ್ತಿ ಘಟಕಗಳ ಪರಿಶೀಲನೆ ನಡೆಸಿದರು. ಬಳಿಕ ತಿರುಮಣಿಯ ರಾಜ್ಯ ಸೋಲಾರ್‌ ಅಭಿವೃದ್ಧಿ ನಿಗಮ ಪ್ರಧಾನ ಕಚೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಜಮೀನು ಅಗತ್ಯವಿರುವ ಹಿನ್ನೆಲೆ ವ್ಯಾಪ್ತಿಯ ರಾಪ್ಟೆ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ರೈತರ ಜಮೀನು ಪರಿಶೀಲನೆ ನಡೆಸುವುದಾಗಿ ಹೇಳಿದರು.ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇದರಲ್ಲಿ ರೈತರಿಗೂ ಪಾಲುದಾರಿಕೆ ಕಲ್ಪಿಸಲು ಉದ್ದೇಶಿಸಿದ್ದು ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ರೈತರೂ ಪಾಲುದಾರರಾಗಲಿದ್ದಾರೆ:ಸದ್ಯ ಇರುವ ಸೋಲಾರ್ ಪವರ್ ಪಾರ್ಕ್ 13 ಸಾವಿರ ಎಕರೆ ವ್ಯಾಪ್ತಿಯಲ್ಲಿದ್ದು, 2,050 ಮೆಗಾ ವ್ಯಾಟ್​​ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇದೀಗ ಮತ್ತೆ 10 ಸಾವಿರ ಎಕರೆ ಪ್ರದೇಶದಲ್ಲಿ ಮತ್ತೊಂದು ಪಾರ್ಕ್ ಸ್ಥಾಪನೆಗೆ ನಿರ್ಧರಿಸಲಾಗಿದ್ದು, ಈ ಬಾರಿ ಪಿಪಿಪಿ ಮಾದರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಭೂಮಿ ಖರೀದಿ ಕುರಿತ ಪ್ರಕ್ರಿಯೆ ನಡೆದಿದ್ದು, ಜಮೀನು ನೀಡಲು ರೈತರು ಒಪ್ಪಿಕೊಂಡಿರುವುದಾಗಿ ಇಂಧನ ಇಲಾಖೆ ಮಾಹಿತಿ ನೀಡಿದೆ. ಮೊದಲ ಸೋಲಾರ್‌ ಪಾರ್ಕ್​ಗೆ ಪ್ರತಿ ಎಕರೆ ಜಮೀನಿಗೆ ವಾರ್ಷಿಕವಾಗಿ 25 ಸಾವಿರ ಹಣವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, ಈ ಬಾರಿ ಅಷ್ಟೇ ದರ ನೀಡಿ ಗುತ್ತಿಗೆ ಪಡೆದುಕೊಳ್ಳುವ ಜತೆಗೆ ರೈತರನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜಮೀನು ರೈತರ ಹೆಸರಿನಲ್ಲೇ ಇರುತ್ತದೆ. ನಾವು ಲೀಸ್ ಮಾತ್ರ ಪಡೆದುಕೊಳ್ಳುತ್ತೇವೆ ಎಂದರು.

ತಿರುಮಣಿ ಸೌರ ವಿದ್ಯುತ್‌ ಘಟಕದ ನಿರ್ಮಾಣದ ನಂತರ ರಾಪ್ಟೆ ಭಾಗದಲ್ಲಿ ಸುಮಾರು10 ಸಾವಿರ ಎಕರೆ ಜಾಗದಲ್ಲಿ ಸೌರ ಘಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಸ್ಥಳೀಯ ರೈತರಿಗೆ ವರದಾನವಾಗಲಿದ್ದು, ಉದ್ಯೋಗ ಸೃಷ್ಟಿಯೂ ಸಾಧ್ಯ. ಜತೆಗೆ ಅಗತ್ಯ ಕೈಗಾರಿಕೆಗಳೂ ಸ್ಥಾಪನೆಯಾಗಲಿವೆ. ಅಷ್ಟು ಮಾತ್ರವಲ್ಲದೆ ಪಾವಗಡವು ವಿಶ್ವದ ಬೃಹತ್‌ ಸೌರ ವಿದ್ಯುತ್‌ ಘಟಕ ಆಗಲಿದೆ ಎಂಬ ನಿರೀಕ್ಷೆ ಯಿದೆ ಎಂದರು.

350 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಗುರಿ: ಪ್ರಸ್ತುತ ವರ್ಷ ಈ ಸೋಲಾರ್‌ ಪಾರ್ಕ್‌ನಲ್ಲಿ ಇದುವರೆಗೆ 375 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗಿದ್ದು, ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ 370 ದಶಲಕ್ಷಕ್ಕೂ ಹೆಚ್ಚು ವಿದ್ಯುತ್‌ ಉತ್ಪಾದಿಸುತ್ತಾ ಬರುತ್ತಿದೆ. ಹೊಸ ಸೋಲಾರ್ ಪಾರ್ಕ್​ನಿಂದ 350 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ಇರಿಸಿಕೊಳ್ಳಲಾಗಿದೆ ಎಂದು ಜಾರ್ಜ್‌ ಹೇಳಿದರು. ಒಂದು ವೇಳೆ ಯೋಜನೆ ಆರಂಭಗೊಂಡರೆ ಜಗತ್ತಿನ ಅತಿದೊಡ್ಡ ಸೋಲಾರ್ ಪಾರ್ಕ್ ಎನ್ನುವ ಗರಿಮೆ ಮತ್ತೆ ರಾಜ್ಯ ಅದರಲ್ಲಿಯೂ ವಿಶೇಷವಾಗಿ ಪಾವಗಡದ ಪಾಲಾಗಲಿದೆ ಎಂದರು.

ಈ ವೇಳೆ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸೋಲಾರ್‌ ಪಾರ್ಕ್‌ ನಿರ್ಮಾಣದಿಂದ ಜಮೀನು ನೀಡಿದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸೌರಶಕ್ತಿ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಈ ಭಾಗದ ಪ್ರಗತಿಗೆ ಹೆಚ್ಚುಅದ್ಯತೆ ನೀಡಲಾಗುವುದು ಎಂದರು.ಸ್ಥಳೀಯ ಶಾಸಕ ಎಚ್‌.ವಿ.ವೆಂಕಟೇಶ್ ಮಾತನಾಡಿ, ಸ್ಥಳೀಯ ವಿದ್ಯಾವಂತ ಯುವಕರು ಹಾಗೂ ಕೃಷಿ ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ರಾಜ್ಯ ಕ್ರೆಡೆಲ್‌ ಅಧ್ಯಕ್ಷ ರಾಜು ಗೌಡ್ರು,ಇಂಧನ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತ, ಕೇಡಲ್ ಎಂ.ಡಿ.ರುದ್ರಪ್ಪಯ್ಯ,ಕೆಪಿಎನ್ ಅಮರ್ ನಾಥ್. ಜೀ.ವಿ.ಬಲರಾಮ್‌ ಹಾಗೂ ಮುಖಂಡ ವೆಂಕಟಮ್ಮನಹಳ್ಳಿ ನಾಗೇಂದ್ರರಾವ್, ಅರುಣ್‌ಕುಮಾರ್‌, ಸಕ್ರಪ್ಪ ಚನ್ನಕೇಶವ, ಆಶೋಕ್, ದೈವದೀನಂ, ಶ್ರೀನಿವಾಸ್‌ ಇತರರಿದ್ದರು.

Share this article