ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ನೇತ್ರಾವತಿ ನದಿಯ ನಡುವೆ ಇರುವ ಪಾವೂರು ಉಳಿಯ ದ್ವೀಪವು ಅಕ್ರಮ ಮರಳು ಗಣಿಗಾರಿಕೆಯಿಂದ ಅಳಿವಿನಂಚಿಗೆ ಸಾಗುವ ಭೀತಿ ಎದುರಿಸುತ್ತಿದ್ದು, ಅಲ್ಲಿರುವ 50ಕ್ಕೂ ಅಧಿಕ ಕುಟುಂಬಗಳು ಆತಂಕದಿಂದ ದಿನ ದೂಡುತ್ತಿವೆ.ಈ ದ್ವೀಪ ಪ್ರದೇಶವು ಹಚ್ಚ ಹಸುರಿನಿಂದ ಕೂಡಿದ್ದು, ನೈಸರ್ಗಿಕವಾಗಿ ಸೂಕ್ಷ್ಮ ಪ್ರದೇಶವೂ ಹೌದು. ಆದರೆ ಹಲವು ವರ್ಷಗಳಿಂದ ಈ ಭಾಗದಲ್ಲಿ ಅವ್ಯಾಹತವಾಗಿ ಮರಳುಗಾರಿಕೆಯಿಂದ ವರ್ಷದಿಂದ ವರ್ಷಕ್ಕೆ ದ್ವೀಪ ಪ್ರದೇಶ ಸಣ್ಣದಾಗುತ್ತಾ ಸಾಗುತ್ತಿದ್ದು, ಮೂರು ತಲೆಮಾರುಗಳಿಂದ ಇಲ್ಲೇ ನೆಲೆಸುತ್ತಿರುವ ಕುಟುಂಬಗಳ ಜೀವನಕ್ಕೇ ಸಂಚಕಾರ ತಂದಿದೆ. ಇಲ್ಲಿನ ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಫಟ್ಟವರಿಗೆ ಮನವಿ ನೀಡಲಾಗುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ನಿವಾಸಿಗರು ಆಗ್ರಹಿಸಿದ್ದಾರೆ.
ಅರ್ಧದಷ್ಟು ದ್ವೀಪ ನೀರುಪಾಲು!:ಸ್ಥಳೀಯರಾದ ಗಿಲ್ಬರ್ಟ್ ಡಿಸೋಜ ಮಾತನಾಡಿ, ಸುಮಾರು 100 ಎಕರೆಯಷ್ಟಿದ್ದ ಪಾವೂರು ಉಳಿಯ ದ್ವೀಪ ಪ್ರದೇಶ ಅಕ್ರಮ ಮರಳು ದಂಧೆಯಿಂದಾಗಿ ಪ್ರಸಕ್ತ ಅರ್ಧದಷ್ಟುನೀರು ಪಾಲಾಗಿದೆ. ಕೆಲ ವರ್ಷಗಳ ಹಿಂದೆ ಎ.ಬಿ. ಇಬ್ರಾಹಿಂ ಜಿಲ್ಲಾಧಿಕಾರಿಯಾಗಿದ್ದಾಗ ಅಧಿಕಾರಿಗಳ ಜತೆ ಇಲ್ಲಿಗೆ ಭೇಟಿ ನೀಡಿ, ವಳಚ್ಚಿಲ್, ಪಾವೂರು, ಗಾಡಿಗದ್ದೆ, ಸಹ್ಯಾದ್ರಿ ಕಾಲೇಜಿನ ಹಿಂಭಾಗ ಸೇರಿ ಮೂರು ಪ್ರದೇಶಗಳಲ್ಲಿ ಮರಳುಗಾರಿಕೆಯ ದಕ್ಕೆಯನ್ನು ಬಂದ್ ಮಾಡಿ ನಿಷೇಧಾಜ್ಞೆ ಹೊರಡಿಸಿದ್ದರು. ಕೆಲ ವರ್ಷಗಳ ಕಾಲ ಮರಳು ದಂಧೆ ಸ್ಥಗಿತಗೊಂಡಿತ್ತು. ಮತ್ತೆ ಕೆಲ ವರ್ಷಗಳಿಂದೀಚೆಗೆ ಆರಂಭವಾಗಿದ್ದು, ಈ ನಿಷೇಧಾಜ್ಞೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮವಾಗುತ್ತಿಲ್ಲ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ಇದೀಗ ಭಾರೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಮರಳುಗಾರಿಕೆಯ ಕಾರ್ಮಿಕರು ಮರಳು ತೆಗೆಯುತ್ತಿದ್ದಾರೆ. ದ್ವೀಪದಲ್ಲಿ ವಾಸವಾಗಿರುವ ಬೆರಳೆಣಿಕೆಯಷ್ಟಿರುವ ಜನರ ಜತೆ ಸಂಘರ್ಷ, ಬೆದರಿಕೆ ಒಡ್ಡುವ ಕಾರ್ಯ ನಡೆಸುತ್ತಿದ್ದಾರೆ. ಭಯ ರಹಿತ ಜೀವನ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ಅಲವತ್ತುಕೊಂಡರು.ಪಾವೂರು ಉಳಿಯ ಪ್ರದೇಶಕ್ಕೆ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಅಡ್ಯಾರು ಮೂಲಕ ದೋಣಿಯಲ್ಲಿ ಸಾಗಿದ ಸಮಾನಮನಸ್ಕ ಸಂಘಟನೆಗಳ ನಿಯೋಗವು ದ್ವೀಪದ ಸಾಕಷ್ಟು ಭೂಭಾಗ ಮರಳುಗಾರಿಕೆಯಿಂದ ಮಾಯವಾಗಿರುವುದನ್ನು ವೀಕ್ಷಿಸಿತು. ಅಲ್ಲದೆ ಹಾರೆಯ ಮೂಲಕ ದ್ವೀಪದ ಭಾಗವನ್ನು ಕೊರೆದು ಮರಳು ತೆಗೆಯುತ್ತಿರುವ ಕುರುಹುಗಳೂ ಕಂಡು ಬಂದಿವೆ. ದೋಣಿಯೊಂದು ಹಗಲಲ್ಲೇ ಅಕ್ರಮವಾಗಿ ಮರಳುಗಾರಿಕೆಗೆ ಆಗಮಿಸಿದ್ದು ಕಂಡುಬಂತು. ನೇತ್ರಾವತಿ ನದಿಯ ವಳಚ್ಚಿಲ್ ಪ್ರದೇಶದ ದಕ್ಕೆಯಲ್ಲಿ ಕ್ರೇನ್ ಮೂಲಕ ವಾಹನಗಳಿಗೆ ಮರಳು ತುಂಬಿಸಲಾಗುತ್ತಿತ್ತು. ದ್ವೀಪದ ಸುತ್ತಲಿನ ಪ್ರದೇಶಗಳಲ್ಲಿ ಲೋಡ್‌ಗಟ್ಟಲೆ ಮರಳು ಸಂಗ್ರಹಿಸಿಡಲಾಗಿತ್ತು. ಶಾಶ್ವತ ಸೇತುವೆ ಮರೀಚಿಕೆ:
ಪಾವೂರು ಉಳಿಯ ಪ್ರದೇಶದ ಜನರು ಹೊರ ಪ್ರಪಂಚಕ್ಕೆ ಬರಬೇಕಾದರೆ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕವೇ ಸಾಗಬೇಕು. ಸದ್ಯ ಸ್ಥಳೀಯರನ್ನು ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ದ್ವೀಪದಿಂದ ಅಡ್ಯಾರು ದಡಕ್ಕೆ ಸಾಗಿಸಲು ಒಂದು ಮೋಟಾರೀಕೃತ ದೋಣಿ ಹಾಗೂ 2 ಸಾಮಾನ್ಯ ಹಾಯಿ ದೋಣಿಗಳಿವೆ. ಬೇಸಗೆಯಲ್ಲಿ ಸ್ಥಳೀಯರು ಕೆಲ ವರ್ಷಗಳಿಂದೀಚೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಣ್ಣ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದಾರೆ. 2019ರ ಜನವರಿಯಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಕಬ್ಬಿಣದ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದರು. ಆದರೆ ಅಕ್ರಮ ಮರಳು ದಂಧೆಕೋರರು ಕೆಲ ದಿನಗಳಲ್ಲೇ ಈ ಸೇತುವೆಯನ್ನು ಕಿತ್ತು ಹಾಕಿದ್ದು, ಈ ಬಗ್ಗೆ ದೂರು ಕೂಡ ನೀಡಲಾಗಿತ್ತು. ಶಾಶ್ವತ ಸೇತುವೆಯ ಬೇಡಿಕೆ ಇಲ್ಲಿ ಈಡೇರಿಯೇ ಇಲ್ಲ.