ಕನ್ನಡಪ್ರಭ ವಾರ್ತೆ, ಭದ್ರಾವತಿ
ಮೈಸೂರು ಕಾಗದ ಕಾರ್ಖಾನೆಗೆ 2010-11ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹100 ಹೆಚ್ಚುವರಿ ಹಣ ಪಾವತಿಸಬೇಕು. ಇಲ್ಲದಿದ್ದರೆ, ಲೋಕಸಭೆ ಚುನಾವಣೆ ಬಹಿಷ್ಕರಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಂಚಾಲಕ ಎಚ್.ಎನ್ ದೇವಕುಮಾರ್ ಎಚ್ಚರಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2010-11ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹1800 ದರ ನಿಗದಿ ಮಾಡಲಾಗಿತ್ತು. ಆದರೆ, ರೈತರ ಒತ್ತಾಯದ ಮೇರೆಗೆ ₹100 ಹೆಚ್ಚುವರಿಯಾಗಿ ₹1900 ನಿಗದಿಪಡಿಸಲಾಯಿತು. ಆದರೆ, ದಶಕ ಕಳೆದರೂ ಈ ಹೆಚ್ಚುವರಿ ಹಣ ಪಾವತಿಯಾಗಿಲ್ಲ ಎಂದರು.
ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ರೈತರಿಗೆ ಪ್ರತಿ ಟನ್ ಕಬ್ಬಿಗೆ ₹100 ಪಾವತಿಸುವಂತೆ ಆದೇಶಿಸಿದ್ದಾರೆ. ಮಂಡ್ಯ ಮೈ ಶುಗರ್ ಕಾರ್ಖಾನೆಗೆ ಕಬ್ಬು ಪೂರೈಸಿದ ಬೆಳೆಗಾರರಿಗೆ ಹೆಚ್ಚುವರಿ ಹಣ ಪಾವತಿಯಾಗಿದೆ. ಆದರೆ, ಎಂಪಿಎಂ ಕಾರ್ಖಾನೆಗೆ ಕಬ್ಬು ಪೂರೈಸಿದ ಬೆಳೆಗಾರರಿಗೆ ಹಣ ಪಾವತಿಯಾಗಿಲ್ಲ. ಒಟ್ಟು 4825 ಕಬ್ಬು ಬೆಳೆಗಾರರಿಗೆ ₹2.94 ಕೋಟಿ ಹಣ ವಿತರಣೆಯಾಗಬೇಕಿದೆ ಎಂದು ತಿಳಿಸಿದರು.ಈ ಸಂಬಂಧ ನಿರಂತರ ಹೋರಾಟ ನಡೆಸಲಾಗುತ್ತಿದೆ. ಅನಂತರ ಬಂದ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೂ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಹಾಗು ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ಹಣ ಪಾವತಿಸಿ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ ಮಾತನಾಡಿ, ನಮಗೆ ಬರಬೇಕಿರುವ ಹೆಚ್ಚುವರಿ ಹಣ ಕೇಳುತ್ತಿದ್ದೇವೆ ಹೊರತು, ಭಿಕ್ಷೆ ಕೇಳುತಿಲ್ಲ. ಸರ್ಕಾರ ಮತ್ತು ಕಾರ್ಖಾನೆ ನಾವು ಪೂರೈಸಿರುವ ಕಬ್ಬಿನಿಂದ ಲಾಭ ಮಾಡಿಕೊಂಡಿವೆ. ಆದ್ದರಿಂದ ಸರ್ಕಾರ ಕೂಡಲೇ ಹೆಚ್ಚುವರಿ ಹಣ ಪಾವತಿ ಜೊತೆಗೆ ಎಂಪಿಎಂ ಕಾರ್ಖಾನೆ ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಈರಣ್ಣ, ಕಾರ್ಯದರ್ಶಿ ಪ್ರಸನ್ನಕುಮಾರ್, ನಿರ್ದೇಶಕರಾದ ಶಿವರಾಂ, ಪುಟ್ಟಸ್ವಾಮಿಗೌಡ, ಸುಂದರರಾಜ್, ನಾಗರಾಜ್, ಶಂಕರ್ ಮತ್ತಿತರರು ಹಾಜರಿದ್ದರು.
- - - -ಡಿ2-ಬಿಡಿವಿಟಿ:ಭದ್ರಾವತಿಯ ಪತ್ರಿಕಾ ಭವನದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ಗು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.