ಬೆಂಗಳೂರು : ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಗಾಗಿ ಘೋಷಿಸಲಾಗಿರುವ ಒಂದು ಬಾರಿ ಪರಿಹಾರ(ಒಟಿಎಸ್) ವ್ಯವಸ್ಥೆಯನ್ನು ಬಳಸಿಕೊಂಡಿ ಸುಸ್ತಿದಾರರು ತಮ್ಮ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕು. ಆ. 1ರಿಂದ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟಿಎಸ್ ವ್ಯವಸ್ಥೆ ಅಡಿಯಲ್ಲಿ ಸುಸ್ತಿದಾರರು ಜು. 31ರೊಳಗೆ ತಮ್ಮ ಬಾಕಿ ತೆರಿಗೆ ಪಾವತಿಸಿ ದಂಡ ಮತ್ತು ಬಡ್ಡಿ ಮನ್ನಾ ಮಾಡಿಕೊಳ್ಳಬೇಕು. 4 ಲಕ್ಷ ಸುಸ್ತಿದಾರರ ಪೈಕಿ ಈವರೆಗೆ 80 ಸಾವಿರ ಆಸ್ತಿ ಮಾಲೀಕರು ಮಾತ್ರ ಬಾಕಿ ತೆರಿಗೆ ಪಾವತಿಸಿದ್ದಾರೆ. ಉಳಿದ 3.20 ಲಕ್ಷ ಸುಸ್ತಿದಾರರು ಬಾಕಿ ಆಸ್ತಿ ತೆರಿಗೆ ಪಾವತಿಗೆ ಮುಂದಾಗಬೇಕು. ಇಲ್ಲದಿದ್ದರೆ ಆ. 1ರ ನಂತರದಿಂದ ಬಾಕಿ ತೆರಿಗೆ ಜತೆಗೆ ಬಡ್ಡಿ ಮತ್ತು ದಂಡವನ್ನು ಯಾವುದೇ ವಿನಾಯಿತಿ ಇಲ್ಲದೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.
ರಸ್ತೆ ಗುಂಡಿ ಮಾಹಿತಿ ನೀಡಲು ತಂತ್ರಾಂಶ
ನಗರ ವ್ಯಾಪ್ತಿಯ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದರೆ, ಅದನ್ನು ಬಿಬಿಎಂಪಿಗೆ ಮಾಹಿತಿ ನೀಡಿ ಶೀಘ್ರದಲ್ಲಿ ಮುಚ್ಚುವಂತೆ ಮಾಡಲು ನೂತನ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಈ ತಂತ್ರಾಂಶದಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ನಾಗರಿಕರೂ ರಸ್ತೆ ಗುಂಡಿ ದೃಶ್ಯದ ಫೋಟೋವನ್ನು ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗುವುದು. ಅದರಿಂದ ರಸ್ತೆ ಗುಂಡಿ ಮಾಹಿತಿ ತಿಳಿದು ತ್ವರಿತವಾಗಿ ಮುಚ್ಚಲು ಸಹಕಾರಿಯಾಗಲಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು. ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ರಮೇಶ್, ಸ್ನೇಹಲ್ ಇತರರಿದ್ದರು.