ತೆರಿಗೆ ಪಾವತಿಸಿ ಕಡೂರಿನ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಿ: ಭಂಡಾರಿ ಶ್ರೀನಿವಾಸ್

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ಕಡೂರು, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಮಾಲೀಕರು 2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳೊಳಗೆ ಪಾವತಿಸಿ ಶೇ.5ರಷ್ಟು ತೆರಿಗೆ ರಿಯಾಯಿತಿ ಪಡೆದು ಕಡೂರಿನ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಏಪ್ರಿಲ್ ತಿಂಗಳೊಳಗೆ ಪಾವತಿಸಿ ಶೇ.5ರಷ್ಟು ತೆರಿಗೆ ರಿಯಾಯಿತಿ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಮಾಲೀಕರು 2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳೊಳಗೆ ಪಾವತಿಸಿ ಶೇ.5ರಷ್ಟು ತೆರಿಗೆ ರಿಯಾಯಿತಿ ಪಡೆದು ಕಡೂರಿನ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಬುಧವಾರ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಆಸ್ತಿ ಕಂದಾಯ ಪಾವತಿಸಲು ಆಗಮಿಸಿದ ನಾಗರಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿ ಮಾತನಾಡಿದರು. ಈಗಾಗಲೇ ಪಟ್ಟಣದಾದ್ಯಂತ ಆಸ್ತಿ ತೆರಿಗೆ ಪಾವತಿಗೆ ಪುರಸಭೆಯಿಂದ ವಾಹನಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಖಾರಿಗಳಿಂದ ಆಂದೋಲನ ನಡೆಸ ಲಾಗುತ್ತಿದೆ ಎಂದರು.

ಪಟ್ಟಣದಲ್ಲಿ ನಿವೇಶನ, ವಸತಿ, ವಾಣಿಜ್ಯ ಸೇರಿದಂತೆ ಸರ್ಕಾರದ ಆದೇಶದ ಅನ್ವಯ ಆಸ್ತಿ ತೆರಿಗೆ ಪಾವತಿಸಿ ದಂಡದಿಂದ ಮುಕ್ತರಾಗಬೇಕು. ವಿಶೇಷವಾಗಿ ಏಪ್ರಿಲ್ ತಿಂಗಳೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಪಡೆದು ಪುರಸಭೆ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದರು.ಆನ್ ಲೈನ್ ಮೂಲಕ ತೆರಿಗೆ ಪಾವತಿಗೂ ಅವಕಾಶವಿದ್ದು, ವೇಗವಾಗಿ ಬೆಳೆಯುತ್ತಿರುವ ಕಡೂರು ಪಟ್ಟಣದ ಪಾರ್ಕು, ನೀರು, ರಸ್ತೆ, ವಿದ್ಯುತ್ ದೀಪ ಸೇರಿದಂತೆ ಮತ್ತಿತರ ಅಭಿವೃದ್ಧಿ ನೀವೂ ಭಾಗೀದಾರರಾದಂತಾಗುತ್ತದೆ ಎಂದು ಶ್ರೀನಿವಾಸ್ ಮನವಿ ಮಾಡಿದರು. ಪುರಸಭಾ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಕಚೇರಿ ಮುಂಭಾಗದಲ್ಲಿ ವಿಶೇಷ ಕೌಂಟರ್ ವ್ಯವಸ್ಥೆ ಮಾಡಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನರು ತಮ್ಮ ಸ್ವತ್ತಿನ ಕಂದಾಯ ಪಾವತಿಸಬೇಕು. ಮೇ, ಜೂನ್ ಹಾಗೂ ಜುಲೈ ಮಾಹೆವರೆಗೆ ಆಸ್ತಿ ತೆರಿಗೆಗೆ ಪಾವತಿಗೆ ಯಾವುದೇ ದಂಡ ಇರುವುದಿಲ್ಲ. ಜುಲೈ ತಿಂಗಳ ನಂತರ ಕಂದಾಯ ಪಾವತಿಗೆ ಪ್ರತಿ ಮಾಹೆಯಲ್ಲಿನ ಶೇ.2ರಷ್ಟು ದಂಡ ವಿಧಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಗೋವಿಂದರಾಜು, ಸಿಬ್ಬಂದಿ ತಿಮ್ಮಯ್ಯ, ಶಂಕರ್, ಮುಖಂಡರಾದ ಕೆ.ಆರ್.ಚಂದ್ರು, ಡಿಶ್ ಮಂಜುನಾಥ್,ಉಮಾ ಶಂಕರ್, ಪ್ರೇಮ್.ಜಗದೀಶ್, ಕುಮಾರ್‌ ಮತ್ತಿತರಿದ್ದರು. 2ಕೆಕೆಡಿಯು1. ಕಡೂರು ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ 2025-26ನೇ ಸಾಲಿನ ಕಂದಾಯ ತೆರಿಗೆ ಪಾವತಿಸಲು ಆಗಮಿಸಿದ ನಾಗರಿಕರಿಗೆ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಿಸಿದರು. ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಗೋವಿಂದರಾಜು, ಕೆ.ಆರ್.ಚಂದ್ರು, ಡಿಶ್ ಮಂಜುನಾಥ್ ಮತ್ತಿತರಿದ್ದರು.

Share this article