ಪಿಡಿಒ ಸಸ್ಪೆಂಡ್;ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು

KannadaprabhaNewsNetwork | Updated : Mar 15 2024, 04:22 PM IST

ಸಾರಾಂಶ

ರೈತ ಸಮೂಹಕ್ಕೆ ವರದಾನವಾದ ಕೃಷಿಹೊಂಡ, ದನದ ಕೊಟ್ಟಿಗೆ ನಿರ್ಮಾಣದ ಬಿಲ್‌ಗಳನ್ನು ಮಾಡಲು ಗ್ರಾಪಂನಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಪಂನಲ್ಲಿನ ಭ್ರಷ್ಟಾಚಾರ ತನಿಖೆ ಜತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ವಜಾ ಮಾಡಬೇಕು

ಗಜೇಂದ್ರಗಡ: ಗ್ರಾಪಂನಲ್ಲಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಜಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮೀಪದ ಲಕ್ಕಲಕಟ್ಟಿ ಗ್ರಾಪಂ ಎದುರು ನಡೆಯುತ್ತಿದ್ದ ಪ್ರತಿಭಟನೆ ಹಿನ್ನೆಲೆ ಗುರುವಾರ ಪಿಡಿಒ ಸಸ್ಪೆಂಡ್ ಮಾಡಿದ್ದರಿಂದ ಹೋರಾಟವನ್ನು ಗುರುವಾರ ಮೊಟುಕುಗೊಳಿಸಿದರು.

ಲಕ್ಕಲಕಟ್ಟಿ ಗ್ರಾಪಂ ವ್ಯಾಪ್ತಿಯ ಕಲ್ಲಿಗನೂರ, ನಾಗೇಂದ್ರಗಡ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವದಿಲ್ಲ. ಪರಿಣಾಮ ಕಳೆದ ೨ ವರ್ಷಗಳಿಂದ ಗ್ರಾಮ ಸಭೆ ನಡೆದಿಲ್ಲ. ೨೦೨೩-೨೪ನೇ ಸಾಲಿನಲ್ಲಿ ಕೇವಲ ೯ ದಿನಗಳ ಕಾಲ ಉದ್ಯೋಗ ಖಾತ್ರಿ ಅಡಿ ಕೆಲಸ ನೀಡಿದ್ದಾರೆ. ಇತ್ತ ೨೦ ರಿಂದ ೩೦ ಕೊಟ್ಟಿ ಹಾಜರಿ ಹಾಕಿ ಕೆಲಸ ನಡೆಸಿ ಸರ್ಕಾರದ ಹಣ ದೂರುಪಯೋಗ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪದ ಜತೆಗೆ ಪ್ರತಿಭಟನಾಕಾರರು, ರೈತ ಸಮೂಹಕ್ಕೆ ವರದಾನವಾದ ಕೃಷಿಹೊಂಡ, ದನದ ಕೊಟ್ಟಿಗೆ ನಿರ್ಮಾಣದ ಬಿಲ್‌ಗಳನ್ನು ಮಾಡಲು ಗ್ರಾಪಂನಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಪಂನಲ್ಲಿನ ಭ್ರಷ್ಟಾಚಾರ ತನಿಖೆ ಜತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದರು.

ಹೀಗಾಗಿ ಬುಧವಾರ ತಾಪಂ ಎಡಿ (ಪಂಚಾಯತ್ ರಾಜ್) ಬಸವರಾಜ ಬಡಿಗೇರ ಪ್ರತಿಭಟನಾಕಾರರ ಅಹವಾಲು ಆಲಿಸಿದ ಬಳಿಕ ೧೦-೧೫ ದಿನಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ಅಧಿಕಾರಿಗಳ ಮಾತಿಗೆ ಸಹಮತ ವ್ಯಕ್ತಪಡಿಸದ್ದರಿಂದ ಪ್ರತಿಭಟನೆ ಮುಂದುವರೆಸುವುದರ ಜತೆಗೆ ಗುರುವಾರ ಮಧ್ಯಾಹ್ನದೊಳಗೆ ಬೇಡಿಕೆ ಈಡೇರಿದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಹೀಗಾಗಿ ಗುರುವಾರ ತಾಪಂನ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂನ ಪಿಡಿಒ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ಇನ್ನುಳಿದ ಬೇಡಿಕೆ ಈಡೇರಿಸಲು ಕಾಲಾವಕಾಶ ನೀಡಲು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮೊಟಕುಗೊಳಿಸಲಾಯಿತು.

ಸಮೀಪದ ಲಕ್ಕಲಕಟ್ಟಿ ಗ್ರಾಪಂ ಎದುರು ನಡೆಸುತ್ತಿದ್ದ ಪ್ರತಿಭಟನಾಕಾರರಿಗೆ ಆರೋಪಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸ್ಥಳ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತು. ಹೀಗಾಗಿ ವರದಿ ಆಧರಿಸಿ ಪಿಡಿಒ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಹೊಸಳ್ಳಿ, ಮಲ್ಲು ಕೊಪ್ಪದ, ಅಳೆಬಸಪ್ಪ ಬೆನಕವಾರಿ, ಶಿವ ಶಿರೂರ, ಬಸವರಾಜ ಕೊಪ್ಪದ, ಪರಮೇಶ ಬೂದಿಹಾಳ, ಮುತ್ತಣ್ಣ ಅಕ್ಕರಗಲ್ಲ, ಮಲ್ಲು ಆಡೂರ ಸೇರಿದಂತೆ ಇತರರು ಇದ್ದರು.

Share this article