ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ನೆಮ್ಮದಿ

KannadaprabhaNewsNetwork | Published : Dec 14, 2024 12:50 AM

ಸಾರಾಂಶ

ದೀಪ ಮನುಕುಲದ ಅಜ್ಞಾನ ಮತ್ತು ಅಂಧಕಾರ ಹೋಗಲಾಡಿಸಿ ಧರ್ಮದ ಬೆಳಕಿನೆಡೆಗೆ ಹಾಗೂ ಸನ್ಮಾರ್ಗ ತೋರಿಸುವ ದಿವ್ಯ ಶಕ್ತಿ

ಲಕ್ಷ್ಮೇಶ್ವರ: ಜಗತ್ತಿನಲ್ಲಿ ಜನ್ಮ ತಾಳಿದ ಮೇಲೆ ನಮ್ಮನ್ನು ರಕ್ಷಣೆ ಮಾಡುವುದು ನಮ್ಮ ಹಣ, ಸಂಪತ್ತು, ಜಾತಿ, ಸಮಾಜವಲ್ಲ, ನಮ್ಮನ್ನು ಮೋಕ್ಷದೆಡೆಗೆ ಕರೆದುಕೊಂಡು ಹೋಗುವದು ಭಗವಂತನ ನಾಮಸ್ಮರಣೆಯಾಗಿದೆ.ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತದೆ ಎಂದು ಕಾಗಿನೆಲೆ ಕನಕಪೀಠದ ಶ್ರೀನಿರಂಜನಾನಂದಪುರಿ ಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ ಟ್ರಸ್ಟ್ ಕಮೀಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೧ನೇ ವರ್ಷದ ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೀಪ ಮನುಕುಲದ ಅಜ್ಞಾನ ಮತ್ತು ಅಂಧಕಾರ ಹೋಗಲಾಡಿಸಿ ಧರ್ಮದ ಬೆಳಕಿನೆಡೆಗೆ ಹಾಗೂ ಸನ್ಮಾರ್ಗ ತೋರಿಸುವ ದಿವ್ಯ ಶಕ್ತಿಯಾಗಿದೆ, ಕತ್ತಲೆ ಎಂಬ ಅಜ್ಞಾನ ಕಳೆದು ಸುಜ್ಞಾನದ ಬೆಳಕು ಮೂಡಿಸುವುದು ಕಾರ್ತಿಕೋತ್ಸವದ ಉದ್ದೇಶವಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಮೌಡ್ಯತೆಗಳಿಗೆ ಆದ್ಯತೆ ನೀಡದೆ,ಶಿಕ್ಷಣ ಕ್ರೀಡೆ, ಸಂಗೀತ, ಜಾನಪದ ಕಲೆ ರೂಢಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಇನ್ನೊರ್ವ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಚಟುವಟಿಕೆ ಹೆಚ್ಚು ಹೆಚ್ಚು ನಡೆಯುವಂತಾದರೆ ಅಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ಹಲವಾರು ವರ್ಷಗಳಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಚಟುವಟಿಕೆ ನಿರಂತವಾಗಿ ನಡೆಸಿಕೊಂಡು ಹೋಗುವ ಹಾಲಮತ ಸಮಾಜದ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬೀರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಕೋರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಿಎಸ್‌ಐ ನಾಗರಾಜ ಗಡದ, ಮುಖಂಡರಾದ ನಿಂಗಪ್ಪ ಬನ್ನಿ, ಶೇಕಣ್ಣ ಕಾಳೆ, ವೀರೇಂದ್ರ ಪಾಟೀಲ್, ನೀಲಪ್ಪ ಶೇರಸೂರಿ, ಗಂಗಪ್ಪ ದುರಗಣ್ಣವರ, ನೀಲಪ್ಪ ಪೂಜಾರ ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ, ಜಯಕ್ಕ ಕಳ್ಳಿ, ನಾಗರಾಜ ಮಡಿವಾಳರ, ಅಣ್ಣಪ್ಪ ರಾಮಗೇರಿ, ಮಂಜುನಾಥ. ಕೊಕ್ಕರಗುಂದಿ, ಶಿವಯೋಗಿ ಗಡ್ಡದೇವರಮಠ, ಯಲ್ಲಪ್ಪ ಸೂರಣಗಿ ಅಮರಪ್ಪ ಗುಡಗುಂಟಿ, ಮಲ್ಲಪ್ಪ ಗುಡಗುಂಟಿ, ಶಿದ್ದಪ್ಪ ಪೂಜಾರ, ಪುಟ್ಟಪ್ಪ ಕೋರಿ ಸೇರಿದಂತೆ ಅನೇಕರು ಇದ್ದರು.

ನ್ಯಾಯವಾದಿ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು, ವಿ.ಜಿ. ಪಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಾಧಕರಿಗೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಸ್ವಾಮಿಗಳು ವಹಿಸಿದ್ದರು.

ಇದಕ್ಕೂ ಮೊದಲು ಕಾಗಿನೆಲೆ ಶ್ರೀಗಳನ್ನು ಹಾವಳಿ ಆಂಜನೇಯ ದೇವಸ್ಥಾನದಿಂದ ಪೂರ್ಣ ಕುಂಭ ಹೊತ್ತ ಮುತೈದೆಯರು ಡೊಳ್ಳಿನ ವಾದ್ಯಗಳಿಂದ ಅದ್ಧೂರಿ ಸ್ವಾಗತದಿಂದ ಬೀರೇಶ್ವರ ದೇವಸ್ಥಾನ ಕರೆತರಲಾಯಿತು.

ಬೀರೇಶ್ವರ ದೇವಸ್ಥಾನದ ಕಾರ್ತಿಕೋತ್ಸವಕ್ಕೆ ಕಾಗಿನೆಲೆ ಶ್ರೀಗಳು ಚಾಲನೆ ನೀಡಿದರು. ಕಾರ್ಯಕ್ರಮ ನಂತರ ಕರ್ನಾಟಕ ಮೇಲೋಡಿಸ್ ಮುಂಡರಗಿ ಜನಪದ ರಸಮಂಜರಿ ಹಾಗೂ ನಿನಗಿಂತ ನಾ ಬೆರಕಿ ಡೊಳ್ಳಿನ ಪದಗಳು ಕಾರ್ಯಕ್ರಮ ಜರುಗಿತು.ಈಶ್ವರ ಮೆಡ್ಲೆರಿ, ನಾಗರಾಜ ಶಿಗ್ಲಿ, ನೀಲಪ್ಪ ಪಡಗೇರಿ, ಮಲ್ಲೇಶ ಗೊಜಗೋಜಿ ಕಾರ್ಯಕ್ರಮ ನಿರ್ವಹಿಸಿದರು.

ಕಾಗಿನೆಲೆ ಕನಕಪೀಠದ ಶ್ರೀನಿರಂಜನಾನಂದಪುರಿ ಸ್ವಾಮಿಗಳನ್ನು ಸಮಾಜದ ವತಿಯಿಂದ ತುಲಾಭಾರ ಮಾಡಲಾಯಿತು.

Share this article