ಸಹಕಾರ ಸಂಘಗಳಿಂದ ರೈತರಿಗೆ ನೆಮ್ಮದಿಯ ಬದುಕು: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork | Published : Mar 15, 2024 1:20 AM

ಸಾರಾಂಶ

ಸಹಕಾರ ಸಂಸ್ಥೆಯೊಂದು ಶತಮಾನ ಕಳೆದಿದೆ ಎಂದರೆ, ಈ ಪ್ರದೇಶದ ಪೂರ್ವಜರಿಗಿದ್ದ ಸಹಕಾರಿ ಕಾಳಜಿಗೆ ನಿದರ್ಶನವಾಗಿದೆ.

ಯಲ್ಲಾಪುರ: ಸಹಕಾರಿ ವ್ಯವಸ್ಥೆಗಳು ಸಮರ್ಪಕವಾಗಿರುವ ಯಾವುದೇ ಪ್ರದೇಶದ ರೈತರು ನೆಮ್ಮದಿಯಿಂದ ಮತ್ತು ಸಮಾಧಾನದಿಂದ ಬದುಕು ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಸೌಹಾರ್ದ ಸಹಕಾರಿ ವ್ಯವಸ್ಥೆಯು ಬಲಗೊಳ್ಳುತ್ತಿದ್ದು, ಅದರ ಮೇಲಿನ ಸರ್ಕಾರದ ನಿಯಂತ್ರಣ ಗ್ರಾಹಕರ ನಂಬಿಕೆಯನ್ನು ಹುಸಿಗೊಳಿಸುವಂತಾಗಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಮಾ. ೧೩ರಂದು ತಾಲೂಕಿನ ಹಿತ್ಲಳ್ಳಿಯಲ್ಲಿ ಹಿತ್ಲಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ₹೧.೪೦ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಂಘದ ನೂತನ ಕಟ್ಟಡದಲ್ಲಿ ಸಂಘದ ಕಾರ್ಯಾಲಯ ಹಾಗೂ ಸಂಘದ ಸೂಪರ್ ಮಾರ್ಕೆಟ್‌ನ್ನು ಉದ್ಘಾಟಿಸಿ, ಮಾತನಾಡಿದರು.

ಸಹಕಾರ ಸಂಸ್ಥೆಯೊಂದು ಶತಮಾನ ಕಳೆದಿದೆ ಎಂದರೆ, ಈ ಪ್ರದೇಶದ ಪೂರ್ವಜರಿಗಿದ್ದ ಸಹಕಾರಿ ಕಾಳಜಿಗೆ ನಿದರ್ಶನವಾಗಿದೆ. ಇಂತಹ ಅನೇಕ ಸಂಘಗಳು ತಾಲೂಕಿನಲ್ಲಿದ್ದು, ಅಂದಿನ ಹಿರಿಯರು ಸಂಘ ಸ್ಥಾಪನೆಗಾಗಿ ಪಟ್ಟ ಕಷ್ಟ ನಮ್ಮೆಲ್ಲರಿಗೆ ಸುಖ ನೀಡಿದೆಯಲ್ಲದೇ, ತಾಲೂಕಿನ ಸಹಕಾರಿ ಕ್ರಾಂತಿಗೆ ಕಾರಣವಾಗಿದೆ ಎಂದರು. ಲಿಫ್ಟ್ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಗ್ರಾಮಾಭಿವೃದ್ಧಿಯ ವಿಕಾಸಕ್ಕಾಗಿ ಜಿಲ್ಲೆಯ ಸಹಕಾರಿ ಸಂಘಗಳು ನೀಡಿದ ಕೊಡುಗೆ ಅಮೂಲ್ಯವಾದುದು. ಇಲ್ಲಿ ವ್ಯವಹರಿಸುವ ಗ್ರಾಹಕರಿಗೆ ಆರ್ಥಿಕ ಶಿಸ್ತಿನ ಜತೆ ಆರ್ಥಿಕ ಸಂಸ್ಕಾರವೂ ಅತಿಮುಖ್ಯ ಎಂದ ಅವರು, ಈ ಕುರಿತು ಸಂಘದ ಸಿಬ್ಬಂದಿಗೂ ಅಗತ್ಯ ಅರಿವು ಅವಶ್ಯಕವಿದ್ದು, ಸಂಘಗಳಲ್ಲಿ ಸಾಮರಸ್ಯ ಮತ್ತು ಪಾವಿತ್ರ್ಯತೆ ಅತ್ಯಂತ ಪ್ರಮುಖವಾದುದು ಎಂದರು.

ಯು.ಕೆ. ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇತ್ತೀಚೆಗೆ ಯುವಕ- ಯುವತಿಯರ ಅತಿಯಾದ ನೌಕರಿ ವ್ಯಾಮೋಹದಿಂದಾಗಿ ಹಳ್ಳಿಗಳು ಬರಿದಾಗುತ್ತಿದ್ದು, ಇಲ್ಲಿನ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇಂತಹ ದುಃಸ್ಥಿತಿಯಲ್ಲಿ ನಮ್ಮೆಲ್ಲರ ಎದುರಿಗೆ ಭವಿಷ್ಯವನ್ನು ಎದುರಿಸುವ ಸವಾಲು ಆತಂಕ ಉಂಟುಮಾಡಿದೆ. ಸಹಕಾರಿ ಕ್ಷೇತ್ರವೂ ಸೇರಿದಂತೆ ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ವಿಕೇಂದ್ರೀಕರಣ ಮತ್ತು ಸ್ವಾಯತ್ತತೆ ಅನೇಕ ಸಮಸ್ಯೆಗಳಿಗೆ ಪರಿಹಾರ ತೋರಬಹುದಾಗಿದೆ ಎಂದರು.

ಹಾಸಣಗಿ ಸೇ.ಸ. ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಸಹಕಾರಿ ವ್ಯವಸ್ಥೆಯೊಳಗಿರಬೇಕಿದ್ದ ಖಾಸಗೀತನ ಕೊನೆಗೊಂಡು; ಸರ್ಕಾರದ ಬದಲಾದ ಕಾನೂನು ನಿಯಮಗಳು ಇಂದಿನ ಅನೇಕ ದುರಂತಗಳಿಗೆ ಕಾರಣವಾಗಿದೆ. ಸರ್ಕಾರದ ಹಸ್ತಕ್ಷೇಪ ಇನ್ನಾದರೂ ನಿಲ್ಲದಿದ್ದರೆ, ಸಹಕಾರಿ ಕ್ಷೇತ್ರವೇ ಉಳಿಯುವುದು ಕಷ್ಟವಾಗಿ, ಭವಿಷ್ಯದಲ್ಲಿ ಉತ್ತಮ ಸಹಕಾರಿ ಸಂಘಗಳ ನಿರ್ವಹಣೆಯೂ ಕಷ್ಟಕರವಾದೀತು ಎಂದು ಕಳವಳ ವ್ಯಕ್ತಪಡಿಸಿದರು.

ಶಿರಸಿಯ ಟಿಎಸ್ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಸಂಘಗಳಿಗೆ ಕಟ್ಟಡ ನಿರ್ಮಿಸಲು ಕೇಂದ್ರ ಸರ್ಕಾರವು ನೀಡುತ್ತಿರುವ ನೆರವನ್ನು ನಾವೆಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕು. ಸಹಕಾರ ಸಂಘಗಳು ಗ್ರಾಮೀಣ ಜನರ ಬದುಕಿನ ಶ್ರೀರಕ್ಷೆಯಾಗಿದೆ ಎಂದರೆ ಉತ್ಪ್ರೇಕ್ಷೆಯಾಗದು ಎಂದರು.

ಶಿರಸಿಯ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿ, ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಸೂಕ್ತ ಹೊಂದಾಣಿಕೆ ಮಾಡಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.

ಯಲ್ಲಾಪುರದ ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಉಮ್ಮಚಗಿ ಸೇ.ಸ.ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ರಾಜ್ಯ ಸಹಕಾರಿ ಮಹಾಮಂಡಳಿಯ ನಿರ್ದೇಶಕರೂ, ಕುಮಟಾದ ಸಹಕಾರಿ ಯುನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ, ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಸದಸ್ಯರಾದ ಪ್ರಸನ್ನ ಭಟ್ಟ, ನಿರ್ಮಲಾ ನಾಯ್ಕ, ಸುಶೀಲಾ ಸಿದ್ದಿ, ಸಾವಿತ್ರಿ ನಾಗನೂರು ಮತ್ತಿತರರು ವೇದಿಕೆಯಲ್ಲಿದ್ದರು. ರಾಧಿಕಾ ಮತ್ತು ರಮ್ಯಾ ಹೆಗಡೆಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪಾಧ್ಯಕ್ಷ ಗಜಾನನ ಭಟ್ಟ ಸ್ವಾಗತಿಸಿದರು. ಅಧ್ಯಕ್ಷ ಜಿ.ವಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಭಟ್ಟ ಮತ್ತು ರವೀಂದ್ರ ನಾಯ್ಕ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಾಹಕ ಶ್ರೀಧರ ನಾಯ್ಕ ನಂದಗಾರು ವಂದಿಸಿದರು.

Share this article