ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿ ರೈತ ಹೋರಾಟದ ರೂವಾರಿ ರಾಷ್ಟ್ರೀಯ ರೈತ ಮುಖಂಡರಾದ ಜಗಜೀತ್ ಸಿಂಗ್ ದಲೆವಾಲ ಉಪವಾಸ 17ನೇ ದಿನಕ್ಕೆ ಮುಂದುವರಿದು ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್ ಅಧಿವೇಶ ನಡೆಯುತ್ತಿದ್ದರೂ ಈ ಸಂಬಂಧ ಚರ್ಚಿಸದೆ ನಿದ್ರೆ ಮಾಡುವಂತೆ ಸಂಸದರು ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತಿದ್ದರೂ ನಮ್ಮ ಸಂಸದರು ಸುಮ್ಮನಿದ್ದಾರೆ. ಯಾವುದೇ ವಿಚಾರ ಬಂದರೂ ರಾಜ್ಯದ ಸಂಸದರು ಧ್ವನಿಯೆತ್ತದೆ ಇರುವುದು ಮತ ನೀಡಿದ ಜನರಿಗೆ ಮಾಡುವ ಆಪಮಾನವಾಗಿದೆ ಎಂದು ದೂರಿದರು.ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಾತರಿಯಾದ ಕಾನೂನು ಕೆಳುತ್ತಿದ್ದೇವೆ. ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆ ರೈತರಿಗೆ ಭರವಸೆ ನೀಡಿ ಚಳವಳಿ ಕೈಬಿಡುವಂತೆ ಮನವಿ ಮಾಡಿ ಹುಷಿಗೊಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಗಬೇಕು ಪ್ರತಿ ರೈತನ ಹೊಲದ ಬೆಳೆ ವಿಮೆ ಪರಿಹಾರ ಪದ್ಧತಿ ಜಾರಿಗೆ ಬರಬೇಕು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ, ಬರಡನಪುರ ನಾಗರಾಜ್, ನೀಲಕಂಠಪ್ಪ, ರಾಜೇಶ್ ಪರಶಿವಮೂರ್ತಿ, ಪ್ರಸಾದ ನಾಯಕ್, ಮಂಜುನಾಥ್, ಸುನೀಲ್, ಸೂರಿ, ಕಮಲಮ್ಮ, ನಾಗೇಶ್, ಪ್ರದೀಪ್, ಕೆಂಡಗಣ್ಣಪ್ಪ, ರಾಜು ಮೊದಲಾದವರು ಇದ್ದರು.