ಸೋಂಕಿಗಿಂತ ಭೀತಿಯಿಂದಲೇ ಜೀವ ತೆತ್ತ ಜನ!

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಕೋವಿಡ್ ನಿಯಂತ್ರಣ ಕಾರ್ಯಕ್ಕಿಂತಲೂ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಕೆ.ಎಂ. ಮಂಜುನಾಥ್

ಬಳ್ಳಾರಿ: ಈ ಹಿಂದೆ ಕೊರೋನಾ ಎರಡು ಅಲೆಯಲ್ಲಿ ಮಾಡಿದ ಜೀವದಪಾಯದ ಆಕ್ರಮಣಕ್ಕಿಂತಲೂ ಅದೆಷ್ಟೋ ಜನರು ಸೋಂಕಿನ ಭೀತಿಯಿಂದಲೇ ಜೀವ ಕಳೆದುಕೊಂಡರು!

"ಸೋಂಕಿನ ಬಗ್ಗೆ ಭಯಬೇಡ. ಜಾಗೃತರಾಗಿರಿ " ಎಂದು ಜಿಲ್ಲಾಡಳಿತ ಅದೆಷ್ಟೇ ಜಾಗೃತಿ ಮೂಡಿಸಿದರೂ ಕೊರೋನಾ ಸೋಂಕು ಹರಡಿದರೆ ಸಾವು ಖಚಿತ ಎಂಬ ಆತಂಕ ಸಾಕಷ್ಟು ಜನರಲ್ಲಿತ್ತು. ಪರಿಣಾಮ; ಅನೇಕರು ಆರೋಗ್ಯವಾಗಿದ್ದೂ ಸೋಂಕಿನ ಭೀತಿಯಿಂದ ಹೃದಯಾಘಾತಗೊಂಡು ಸಾವಿನ ಕದ ತಟ್ಟಿದರು. ಮತ್ತೆ ಕೆಲವು ರೋಗಿಗಳು ಸಕಾಲಕ್ಕೆ ವೆಂಟಿಲೇಟರ್, ಆಕ್ಸಿಜನ್ ಸಿಗದೆ ಆರೋಗ್ಯದಲ್ಲಿ ಏರುಪೇರು ಕಂಡುಕೊಂಡು ಕೊನೆಯುಸಿರೆಳೆದರು.

ಇನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು, ತಮ್ಮ ಪಕ್ಕದ ಬೆಡ್‌ನಲ್ಲಿ ಚಿಕಿತ್ಸೆಗೆ ಬಂದಿದ್ದವರು ಸದ್ದಿಲ್ಲದೆ ಜೀವ ಬಿಡುತ್ತಿರುವ ದೃಶ್ಯ ಕಣ್ಣಾರೆ ನೋಡಿಯೇ ಭೀತಿಗೊಂಡಿದ್ದರು. ಆಸ್ಪತ್ರೆಯಲ್ಲಿ ರಾತ್ರಿ ಕಳೆಯುವುದೇ ದೊಡ್ಡ ಸಮಸ್ಯೆಯಾಯಿತು. ಒಂದೆಡೆ ಆರೋಗ್ಯವಾಗಿ ಮನೆಗೆ ಮರಳುತ್ತೇನೆಯೇ ಎಂಬ ಜೀವಭಯ ಮತ್ತೊಂದೆಡೆ ಪ್ರತಿನಿತ್ಯ ಹತ್ತಾರು ಜನರು ಸಾವಿಗೀಡಾಗುತ್ತಿರುವ ಸುದ್ದಿಗಳು ಸೋಂಕಿತರಿಗೆ ಮತ್ತಷ್ಟೂ ಆತಂಕ ಮೂಡಿಸಿತ್ತು.

ಚಿಕಿತ್ಸೆಯೇ ಸವಾಲಾಯಿತು: ಕೋವಿಡ್ ನಿಯಂತ್ರಣ ಕಾರ್ಯಕ್ಕಿಂತಲೂ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಭರ್ತಿಯಾದವು. ನಗರದ ವಿಮ್ಸ್, ಜಿಲ್ಲಾಸ್ಪತ್ರೆ, ಟ್ರಾಮಾಕೇರ್ ಸೆಂಟರ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಬೆಡ್ ಸಿಗದಾಯಿತು. ಹೀಗಾಗಿಯೇ ಖಾಸಗಿ ಹೋಟೆಲ್ ಮಾಲೀಕರ ತುರ್ತು ಸಭೆ ನಡೆಸಿದ ಜಿಲ್ಲಾಡಳಿತ, ಹೋಟೆಲ್‌ಗಳನ್ನು ಆರೈಕೆ ಕೇಂದ್ರಗಳನ್ನಾಗಿ ಬದಲಾಯಿಸಿ. ಅಲ್ಲಿಗೆ ಬೇಕಾದ ಆಕ್ಸಿಜನ್ ಹಾಗೂ ತುರ್ತು ಆ್ಯುಂಬುಲೆನ್ಸ್‌ಗಳನ್ನು ಸಿದ್ಧಪಡಿಸಿಕೊಳ್ಳಿ ಎಂದು ಸೂಚನೆ ನೀಡಿತಲ್ಲದೆ, ಆರೈಕೆ ಕೇಂದ್ರಗಳಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಿತು.

ಬಡವರ ಒದ್ದಾಟ: ಕೊರೋನಾ ಮೊದಲು ಹಾಗೂ ಎರಡನೇ ಅಲೆ ವೇಳೆ ಒಂದೆಡೆ ಜೀವದ ಭಯ ಮತ್ತೊಂದೆಡೆ ಬದುಕು ನಿರ್ವಹಣೆಗೆ ಒದ್ದಾಟವನ್ನು ಬಡ ಹಾಗೂ ಮಧ್ಯಮ ವರ್ಗದವರು ಎದುರಿಸಿದರು. ನಿತ್ಯ ಕೂಲಿಯ ಮೇಲೆ ಬದುಕು ಕಟ್ಟಿಕೊಂಡವರಂತೂ ತುತ್ತು ಅನ್ನಕ್ಕಾಗಿ ಅವರಿವರು ನೀಡುವ ದಾನಗಳನ್ನು ಎದುರು ನೋಡುವಂತಾಯಿತು. ನಿತ್ಯದ ಖರ್ಚಿಗೆ ಹಣ ಹೊಂದಿಸಿಕೊಳ್ಳಲಾಗದ ಒದ್ದಾಟದ ನಡುವೆ ಕೊರೋನಾ ಸೋಂಕು ಅಂಟಿಕೊಂಡರೆ ಹೇಗೆ ಎಂಬ ಚಿಂತೆ ಬಡ ಜನರನ್ನು ಕಾಡಿತ್ತು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಡ್‌ಗಾಗಿ ಪರದಾಟ ಮುಂದುವರಿದಿತ್ತು. ಈ ಬೆಳವಣಿಗೆ ಖಾಸಗಿ ಆಸ್ಪತ್ರೆಗಳಿಗೆ ಭಾರೀ ಡಿಮ್ಯಾಂಡ್ ಬರಲು ಕಾರಣವಾಯಿತು. ನಗರದ ಪ್ರತಿಷ್ಠಿತ ಹೋಟೆಲ್‌ಗಳು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿಸಿ ಸೇವೆ ನೀಡಿದವು. ಆರೈಕೆ ಕೇಂದ್ರಗಳ ಸೇವೆ ದುಬಾರಿ ಎನಿಸಿದರೂ ಜೀವದ ಭೀತಿಯಿಂದ ಸಾಲ ಮಾಡಿಯಾದರೂ ಸೇವೆ ಪಡೆಯುವವರ ಸಂಖ್ಯೆಯಲ್ಲೂ ಏರಿಕೆಯಾಯಿತು.

ಜಿಲ್ಲಾಡಳಿತದ ಸಕಲ ಸಿದ್ಧತೆ: ಕೊರೋನಾ ಸೋಂಕು ರೂಪಾಂತರಿಸಿಕೊಂಡು ಜನಜೀವನಕ್ಕೆ ಹೊಡೆತ ಕೊಡಲು ಸಜ್ಜಾಗುತ್ತಿರುವ ನಡುವೆ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜೆಎನ್. 1 ರೂಪಾಂತರ ಸೋಂಕು ಜಿಲ್ಲೆಗೆ ಇನ್ನು ಲಗ್ಗೆ ಇಟ್ಟಿಲ್ಲವಾದರೂ ಮುಂಜಾಗ್ರತೆಯಾಗಿ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಕಾಯ್ದಿರಿಸಿಕೊಂಡು ಬೇಕಾದ ಚಿಕಿತ್ಸಾ ಸಿದ್ಧತೆಯನ್ನು ಮಾಡಿಕೊಂಡಿದೆ. ಕೊರೋನಾ ಸೋಂಕಿನ ಬಗ್ಗೆ ಒಂದಷ್ಟು ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂಬ ಭೀತಿ, ವಿವಿಧ ನೆಲೆಯ ಜಾಗ್ರತೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.ಜೀವದ ಹಂಗು ತೊರೆದ ವೈದ್ಯಕೀಯ ಸಿಬ್ಬಂದಿ

ಕೊರೋನಾ ಸೋಂಕಿನ ಭೀತಿಯ ನಡುವೆ ವೈದ್ಯಕೀಯ ಸಿಬ್ಬಂದಿ ಮಾಡಿದ ಕಾರ್ಯವನ್ನು ಯಾರೂ ಮರೆಯುವಂತಿಲ್ಲ. ಕೋವಿಡ್ ಬಾಧಿತರನ್ನು ಮಾತನಾಡಿಸಲು ಕುಟುಂಬ ಸದಸ್ಯರೇ ಹಿಂದೇಟು ಹಾಕುತ್ತಿರುವಾಗ ವೈದ್ಯಕೀಯ ಸಿಬ್ಬಂದಿ, ಅದರಲ್ಲೂ ದಾದಿಯರು ಜೀವದ ಹಂಗು ತೊರೆದು ವೈದ್ಯರ ಸೂಚನೆಯಂತೆ ಸೋಂಕಿತರಿಗೆ ಚಿಕಿತ್ಸೆ ನೀಡಿ, ಸಾರ್ಥಕತೆ ಮೆರೆದರು.

ಚಿಕಿತ್ಸೆ ವೇಳೆ ಸೋಂಕು ತಗುಲಿ 11 ಜನ ಸಿಬ್ಬಂದಿ ಸಾವಿಗೀಡಾದರೂ ಸೇವೆಯಿಂದ ಹಿಂದಕ್ಕೆ ಸರಿಯಲಿಲ್ಲ. ಜೀವ ಕಳೆದುಕೊಂಡ ಅನೇಕ ಕುಟುಂಬಗಳು ಅನಾಥವಾದರೂ, ವೈದ್ಯಕೀಯ ಸೇವೆಯಿಂದ ವಿಮುಖರಾಗದೆ ಜಿಲ್ಲೆಯ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಿದರು.

ಜೀವಭಯ: ಕೋವಿಡ್ ನ ಆ ದಿನಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಸೋಂಕು ತಗುಲಿದವರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಕುಟುಂಬ ಸದಸ್ಯರು ಕುಗ್ಗಿ ಹೋಗಿದ್ದರು. ಜೀವಭಯದ ಜತೆಗೆ ಸಾರ್ವಜನಿಕರು ನಮ್ಮನ್ನು ನೋಡುವ ರೀತಿಯಿಂದ ಅರ್ಧ ನೊಂದು ಹೋಗಿದ್ದೆವು ನಿವಾಸಿಗಳಾದ ವಿಜಯ್‌, ಮೋಹನ್ ತಿಳಿಸಿದರು.

Share this article