ಇ-ಕೆವೈಸಿಗೆ ಡಿ.31 ಕಡೆ ದಿನವಲ್ಲ । ಜಿಲ್ಲೆಯಾದ್ಯಂತ ಸುಳ್ಳು ಸುದ್ದಿಗೆ ಕಿವಿಗೊಟ್ಟು ಸರತಿಯಲ್ಲಿ ಗ್ರಾಹಕರು । ಎಲ್‌ಪಿಜಿ ಗ್ರಾಹಕರ ದಿಕ್ಕು ತಪ್ಪಿಸುತ್ತಿರುವ ಸಾಮಾಜಿಕ ಜಾಲತಾಣಗಳು
ಕನ್ನಡಪ್ರಭ ವಾರ್ತೆ ಆಲೂರುಅಡುಗೆ ಅನಿಲದ ಸಿಲಿಂಡರ್ ಹೊಂದಿರುವ ಗ್ರಾಹಕರು ಡಿಸೆಂಬರ್ 31ರ ಒಳಗೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣದಿಂದ ವಂಚಿತರಾಗುತ್ತಾರೆಂಬ ಗಾಳಿ ಸುದ್ದಿಯಿಂದಾಗಿ ಪಟ್ಟಣದ ಭಾರತ್ ಗ್ಯಾಸ್ ಕಚೇರಿಯ ಮುಂಭಾಗ ಮೈಲುದ್ದದ ಕ್ಯೂ ನಿರ್ಮಾಣಗೊಂಡು ಇ-ಕೆವೈಸಿ ಮಾಡಿಸಲು ಜನರ ಜಾತ್ರೆಯೇ ನೆರೆದ ಘಟನೆ ಗುರುವಾರ ನಡೆದಿದೆ.
ಸರ್ಕಾರದಿಂದ ಈ ಕೆವೈಸಿ ಮಾಡಿಸಬೇಕೆಂಬ ಆದೇಶವಿದ್ದು, ಇದಕ್ಕೆ ಯಾವುದೇ ಕಡೆಯ ದಿನಾಂಕವನ್ನು ನಿಗದಿಗೊಳಿಸಲಾಗಿಲ್ಲವಾದರೂ, ಜನರು ನಾ ಮುಂದು, ತಾ ಮುಂದು ಎಂಬಂತೆ ಮುಗಿಬೀಳುತ್ತಿರುವುದು ನೋಡಿದರೆ ಜನ ಮರುಳೋ ಜಾತ್ರೆ ಮರುಳೋ ಎಂಬುದಾಗಿದೆ. ನಮ್ಮ ಜನರು ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಏಕೆ ಈ ರೀತಿ ವರ್ತಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ, ಈ ರೀತಿ ಸುಳ್ಳು ಸುದ್ದಿಗಳು ಹಬ್ಬಿದಾಗ ಸಂಬಂಧಪಟ್ಟ ಇಲಾಖೆಯಲ್ಲಿ ಅಥವಾ ಏಜೆನ್ಸಿಗಳಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ದೊರೆಯುತ್ತದೆ. ಅದನ್ನು ಬಿಟ್ಟು ಸಮೂಹ ಸನ್ನಿಗೊಳಗಾದವರಂತೆ ಸಾರ್ವಜನಿಕರು ತಮ್ಮ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದವರು ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸಲು ತಾಲೂಕು ಆಡಳಿತಕ್ಕೆ ಆದೇಶಿಸಿ, ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಮಾಡಿ ಸಾರ್ವಜನಿಕರು ಸುಳ್ಳುಸುದ್ದಿಗೆ ಬಲಿಯಾಗದಂತೆ ತಡೆಯಬೇಕಿದೆ.ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಹಾರ ನಿರೀಕ್ಷಕ ಮೋಹನ್ ಕುಮಾರ್, ಗ್ರಾಹಕರು ಇ- ಕೆವೈಸಿ ಮಾಡಿಸಬೇಕೆಂಬ ಸರ್ಕಾರದ ಆದೇಶವಿದೆ. ಆದರೆ ಇದಕ್ಕೆ ಯಾವುದೇ ಕಡೆಯ ದಿನಾಂಕ ನಿಗದಿಪಡಿಸಿಲ್ಲ. ಮೊಬೈಲ್ಗಳಲ್ಲಿ ಬರುವ ಸುಳ್ಳುಸುದ್ದಿಗಳಿಂದಾಗಿ ಜನರು ಗ್ಯಾಸ್ ಏಜೆನ್ಸಿಗಳ ಬಳಿ ಈ ಇ-ಕೆವೈಸಿ ಮಾಡಿಸಲು ಮುಗಿಬೀಳುತ್ತಿದ್ದಾರೆ. ಸರ್ಕಾರ ಯಾವುದೇ ರೀತಿಯ ಸಬ್ಸಿಡಿ ನೀಡುತ್ತೇವೆಂದು ಘೋಷಣೆ ಮಾಡಿಲ್ಲವಾದರೂ ಸಹ ಜನರು ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇ- ಕೆವೈಸಿಗೆ ಯಾವುದೇ ಕಡೆಯ ದಿನಾಂಕ ನಿಗದಿಯಾಗಿಲ್ಲ, ನಮ್ಮ ಸಿಬ್ಬಂದಿ ಗ್ರಾಮಗಳಲ್ಲಿ ಸಿಲಿಂಡರ್ ವಿತರಣೆಗೆ ಹೋದ ಸಂದರ್ಭದಲ್ಲಿ ಅಲ್ಲಿಯೇ ಇ-ಕೆವೈಸಿ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಈ ರೀತಿ ಜನ ನಮ್ಮ ಏಜೆನ್ಸಿಯ ಬಳಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ನೂಕುನುಗ್ಗಲು ಉಂಟುಮಾಡುತ್ತಿದ್ದಾರೆ. ಇ-ಕೆವೈಸಿ ಮಾಡಿಸಿದರೆ ಸಬ್ಸಿಡಿ ಹಣ ನೀಡುತ್ತಾರೆಂಬ ತಪ್ಪು ಮಾಹಿತಿಯಿಂದಾಗಿ ಜನ ಈ ರೀತಿ ವರ್ತಿಸುತ್ತಿದ್ದಾರೆ. ನಾವು ಸಹ ಜನರಿಗೆ ಸರಿಯಾದ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತೇವೆ.
-ಮಂಜುನಾಥ್,ವಿಜಯಲಲಿತಾ ಗ್ಯಾಸ್ ಏಜೆನ್ಸಿ ಮಾಲೀಕ