ಕನ್ನಡಪ್ರಭ ವಾರ್ತೆ ಮೈಸೂರು
ಸ್ತನ ಕ್ಯಾನ್ಸರ್ ಬಗ್ಗೆ ಜನರಿಗೆ ಜಾಗೃತಿಯ ಅವಶ್ಯಕತೆ ಇದೆ ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆಯ ಆಂಕೊಲಾಜಿ ಸಲಹೆಗಾರ್ತಿ ಡಾ. ರಮ್ಯಯೆತ್ತಡ್ಕ ಹೇಳಿದರು.ನಗರದ ಎಸ್.ಬಿ.ಆರ್.ಆರ್.ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಶ್, ಫೋರಮ್ ಫಾರ್ ವುಮೆನ್ ಎಂಪವರ್ಮೆಂಟ್, ವೆಲ್ನೆಸ್ ಸೆಂಟರ್ ಮತ್ತು ಹೈಜೀನ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಅಧ್ಯಾಪಕ ಹಾಗೂ ಅಧ್ಯಾಪಕೇತರರಿಗೆ ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಯಾನ್ಸರ್ ದೊಡ್ಡ ಕಾಯಿಲೆಯಲ್ಲ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮಾತ್ರ ಅದು ಸಾವಿಗೆ ಕಾರಣವಾಗುತ್ತದೆ. ಶೇ. 26 ರಿಂದ ಶೇ. 28 ರಷ್ಟು ಜನರು ಸ್ತನ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಮಹಿಳೆಯರು ಮಾತ್ರವಲ್ಲದೇ 100 ರಲ್ಲಿ ಒಬ್ಬ ಪುರುಷನಿಗೂ ಸ್ತನ ಕ್ಯಾನ್ಸರ್ ಬರುತ್ತದೆ. ಸ್ತನ ಕ್ಯಾನ್ಸರ್ನಿಂದ ಮೃತಪಡುವವರ ಸಂಖ್ಯೆ ಮೊದಲನೇ ಸ್ಥಾನದಲ್ಲಿದೆ. ಸ್ತನದ ಕ್ಯಾನ್ಸರ್ ಯಾರಿಗೆ ಬೇಕಾದರೂ ಹಾಗೂ ಎಲ್ಲ ವಯಸ್ಸಿನವರಿಗೂ ಬರಬಹುದು. 35 ವರ್ಷದ ನಂತರ ಮಗುವಿಗೆ ಜನ್ಮ ನೀಡಿದರೆ, ಅವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಎರಡು ಪಟ್ಟು ಇರುತ್ತದೆ. ಮಗುವಿಗೆ ಎದೆಹಾಲು ಉಣಿಸದಿದ್ದರೆ ಸ್ತನ ಕ್ಯಾನ್ಸರ್ ಬರುವುದಕ್ಕೆ ಮತ್ತೊಂದು ಕಾರಣವಾಗಿದೆ. ಅನುವಂಶಿಕವಾಗಿ ಶೇ.5 ರಷ್ಟು ಸ್ತನ ಕ್ಯಾನ್ಸರ್ ಬರುವ ಸಂಭವ ಹೆಚ್ಚಿರುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಮತ್ತು 21 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು 2 ರಿಂದ 3 ತಿಂಗಳಿಗೊಮ್ಮೆ ಸ್ವಯಂಪರೀಕ್ಷೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.ಕ್ಯಾನ್ಸರ್ ರೋಗಿಗಳಿಗೆ ಖಾಸಗಿ ಆರೋಗ್ಯ ವಿಮಾ ಸೌಲಭ್ಯಗಳು ಸೇರಿದಂತೆ, ಸರ್ಕಾರಿ ವಿಮಾ ಸೌಲಭ್ಯಗಳ ಲಭ್ಯವಿದೆ. ಕ್ಯಾನ್ಸರ್ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಬರುವ ಪ್ರಮಾಣವನ್ನು ಆರೋಗ್ಯಕರ ಆಹಾರ, ಧ್ಯಾನ, ಮಿತವಾದ ವ್ಯಾಯಾಮ ಸೇರಿದಂತೆ ಉತ್ತಮ ಅಭ್ಯಾಸಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಮುಂಜಾಗ್ರತ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಮೊದಲ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಿಗುಣಪಡಿಸಬಹುದು. ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ ಎಂದು ಅವರು ತಿಳಿಸಿದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ವಿಜಯಲಕ್ಷ್ಮಿ ಮುರುಳಿಧರ್, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಸಿಇಒ ಹಾಗೂ ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಅಧ್ಯಕ್ಷೆ ಶಶಿಕಲಾ ಸುರೇಶ್, ಕಾರ್ಯದರ್ಶಿ ಭವಾನಿ ಚಂದ್ರ, ಸ್ಮರ್ಶ ಮತ್ತು ಫೋರಮ್ ಫಾರ್ ವುಮೆನ್ ಎಂಪವರ್ ಮೆಂಟ್ ಸಂಯೋಜಕ ರಾಧಿಕಾರಾಣಿ, ವೆಲ್ನೆಸ್ ಸೆಂಟರ್ ಮತ್ತು ಹೈಜೀನ್ ಸಂಯೋಜಕ ಡಾ.ಎಸ್. ಪೂರ್ಣಿಮಾ ಮತ್ತು ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಇದ್ದರು.