ರಸ್ತೆ ಅಭಿವೃದ್ಧಿ ಬಗ್ಗೆ ಪ್ರತಿಭಟನೆ ಮಾಡಿದರೆ ಗ್ರಾಮದವರಿಗೆ ಜೈಲು ಭಾಗ್ಯ

KannadaprabhaNewsNetwork |  
Published : Oct 05, 2024, 01:43 AM IST
ಬಸವರಾಜ ಕ್ಯಾವಟರ | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಕವಲೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ದೀರ್ಘ ವಿಳಂಬ ಖಂಡಿಸಿ ಪ್ರತಿಭಟನೆ ಮಾಡಿದವರಿಗೆ ಜೈಲು ಭಾಗ್ಯ ಕರುಣಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ: ತಾಲೂಕಿನ ಕವಲೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ದೀರ್ಘ ವಿಳಂಬ ಖಂಡಿಸಿ ಪ್ರತಿಭಟನೆ ಮಾಡಿದವರಿಗೆ ಜೈಲು ಭಾಗ್ಯ ಕರುಣಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕವಲೂರು ಗ್ರಾಮದ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದವರು ಮತ್ತು ಊರಿನ ಗ್ರಾಮದವರು ಕವಲೂರು ಬಂದ್ ಪ್ರತಿಭಟನೆಗೆ ಕರೆ ನೀಡಿದ್ದರು. ಅದರಂತೆ ಮಂಗಳವಾರ ಗ್ರಾಮದ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಆನಂತರ ಗ್ರಾಮದ ಬಸ್ ನಿಲ್ದಾಣದ ಮುಂದೆ ಆಗಮಿಸಿ, ಘೋಷಣೆ ಕೂಗಿ ಪ್ರತಿಭಟಿಸಲಾಯಿತು. ಸಂಜೆಯ ವರೆಗೂ ಪ್ರತಿಭಟನಕಾರರು ಧರಣಿ ನಡೆಸಿದರು. ದಶಕದಿಂದಲೂ ಕವಲೂರ ಗ್ರಾಮ ಹಾಗೂ ಸುತ್ತಮುತ್ತಲ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರು ಪ್ರಯಾಣಕ್ಕಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ರಸ್ತೆ ಸರಿ ಇಲ್ಲದ್ದರಿಂದ ಬಸ್ ಸಂಚಾರ ಕೂಡ ಆಗಾಗ ಸ್ಥಗಿತವಾಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ದುರಸ್ತಿಗೆ ಹಲವಾರು ಬಾರಿ ಗ್ರಾಮದವರು ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ. ಅದಕ್ಕಾಗಿ ಗ್ರಾಮದವರು ಪ್ರತಿಭಟನೆ ನಡೆಸಿದ್ದರು. ಇದನ್ನು ತಿಳಿದು ಪೊಲೀಸರು ಹಾಗೂ ತಹಸೀಲ್ದಾರರು ಗ್ರಾಮದ ೧೪ ಜನರ ಮೇಲೆ ಎಫ್‌ಐಆರ್ ದಾಖಲಿಸಿ, ಸಾಮಾನ್ಯ ಜನರಮೇಲೆ ಆಧಿಕಾರದ ದರ್ಪ ತೋರಿದ್ದಾರೆ.

ಈ ಕೂಡಲೆ ಗ್ರಾಮದ ಜನರ ಮೇಲೆ ದಾಖಲು ಮಾಡಿರುವ ಕೇಸ್ ಹಿಂಪಡೆಯಬೇಕು ಮತ್ತು ಗ್ರಾಮದ ಸುತ್ತಮುತ್ತ ಇರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ಅಧಿಕಾರಗಳ ವಿರುದ್ಧ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಹತ್ತಿಕ್ಕುವ ಪ್ರಯತ್ನ: ಜನರು ಎಷ್ಟು ಭಯಭೀತರಾಗಿದ್ದಾರೆಂದರೆ ನಮ್ಮ ಹಳ್ಳಿಯಲ್ಲಿ ಅಭಿವೃದ್ಧಿಯ ವಿಷಯ ಕೇಳಿದರೆ ಅಧಿಕಾರಿಗಳು ತಮ್ಮ ದರ್ಪವನ್ನು ತೋರುತ್ತಿದ್ದಾರೆ. ನಮ್ಮ ಜನರ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವುದು ತಪ್ಪಾ? ಮಹಿಳೆಯರು ಹಾಗೂ ಹಳ್ಳಿಯ ಜನರು ಮುಂದೆ ಬಂದು ತಮ್ಮ ಊರಿನ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದಾರೆ. ಅವರಿಗೆ ಸಿಗುವುದು ಜೈಲು ಶಿಕ್ಷೆ ಭಾಗ್ಯವ? ಈ ಊರಿನ ಮಹಿಳಾ ಮಣಿಗಳಿಗೆ ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದು ಬಸವರಾಜ ಎಸ್. ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ