ಗುಂಡಿಗಳಿಂದ ಕೂಡಿದ ರಸ್ತೆ ದುರಸ್ತಿಗೆ ಜನರ ಆಗ್ರಹ

KannadaprabhaNewsNetwork | Published : Aug 4, 2024 1:17 AM

ಸಾರಾಂಶ

ನಗರದ ಹಾಸನ ವೃತ್ತದಿಂದ ವಿದ್ಯಾನಗರ, ಕಂಚಾಘಟ್ಟ ಮೂಲಕ ಹೊನ್ನವಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಉಂಟಾಗಿವೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಹಾಸನ ವೃತ್ತದಿಂದ ವಿದ್ಯಾನಗರ, ಕಂಚಾಘಟ್ಟ ಮೂಲಕ ಹೊನ್ನವಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಉಂಟಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ, ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ನಗರಸಭೆ ಪೌರಾಯುಕ್ತರು ಗಮನಹರಿಸಿ ರಸ್ತೆ ಸರಿಪಡಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಈ ರಸ್ತೆಯು ಹೊನ್ನವಳ್ಳಿ ಭಾಗದ ಹತ್ತಾರು ಗ್ರಾಮಗಳಿಗೆ ಸೇರಿದಂತೆ ನಗರದ ಕಂಚಾಘಟ್ಟ, ವಿದ್ಯಾನಗರ ಪಟ್ಟಣದ ಬಿ.ಹೆಚ್.ರಸ್ತೆ, ಶಾರದಾನಗರ ರೈಲ್ವೆಸ್ಟೇಷನ್, ಹಾಸನ ಸರ್ಕಲ್, ತಿಪಟೂರು ನಗರಕ್ಕೆ ಹಾಗೂ ಇದೇ ರಸ್ತೆಯಲ್ಲಿರುವ ಮೂರು ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ದಿನನಿತ್ಯ ಆಟೋಗಳು, ಶಾಲಾ ವಾಹನ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನೂರಾರು ದ್ವಿಚಕ್ರ ಹಾಗೂ ಲಘು ಹಾಗೂ ಭಾರಿ ವಾಹನಗಳು ಇದೇ ರಸ್ತೆಯಲ್ಲಿ ಓಡಾಡಬೇಕು. ಆದರೆ ಈ ರಸ್ತೆಯಲ್ಲಿ ದೊಡ್ಡದೊಡ್ಡ ಗುಂಡಿಗಳು ಹೆಚ್ಚಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಮಾಡಿಕೊಂಡು ಹೋಗಬೇಕಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಿದೆ. ಅಲ್ಲದೆ ಈ ರಸ್ತೆಯನ್ನು ಇತ್ತೀಚೆಗೆ ಡಾಂಬರೀಕರಣ ಮಾಡಿದ್ದು, ಕಳಪೆಯಿಂದ ಕೂಡಿದೆ. ಈಗಲಾದರೂ ನಗರಸಭೆ ಅಧಿಕಾರಿಗಳು ಶೀಘ್ರವಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯ ಕಾಮಗಾರಿ ಇತ್ತೀಚೆಗೆ ನಡೆದಿದ್ದು, ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಸಾಕಷ್ಟು ಗುಂಡಿಗಳು ಬಿದ್ದಿವೆ. ಸಂಜೆಯ ಮೇಲೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ನಗರಸಭೆಯವರು ಆದಷ್ಟು ಬೇಗ ಗುಂಡಿಗಳನ್ನು ಮುಚ್ಚುವ ಮೂಲಕ ಅಮಾಯಕರು ಅಪಘಾತಗಳಿಗೆ ಗುರಿಯಾಗುತ್ತಿರುವುದನ್ನು ತಪ್ಪಿಸಬೇಕು.

- ಶಿವರಾಜ್, ನಿ. ಸೈನಿಕರು.

ನಾನು ಹಾಗೂ ಶಾಸಕರು ಇತ್ತೀಚೆಗೆ ಈ ರಸ್ತೆಯನ್ನು ಪರಿಶೀಲಿಸಿದ್ದೇವೆ. ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಿ ರಿಪೇರಿ ಮಾಡಲು ಕ್ರಮ ತೆಗೆದುಕೊಂಡಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲಾಗುವುದು.-ವಿಶ್ವೇಶ್ವರಯ್ಯ ಬದರಗಡೆ, ಪೌರಾಯುಕ್ತರು, ತಿಪಟೂರು.

Share this article