ಮತದಾನ ಮಾಡುವಲ್ಲಿ ಜನ ನಿರ್ಲಕ್ಷ್ಯ ತೋರದಿರಲಿ

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಹರಪನಹಳ್ಳಿ: ಉತ್ತಮ ಸಮಾಜಕ್ಕಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ವೋಟ್ ಹಾಕುವುದು ಮರೆಯಬಾರದು ಎಂದು ಹರಪನಹಳ್ಳಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವೈ.ಎಚ್. ಹೇಳಿದರು.

ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಹಳ್ಳಿಯ ನಾಲಾದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ತಾಲೂಕು ಪಂಚಾಯಿತಿ ಹಾಗೂ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಭಾರತ ಇಡೀ ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ಆದ್ದರಿಂದ ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ ತೋರಬಾರದು. 18 ವರ್ಷ ಮೇಲ್ಪಟ್ಟ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಮೇ 7ನೇ ತಾರೀಖಿನಂದು ಮತದಾನ ಮಾಡಬೇಕು. ಆರೋಗ್ಯ ಹದಗೆಟ್ಟಿದ್ದರೆ ಅಂತಹವರಿಗೆ ಮನೆಯಲ್ಲೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಪ್ಪದೇ ಮತದಾನ ಮಾಡಬೇಕು ಎಂದರು.

ನರೇಗಾ ಕೂಲಿಕಾರರು ಬೆಳಗ್ಗೆ ಆರು ಗಂಟೆಗೆ ಕೂಲಿ ಕೆಲಸ ಮುಗಿಸಕೊಂಡು ಹತ್ತು ಗಂಟೆಗೆ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು ನಂತರ ವೋಟ್ ಮಾಡುವುದು ಮರೆಯಬಾರದು. ಈ ಬಗ್ಗೆ ಎಲ್ಲ ಕೂಲಿಕಾರರಿಗೆ ಮೇಟಿಗಳೇ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರು ಬೆಳಗ್ಗೆ ಬೇಗ ಹೋಗಿ ಕೊಟ್ಟ ಅಳತೆಯಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆಹಾಜರಿ ಪಡೆದು ಮನೆಗೆ ಬಂದ ತಕ್ಷಣ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಿಡಿಒ ಹಾಲಪ್ಪ, ತಾಲೂಕು ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು, ಬಿಎಫ್‌ಟಿ ಭರಮಪ್ಪ, ಚಿಗಟೇರಿ ಗ್ರಾಪಂ ಸಿಬ್ಬಂದಿಗಳಾದ ಮುನಿಯಪ್ಪ, ಸುರೇಶ್, ಬಿಎಫ್‌ಟಿ ಬಸವರಾಜ, ಜಿಕೆಎಂ ಮಾಲತಿ ಸೇರಿದಂತೆ ಇತರರು ಇದ್ದರು.

Share this article