ಪಕ್ಷ ಬಿಟ್ಟು ಹೋಗುವವರನ್ನು ತಡೆಯೋಕೆ ಆಗಲ್ಲ: ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Jan 28, 2024, 01:17 AM IST
ಸತೀಶ ಜಾರಕಿಹೊಳಿ | Kannada Prabha

ಸಾರಾಂಶ

ಪಕ್ಷ ಬಿಟ್ಟು ಯಾರು ಹೋಗ್ತಾರೋ, ಬಿಡುತ್ತಾರೋ ನಮ್ಮ ಕೈಯಲ್ಲಿಲ್ಲ. ಹೋಗುವ ಮನಸ್ಸಿದ್ದರೆ ತಡೆಯೋಕೆ ಆಗಲ್ಲ.

ಕನ್ನಡಪ್ರಭ ವಾರ್ತೆ ಹಾವೇರಿ

ಪಕ್ಷ ಬಿಟ್ಟು ಯಾರು ಹೋಗ್ತಾರೋ, ಬಿಡುತ್ತಾರೋ ನಮ್ಮ ಕೈಯಲ್ಲಿಲ್ಲ. ಹೋಗುವ ಮನಸ್ಸಿದ್ದರೆ ತಡೆಯೋಕೆ ಆಗಲ್ಲ. ಶೆಟ್ಟರ್ ಈಗ ಹೋಗಿದ್ದಾರೆ. ಮುಂದೆ ಯಾರು ಹೋಗುತ್ತಾರೋ ಗೊತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಪಕ್ಷದಲ್ಲಿರುತ್ತಾರೆ ಎನ್ನುವ ಆಶಾಭಾವನೆ ಅಷ್ಟೇ ನಮ್ಮದು. ಕಾಂಗ್ರೆಸ್ಸಿನಲ್ಲಿ ಉಸಿರುಗಟ್ಟೋ ವಾತಾವರಣವಿದೆ ಎಂದಾದರೆ ಶೆಟ್ಟರ್ ಅವರು ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಯಾಕೆ ಬಂದರು. ಬರುವಾಗ ಏನಾಗಿತ್ತಂತೆ ಅಲ್ಲಿ? ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ನಿಲ್ಲುತ್ತಾರೆಂದು ಗೊತ್ತಿಲ್ಲ. ಬೆಳಗಾವಿಯಲ್ಲಿ ಬಿಜೆಪಿಯವರು ಯಾರಾದರೂ ಸ್ಪರ್ಧೆ ಮಾಡಲೇಬೇಕು ಅಲ್ಲವೇ? ನಿಲ್ಲುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು. ಅದು ನಮಗೆ ಸಂಬಂಧಿಸಿದ ವಿಷಯ ಅಲ್ಲ ಎಂದರು.

ಲಿಂಗಾಯತ ಮತಗಳು ಇಬ್ಬಾಗವಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾವ ಕಡೆ ಆಗ್ತಾರೆಂದು ಚುನಾವಣೆ ಬಂದಾಗ ನೋಡೋಣ. ನಮ್ಮದೇ ಪಕ್ಷವಿದೆ, ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ನಮ್ಮ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ. ಅವರಿಂದ ಅಧಿಕಾರಕ್ಕೆ ಬಂತು, ಇವರಿಂದ ಬಂತೆಂದು ಹೇಳಲಿಕ್ಕಾಗದು. ಪಕ್ಷದಿಂದ ಗೆದ್ದಿದ್ದೇವೆ ಅಷ್ಟೇ ಎಂದರು.

ಶೆಟ್ಟರ್ ಬಿಜೆಪಿ ಅಭ್ಯರ್ಥಿ ಆದರೆ ಬೆಳಗಾವಿ ಬಿಜೆಪಿಗೆ ದೊಡ್ಡ ಲಾಭ ಆಗಲಿದೆ ಎಂಬ ಚರ್ಚೆಗೆ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಆಗಲ್ಲ. ಪಕ್ಷದ ಲೆಕ್ಕ ಹಿಡಿಯಬೇಕು. ಸತೀಶ್ ಜಾರಕಿಹೊಳಿ, ಶೆಟ್ಟರ್ ಒಬ್ಬರನ್ನೇ ಲೆಕ್ಕ ಹಾಕಲಾಗದು ಎಂದರು.

ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ ಪವರ್ ಸೆಂಟರ್ ಆಗುತ್ತಿದ್ದಾರೆಂಬ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೇನು ಪವರ್ ಸೆಂಟರ್ ಅಲ್ಲ. ಪಕ್ಷದಲ್ಲಿದ್ದೀವಿಯಷ್ಟೇ, ಹೊರಗಡೆ ಏನು ಹೋಗಿಲ್ಲ. ಇದ್ದಲ್ಲೇ ಮಾಡುತ್ತಿದ್ದೇವೆ. ಸಮಾನ ಮನಸ್ಕರು ಕೂಡಿದ್ದೆವು. ಹೊರತಾಗಿ ಪವರ್ ಸೆಂಟರ್ ಏನು ಅಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ವಿಚಾರ ಸದ್ಯಕ್ಕಿಲ್ಲ:

ಡಿಸಿಎಂ ವಿಚಾರ ಈಗ ಸದ್ಯಕ್ಕಿಲ್ಲ. ಚುನಾವಣೆ ಮೇಲೆ ಫೋಕಸ್ ಮಾಡುತ್ತಿದ್ದೇವೆ. ಸದ್ಯಕ್ಕಂತೂ ಅದರ ಅವಶ್ಯಕತೆ ಇಲ್ಲ. ಚುನಾವಣೆ ಬಳಿಕ ನೋಡೋಣ. ಮತ್ತೊಂದು ಬಾರಿ ಕೇಳುತ್ತೇವೆ. ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಸಿಎಂ ಕೂಡಾ ಆಗಬೇಕು ಎಂಬ ಆಸೆ ಇದೆಯಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ