ಸಂವಿಧಾನದ ಉಳಿವಿಗಾಗಿ ಜನಾಂದೋಲನ ಅಗತ್ಯ: ರಾಕೇಶ ಟಿಕಾಯತ್

KannadaprabhaNewsNetwork | Published : May 26, 2024 1:30 AM

ಸಾರಾಂಶ

ದೇಶಾದ್ಯಂತ ಸಂವಿಧಾನದ ಉಳುವಿಗಾಗಿ ಹೋರಾಟ ನಡೆದಿದೆ ಎಂದರೆ ಸಂವಿಧಾನ ಅಪಾಯದಲ್ಲಿದೆ ಎಂದೇ ಅರ್ಥ.

- ಕೊಪ್ಪಳದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನ ರೈತ ಹೋರಾಟಗಾರ

- ದೀನ, ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸುತ್ತಿರುವ ಸರ್ಕಾರ

- ಕಾರ್ಪೋರೇಟ್ ವಲಯಕ್ಕೆ ದೇಶ ಒಪ್ಪಿಸುತ್ತಿರುವ ಕೇಂದ್ರ ಸರ್ಕಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ದೇಶಾದ್ಯಂತ ಸಂವಿಧಾನದ ಉಳುವಿಗಾಗಿ ಹೋರಾಟ ನಡೆದಿದೆ ಎಂದರೆ ಸಂವಿಧಾನ ಅಪಾಯದಲ್ಲಿದೆ ಎಂದೇ ಅರ್ಥ. ಹೀಗಾಗಿ, ಸಂವಿಧಾನದ ಉಳುವಿಗಾಗಿ ಬಹುದೊಡ್ಡ ಜನಾಂದೋಲನದ ಅಗತ್ಯವಿದ್ದು, ಅದಾಗುತ್ತಿದೆ ಎನ್ನುವ ವಿಶ್ವಾಸ ಮೂಡುತ್ತದೆ ಎಂದು ರೈತ ಹೋರಾಟಗಾರ ರಾಕೇಶ ಟಿಕಾಯತ್ ಹೇಳಿದರು.

ನಗರದ ಶಿವಶಾಂತ ಮಂಗಲಭವನದಲ್ಲಿ ಲಡಾಯಿ ಪ್ರಕಾಶನ ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಯೋಜನೆ ಮಾಡಿರುವ ಎರಡು ದಿನಗಳ 10ನೇ ಮೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, ದೇಶವನ್ನು ಕಾರ್ಪೋರೇಟ್ ಕೈಗೆ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವ ಕೆಲಸವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಮಾಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂಥ ಶಕ್ತಿಗಳ ವಿರುದ್ಧು ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ. ಈ ದಿಸೆಯಲ್ಲಿ ದೇಶದ ಜನರು ಮುಂದಾಗುತ್ತಿದ್ದಾರೆ ಎನ್ನುವ ಆಶಾ ಭಾವನೆ ಮೂಡಿದೆ.

ದೇಶದಲ್ಲಿ ಕಠಿಣ ಸನ್ನಿವೇಶ ಎದುರಾಗುವ ಸ್ಥಿತಿ ಬಂದೊದಗಿದೆ. ಒಂದು ದೇಶ, ಒಂದು ಚುನಾವಣೆ ಕಲ್ಪನೆಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಬಹುತ್ವದ ಆಶಯಕ್ಕೆ, ಒಕ್ಕೂಟ ವ್ಯವಸ್ಥೆಗೆ ರಾಜ್ಯಗಳ ಸ್ವಾಯತ್ತತೆ, ಅಸ್ಮಿತೆಗೆ ಧಕ್ಕೆ ತರುವ ಯತ್ನಗಳು ನಡೆದಿವೆ. ಇದೆಲ್ಲದರ ಎಚ್ಚರಿಕೆಯ ಗಂಟೆ ಸಾರ್ವಜನಿಕವಾಗಿ ರೂಪಗೊಂಡ, ಚುನಾವಣೆ ಫಲಿತಾಂಶದ ಬಳಿಕ ಬಹುದೊಡ್ಡ ಆಂದೋಲನ ಅಥವಾ ಕ್ರಾಂತಿಯಾಗುವ ವಿಶ್ವಾಸವಿದೆ ಎಂದರು.

ರೈತರ ಕರಾಳ ಮಸೂದೆಯನ್ನು ಹಿಂದೆ ಪಡೆಯುವಂತೆ ದೆಹಲಿಯಲ್ಲಿ ನಡೆಸಿದ 13 ತಿಂಗಳ ಹೋರಾಟದ ವೇಳೆಯಲ್ಲಿ ಯಾವುದೇ, ಪಕ್ಷ, ಪಂಗಡ, ಜಾತಿ, ಧರ್ಮ ಇಲ್ಲದೆಯೇ ಕೇವಲ ಕೃಷಿಕರ ಹೆಸರಿನಲ್ಲಿ ಒಂದಾಗಿದ್ದು ದೊಡ್ಡ ಕ್ರಾಂತಿಯಾಯಿತು. ಸರ್ಕಾರಕ್ಕಿಂತಲೂ ಜನಶಕ್ತಿ, ರೈತ ಶಕ್ತಿ ದೊಡ್ಡದು ಎನ್ನುವುದನ್ನು ಸಾಬೀತು ಮಾಡಲಾಯಿತು. ಕೇವಲ ಕೃಷಿಕರು ಮಾತ್ರ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಸಂಘಟಿತರಾಗಿ ಹೋರಾಡಿದರು ಎಂದರು.

ದೇಶದ ಜನರನ್ನು ಕಳೆದ ಸುಮಾರು 25 ವರ್ಷಗಳಿಂದ ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗಿವೆ. ಅಂಬೇಡ್ಕರ್ ಅವರ ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ‌. ದೇಶದ ಇತಿಹಾಸವನ್ನು ತಿರುಚಿ, ಹೊಸ ಇತಿಹಾಸ ಸೃಷ್ಟಿಸುವ ಯತ್ನ ನಡೆದಿದ್ದು, ಇದನ್ನು ತಡೆಯಬೇಕಾಗಿದೆ ಎಂದರು.

ತೆಲಂಗಾಣದ ಕವಿ, ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡಿ, ದೇಶದಲ್ಲಿ ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸಲಾಗುತ್ತದೆ. ಭಾವನಾತ್ಮಕ ವಿಷಯಗಳನ್ನೇ ಪ್ರಧಾನ ವಿಷಯಗಳನ್ನಾಗಿ ಮಾಡಿ, ಆಳುವ ಯತ್ನ ನಡೆಯುತ್ತಿದೆ. ಇದು ಸರ್ವಾಧಿಕಾರ ಮನೋಭಾವನೆಯ ಆಡಳಿತವಾಗಿದ್ದು, ಇಂಥ ಸರ್ವಾಧಿಕಾರ ಬೆಳೆಯಲು ಬಿಡಬಾರದು ಎಂದರು.

ಧರ್ಮ ಅವರವರ ಹಕ್ಕು ಮತ್ತು ಆಶಯವಾಗಿದೆ. ಅದರ ಮೇಲೆ ಸವಾರಿ ಮಾಡುವವರಿಗೆ ಅಧಿಕಾರದಲ್ಲಿ ಉಳಿಸಬಾರದು. ನಮ್ಮ ಧರ್ಮ ನಮಗೆ. ನಮ್ಮೂರಲ್ಲಿಯೂ ಗಾಳೆಮ್ಮ, ದುರಗಮ್ಮ ಸೇರಿದಂತೆ ಹಲವಾರು ದೇವರನ್ನು ಪೂಜಿಸುತ್ತಾರೆ. ಇಂಥವರನ್ನೇ ಪೂಜಿಸಬೇಕು, ಇಂಥವರನ್ನು ಆರಾಧಿಸಬೇಕು ಎಂದು ಹೇರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬಂದು, ರಾಮನ ಗುಡಿ ಕಟ್ಟಿದ್ದಾಯಿತು. ಈಗ ಜ್ಞಾನವ್ಯಾಪಿ ಮಸೀದಿ ಬಗ್ಗೆ ಪ್ರಸ್ತಾಪ, ಇದಾದ ನಂತರ ಮತ್ತೊಂದು ವಿಷಯ ಎತ್ತಿಕೊಂಡು ಅಧಿಕಾರ ನಡೆಸುವ ಯತ್ನ ನಡೆಯುತ್ತಿದೆ ಎಂದರು.

ರಾಜ್ಯ, ದೇಶ ಸೇರಿದಂತೆ ಜನವಿರೋಧಿ ನೀತಿಗಳಿಗೂ ಕಾಲ ಮಿತಿ ಇರುತ್ತದೆ. ಅದನ್ನು ಮೀರಿದರೇ ಜನಾಕ್ರೋಶಕ್ಕೆ ಯಾರು ಸಹ ತಡೆಯುವುದಿಲ್ಲ ಎಂದರು.

ಕೊಂಕಣಿ ಕವಿ, ಹೋರಾಟಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪಣಜಿಯ ದಾಮೋದರ ಮೌಜೋ ಮಾತನಾಡಿ, ದೇಶದಲ್ಲಿ ಸಂವಿಧಾನದ ಆಶಯಕ್ಕೆ ಧಕ್ಕೆ ಬಂದಿದೆ. ಅಷ್ಟೇ ಅಲ್ಲ, ಸಾಹಿತಿಗಳು, ಪತ್ರಕರ್ತರು ಭಯದಲ್ಲಿರುವಂತೆ ಆಗಿದೆ. ಈಗಾಗಲೇ ಇಂಥ ಶಕ್ತಿಗಳ ಹುಟ್ಟಡಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ರಾಜ್ಯದ ಎಂ.ಎಂ. ಕಲಬುರಗಿ, ಗೌರಿ ಲಂಕೇಶ ಹತ್ಯೆ ಸಾಕ್ಷಿಯಾಗಿವೆ ಎಂದರು.

ಮಾನವ ಪ್ರಜ್ಞೆ, ಮಾನವ ಹಕ್ಕುಗಳಿಗೆ ನೇರವಾಗಿ ಧಕ್ಕೆಯಾಗಿದೆ. ಸೌಹಾರ್ದ, ತ್ಯಾಗ, ಕಲೆ, ಸಂಸ್ಕೃತಿ ಹಾಗೂ ನೈತಿಕತೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಬೇಕು. ಬರಹಗಾರರು, ಕವಿಗಳು ಕಲಿಗಳಾಗಿಯೂ ಕೂಡ ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಡುವ ಅಗತ್ಯವಿದೆ ಎಂದರು.

Share this article