ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ಆಸ್ತಿ ತೆರಿಗೆದಾರರಿಗೆ ಶೇ. 5ರಷ್ಷು ರಿಯಾಯಿತಿಯನ್ನು ಕಲ್ಪಿಸಲಾಗುತ್ತಿದೆ. ಆ ರಿಯಾಯಿತಿಯನ್ನು ಮುಂದುವರೆಸುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.ಆದರೆ ಈ ಸಾಲಿನಲ್ಲಿ ಲೋಕಸಭಾ ಚುನಾವಣೆ ಏ. 26ರಂದು ಘೋಷಣೆಯಾದ ಕಾರಣ ನಗರ ಪಾಲಿಕೆ ಅಧಿಕಾರಿಗಳು ತೆರಿಗೆ ಸಂಗ್ರಹಿಸದೆ ಚುನಾವಣಾ ಕಾರ್ಯದಲ್ಲಿ ತೊಡಗುವಂತಾಯಿತು. ಇದರಿಂದ ತೆರಿಗೆ ಪಾವತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಚುನಾವಣೆ ಮುಗಿದ ನಂತರ ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಒಂದು ತಿಂಗಳ ತೆರಿಗೆ ವಿನಾಯಿತಿ ಮುಂದುವರಿಸಬೇಕಿತ್ತು. ಆದರೆ ಆ ಕೆಲಸ ಮಾಡದೆ ಎಂದಿನಂತೆ ತೆರಿಗೆ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ನಗರ ಪಾಲಿಕೆ ಆಯುಕ್ತರಾದ ತಾವು ಕೂಡಲೇ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ. 5ರ ವಿನಾಯಿತಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಬೇಕು ಎಂದು ಅವರು ಕೋರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಸ್ತಿ ತೆರಿಗೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಅದನ್ನು ಅನುಸರಿಸಿ ಆಸ್ತಿ ತೆರಿಗೆ ಸಂಗ್ರಹಿಸುತ್ತಿರುವುದು ಕೂಡ ಕಾನೂನು ಬಾಹಿರ. 2002 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಸ್ವಯಂ ಮೌಲ್ಯವರ್ಧಿತ ತೆರಿಗೆ ಯೋಜನೆಯನ್ನು ಜಾರಿಗೆ ತಂದರು. ಆ ಪ್ರಕಾರ ಆಸ್ತಿ ಮೌಲ್ಯದ ಶೇ. 0.003 ಅಂದರೆ ಉದಾಹರಣೆಗೆ 1 ಲಕ್ಷ ರೂ. ಮೌಲ್ಯದ ಆಸ್ತಿಗೆ 300 ರೂ. ತೆರಿಗೆ ವಿಧಿಸಬೇಕು. ಒಂದು ವೇಳೆ ಆ ಅಸ್ತಿಯಲ್ಲಿ ಮಾಲೀಕರೆ ವಾಸಿಸುತ್ತಿದ್ದರೆ 150 ರೂ. ತೆರಿಗೆ ವಿಧಿಸಬೇಕು ಇದು ನಿಯಮ. ಆದರೆ ಈ ಯಾವುದೇ ನಿಯಮ ಪಾಲಿಸದೆ 2005-06ರಲ್ಲಿ ಶೇ. 3ರಷ್ಟಿದ್ದ ತೆರಿಗೆಯನ್ನು ಶೇ. 6ರಷ್ಟು ಏರಿಸಿದ್ದ ಕೌನ್ಸಿಲ್ ನಿರ್ಣಯವನ್ನು ಸರ್ಕಾರ ರದ್ದುಗೊಳಿಸಿತ್ತು.
ಇತ್ತ ಇಂದಿಗೂ ಪಾಲಿಕೆ ಮೂರು ವರ್ಷಗಳಿಗೊಮ್ಮೆ ಶೇ. 15ರಷ್ಷು ತೆರಿಗೆ ಹೆಚ್ಚಳ ಮಾಡುತ್ತಿದೆ. ಅತ್ತ ಸರ್ಕಾರವು ಉಪನೋಂದಣಾಧಿಕಾರಿ ವ್ಯಾಪ್ತಿ ಮೂಲಕ ಎರಡ್ಮೂರು ವರ್ಷಗಳಿಗೊಮ್ಮೆ ಆಸ್ತಿ ಮೌಲ್ಯ ಹೆಚ್ಚಳ ಮಾಡಿದಾಗಲೂ ಆಸ್ತಿ ತೆರಿಗೆ ಹೆಚ್ಚಿಸಲಾಗುತ್ತಿದೆ. ಈ ರೀತಿ ಎರಡು ಕಡೆಯಿಂದಲೂ ತೆರಿಗೆ ಹೊರೆ ಹೊರಿಸುವುದು ನಿಯಮ ಬಾಹಿರ. ಹಳೇ ತೆರಿಗೆದಾರರಿಗೆ ಆಸ್ತಿ ನೋಂದಣಿ ಆಗುವಾಗ ನಿಗದಿಪಡಿಸುವ ಮೌಲ್ಯದ ಅರ್ಧ ಭಾಗಕ್ಕೆ ಅಂದರೆ ಶೇ. 50ಕ್ಕೆ ಮಾತ್ರ ತೆರಿಗೆಯನ್ನು ನಿಗದಿ ಪಡಿಸಬೇಕು. ಹೊಸಬರಿಗೆ ಪರಿಷ್ಕೃತ ತೆರಿಗೆಯನ್ನು ವೈಜ್ಞಾನಿಕವಾಗಿ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.ಸರ್ಕಾರದ ಉನ್ನತ ಅಧಿಕಾರಿಗಳು ಕೆಳಗಿನ ಅಧಿಕಾರಿಗಳಿಗೆ ಕಳುಹಿಸುವ ಸುತ್ತೋಲೆಯೆ ಅಧಿಕೃತ ಅದೇಶವಲ್ಲ. ವಿಧಾನ ಮಂಡಲದಲ್ಲಿ ಅನುಮೋದನೆ ಆಗಬೇಕು. ಅದು ರಾಜ್ಯ ಪತ್ರದಲ್ಲಿ ಪ್ರಕಟವಾಗಬೇಕು. ಆ ನಂತರ ಅದು ಆದೇಶವಾಗಬೇಕು. ಆದ್ದರಿಂದ ನಿಯಮ ಬಾಹಿರವಾಗಿ ವಿಧಿಸುವ ಅವೈಜ್ಞಾನಿಕ ತೆರಿಗೆ ಪದ್ಧತಿ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೆರಿಗೆ ಹೊರೆಯಿಂದ ಬಡವರು ಮತ್ತು ಮಧ್ಯಮ ವರ್ಗದವರು ಮನೆ ಮಾರಿ ತೆರಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಅವೈಜ್ಞಾನಿಕ ತೆರಿಗೆ ವಿಧಿಸುವ ಪದ್ಧತಿ ಕೈಬಿಡಬೇಕು ಎಂದು ಅವರು ಕೋರಿದರು.
ತೆರಿಗೆ ನೀಡುತ್ತಿರುವ ನಾಗರೀಕರಿಗೆ ಹೆಚ್ಚಿನ ಹೊರೆ ಹೊರೆಸುವುದು ಸರಿಯಲ್ಲ. ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಹಳೇ ಬಡಾವಣೆಗಳು ಮತ್ತು ಅನಧಿಕೃತ ಬಡಾವಣೆಗಳಿವೆ. ಇವುಗಳಿಂದ ನಿಯಮಿತವಾಗಿ ತೆರಿಗೆ ವಸೂಲಿ ಮಾಡಬೇಕು. ಆ ಮೂಲಕ ನಗರ ಪಾಲಿಕೆಯ ಸಮರ್ಪಕ ನಿರ್ವಹಣೆಗೆ ಬೇಕಾದ ಸಂಪನ್ಮೂಲ ಕ್ರೂಢಿಕರಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದರು.