ಕನ್ನಡಪ್ರಭ ವಾರ್ತೆ ರಾಯಚೂರು
ಇದೇ ಜ.6ಮತ್ತು ಜ.7ರಂದು ನಗರದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು ನಡೆಸುತ್ತಿರುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಗ್ರೂಪ್ ಸಿ 15 ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಾಗೂ ಯಾವುದೇ ಲೋಪದೋಷಗಳಾಗದಂತೆ ನಿಯಮಾನುಸಾರವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಅಧಿಕಾರಿಗಳಿಗೆ ಸೂಚಿಸಿದರು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಗ್ರೂಪ್ ಸಿ 15 ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಳ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳಿಗೆ ಮೇಲ್ವಿಚಾರಕರನ್ನು ಮತ್ತು ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ ಎಂದರು.ಪರೀಕ್ಷೆಗಳನ್ನು ನಿಯಮಾನುಸಾರವಾಗಿ ಯಾವುದೆ ಅಕ್ರಮಗಳಾಗದಂತೆ ನಡೆಸಬೇಕು ಮತ್ತು ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರದ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಭದ್ರತೆ ಒದಗಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಪರೀಕ್ಷಾ ಕೇಂದ್ರದ ಒಳಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ತಿಳಿಸಿದರು.ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಂಡ ಮೇಲ್ವಿಚಾರಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು ಹಾಗೂ ವೀಕ್ಷಕರು ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಾಗೂ ನಿಯಮಾನುಸಾರವಾಗಿ ನಡೆಸುವಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ, ಡಯಟ್‌ನ ಹಿರಿಯ ಉಪನ್ಯಾಸಕರಾದ ಮಲ್ಲಿಕಾರ್ಜುನ, ಶಿವಮ್ಮ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳದ ಅಧಿಕಾರಿಗಳು, ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.