ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅನಿವಾಸಿ ಕನ್ನಡಿಗರ ಅವಶ್ಯಕತೆಗಳು-ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕವಾದ ಒಂದು ಸಚಿವಾಲಯ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಣಾಳಿಕೆ ಸಲ್ಲಿಸಲಾಗಿದ್ದು, ಈ ಕುರಿತು ನೀತಿ-ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ತುರ್ತು ಸಮಯಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಯೊಡನೆ ಚರ್ಚಿಸಿ ಸಮಸ್ಯೆ ನಿವಾರಿಸಿಕೊಳ್ಳಬಹುದು. ಅಂದಾಜಿನ ಪ್ರಕಾರ ರಾಜ್ಯದಲ್ಲಿ 14 ಲಕ್ಷ ಅನಿವಾಸಿ ಕನ್ನಡಿಗರಿದ್ದು, ಪ್ರತ್ಯೇಕ ಸಚಿವಾಲಯ ಇದ್ದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಇನ್ನೂ ಪರಿಣಾಮಕಾರಿಯಾಗಿ ಸ್ಪಂದಿಸಬಹುದು ಎಂದರು.
ಅನಿವಾಸಿ ಭಾರತೀಯ ಸಮಿತಿ 2008ರಲ್ಲಿ ಸ್ಥಾಪಿಸಲಾಗಿದೆ. ವಿಶ್ವದೆಲ್ಲೆಡೆ ನೆಲೆಸಿರುವ ಅನಿವಾಸಿ ಕನ್ನಡಿಗರ ಆಕಾಂಕ್ಷೆ, ಅವಶ್ಯಕತೆ ಮತ್ತು ನಿರೀಕ್ಷೆ ಗಮನದಲ್ಲಿಟ್ಟುಕೊಂಡು 2016-17ನೇ ಸಾಲಿನಲ್ಲಿ ಅನಿವಾಸಿ ಭಾರತೀಯ ನೀತಿ ಹೊರತರಲಾಗಿದೆ. ಅನಿವಾಸಿಗರು ಹಲವಾರು ಸಮಸ್ಯೆ ಅನುಭವಿಸುತ್ತಿದ್ದು, ವಿಶೇಷವಾಗಿ ದುಡಿಯುವ ವರ್ಗ ಹೆಚ್ಚಿನ ತೊಂದರೆ ಎದುರಿಸುತ್ತಾರೆ. ಗಲ್ಫ್ ದೇಶಗಳಿಗೆ ತೆರಳಿದ ಅನಿವಾಸಿ ಕನ್ನಡಿಗರಿಂದ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಹೊತ್ತ ಕರೆಗಳು ಬರುತ್ತಿರುತ್ತವೆ. ನಕಲಿ ಏಜೆನ್ಸಿ ಮೂಲಕ ತೆರಳಿದ ದುಡಿಯುವ ವರ್ಗ ಅಲ್ಲಿ ತೊಂದರೆಗಳೊಳಗಾಗಿ, ಯಾವುದೋ ಕೆಲಸ ಮಾಡುವುದು ಅನಿವಾರ್ಯವಾಗಿ, ಅವರ ವೀಸಾ ಮತ್ತು ಪಾಸ್‍ಪೋರ್ಟ್‍ಗಳನ್ನೂ ಉದ್ಯೋಗದಾತರು ಕಿತ್ತುಕೊಂಡು ಪರಿತಪಿಸುತ್ತಿದ್ದಾರೆ ಎಂದರು.ಶಿವಮೊಗ್ಗ, ಎಚ್‍ಡಿ ಕೋಟೆ ಮತ್ತು ಹುಣಸೂರಿನ ಹಕ್ಕಿಪಿಕ್ಕಿ ಜನಾಂಗದವರು ವಿಶ್ವದೆಲ್ಲೆಡೆ ಸಂಚರಿಸುತ್ತಾರೆ. ಅವರು ಕೆಲಸಕ್ಕೆ ತೆರಳಿದ ದೇಶದಲ್ಲಿ ಹಲವು ಕಷ್ಟ ಅನುಭವಿಸುತ್ತಾರೆ. ಇತ್ತೀಚೆಗೆ 40ಕ್ಕೂ ಹೆಚ್ಚು ಜನರು ಸೂಡಾನ್‍ನಲ್ಲಿ ಸಿಲುಕಿದ್ದರು. ಭದ್ರಾವತಿ, ತೀರ್ಥಹಳ್ಳಿಯಿಂದಲೂ ಹೆಚ್ಚಿನ ಜನರು ದುಡಿಯುವ ಉದ್ದೇಶಗಳಿಗೆ ಕಾಂಬೋಡಿಯಾ, ವಿಯೆಟ್ನಾಂ ಇತರೆ ಬೇರೆ ದೇಶಗಳಿಗೆ ತೆರಳಿ ಸವಾಲು ಎದುರಿಸುತ್ತಿದ್ದಾರೆ. ವಿದೇಶದಲ್ಲಿ ಮರಣ ಹೊಂದಿದವರ ಶವ ಇಲ್ಲಿಗೆ ತರಲು ಕರೆ ಮಾಡುತ್ತಾರೆ. ಕೋವಿಡ್, ಇತರೆ ಸಂಕಷ್ಟದ ಸಮಯದಲ್ಲಿ ಅನಿವಾಸಿ ಕನ್ನಡಿಗರಿಗೆ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.ವಿದೇಶದಿಂದ ಹಿಂದುರಿಗದವರಿಗೆ ಇಲ್ಲಿ ಬಂದ ಮೇಲೆ ಅನೇಕ ರೀತಿ ಸಮಸ್ಯೆ ಕೂಡ ಎದುರಾಗಿದೆ. ವಿದೇಶಕ್ಕೆ ತೆರಳುವವರು ಸಮಿತಿಯ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡರೆ, ಅವರಿಗೆ ಸಹಾಯ ಮಾಡುವುದು ಸುಲಭವಾಗುತ್ತದೆ. ಆದ್ದರಿಂದ ಹೊರ ದೇಶಗಳಿಗೆ ತೆರಳುವ ಮುನ್ನ ನೋಂದಣಿ ಮಾಡಿಸಿಕೊಳ್ಳಬೇಕು. ಅನಿವಾಸಿಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಬರಲು ಕಷ್ಟವಾದಲ್ಲಿ ತಾಲೂಕುಗಳಲ್ಲಿ ತಹಸೀಲ್ದಾರ್, ಎಸಿ ಕಚೇರಿ, ಜಿಲ್ಲಾಡಳಿತಕ್ಕೆ ಸಹ ದೂರು ನೀಡಬಹುದು ಎಂದು ತಿಳಿಸಿದರು.
ಹಕ್ಕಿಪಿಕ್ಕಿ ಸಮುದಾಯದವರು, ರಾಜ್ಯದಲ್ಲಿ ತಾವು ವಿವಿಧೆಡೆ ಓಡಾಡಲು ಅಡ್ಡಿಯಾಗುತ್ತಿದೆ. ಆದ್ದರಿಂದ ಐಡಿ ಕಾರ್ಡ್ ನೀಡುವಂತೆ, ತಾವು ವಾಸಿಸುತ್ತಿರುವ ಮನೆಗಳು ಮತ್ತು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ನೀಡುವಂತೆ ಹಾಗೂ ಆದಿವಾಸಿ ತೈಲ ಕಂಪೆನಿ ತೆರೆಯಲು ಸ್ಥಳ ಮತ್ತು ಲೈಸೆನ್ಸ್ ನೀಡುವಂತೆ ಉಪಾಧ್ಯಕ್ಷರಿಗೆ ಮನವಿ ಮಾಡಿದರು.ಹೊರದೇಶದಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮ ಊರಿಗೆ ಭೇಟಿ ನೀಡಿದಾಗ ವಿಶೇಷ ಸೌಲಭ್ಯ ಪಡೆಯಲು ಅನಿವಾಸಿ ಕನ್ನಡಿಗರ ಕಾರ್ಡ್ ನೀಡಲಾಗುತ್ತಿದೆ. ಇಲ್ಲೇ ಇರುವವರಿಗೆ ಈ ಐಡಿ ಕಾರ್ಡ್ ನೀಡಲು ಬರುವುದಿಲ್ಲ. ಸಂಬಂಧಿಸಿದ ಇಲಾಖೆಗಳಿಗೆ ತಮ್ಮ ಮನವಿ ಕಳುಹಿಸಲಾಗುವುದು, ಇತರೆ ಏನೇ ತೊಂದರೆಗಳಿದ್ದರೂ ಮನವಿ ನೀಡುವಂತೆ ತಿಳಿಸಿದರು.
ಸಮಿತಿ ಸದಸ್ಯ ಕಾರ್ಯದರ್ಶಿ ಪಿ.ಲಕ್ಷ್ಮಮ್ಮ ಮಾತನಾಡಿ, ವಿದೇಶಕ್ಕೆ ತೆರಳುವ ಭಾರತೀಯರು ಏಜೆನ್ಸಿ ಅಧಿಕೃತವೋ ಅಲ್ಲವೋ ಎಂದು ವಿದೇಶಾಂಗ ಸಚಿವಾಲಯದ ಜಾಲತಾಣದಲ್ಲಿ ಪರಿಶೀಲಿಸಬೇಕು. ಹೊರ ದೇಶಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಅಥವಾ ನೌಕರಿ ಮಾಡಲು ತೆರಳುವವರು ಮುನ್ನ ಕುಟುಂಬದವರಿಗೆ ಏಜೆನ್ಸಿ, ಕಂಪನಿ, ಶಿಕ್ಷಣ ಸಂಸ್ಥೆ, ವಾಸವಿರುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಮತ್ತು ಅನಿವಾಸಿ ಭಾರತೀಯ ಸಮಿತಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು ಎಂದರು.ಸಾಮಾನ್ಯವಾಗಿ ಹೊಟ್ಟೆಪಾಡಿಗಾಗಿ ವಿದೇಶಕ್ಕೆ ತೆರಳುವವರಿಗೆ ಸಮಸ್ಯೆಗಳು ಹೆಚ್ಚಾಗಿ ಎದುರಾಗುತ್ತವೆ. ಉದ್ಯೋಗದಾತರು ಅವರ ವೀಸಾ, ಪಾಸ್‍ಪೋರ್ಟ್ ಕೊಡದೇ ದೌರ್ಜನ್ಯವೆಸಗುವುದು, ವಸ್ತುಗಳ ನಷ್ಟ, ಇತರೆ ಸಮಸ್ಯೆ ಅನುಭವಿಸುತ್ತಾರೆ. ಅವರ ಡಾಟಾ ಇದ್ದರೆ ಸಮಿತಿಯಿಂದ ಸಹಾಯ ಮಾಡಬಹುದು ಆದ್ದರಿಂದ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಕೆಲಸಗಾರರು ಸಮಿತಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಅನೇಕರಿಗೆ ಅರಿವು ಇಲ್ಲ. ಜಿಲ್ಲಾಡಳಿತದ ಸಹಕಾರದಿಂದ ಈ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲು ಸಿದ್ಧ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ , ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ, ಎಸಿ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ಅನಿವಾಸಿ ಕನ್ನಡಿಗರು ಇದ್ದರು.